

ಅಬುಧಾಬಿ: ಐಪಿಎಲ್ 13ನೇ ಆವೃತ್ತಿಗೆ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ೋಷಿಸಿದ್ದ ಎಂಎಸ್ ಧೋನಿ, ಟೂರ್ನಿಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಪ್ಲೇಆಫ್ ಹಂತಕ್ಕೇರಲು ವಿಫಲರಾದ ಬಳಿಕ ಐಪಿಎಲ್‌ನಿಂದಲೂ ನಿವೃತ್ತಿಯಾಗಲಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ ಭಾನುವಾರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಹಾಲಿ ಟೂರ್ನಿಯ ಕೊನೇ ಪಂದ್ಯದಲ್ಲಿ ಆಡುವುದಕ್ಕೆ ಮುನ್ನ ಸಿಎಸ್‌ಕೆ ನಾಯಕ ಧೋನಿ, ಮುಂದಿನ ವರ್ಷದ ಐಪಿಎಲ್‌ನಲ್ಲೂ ಆಡುವುದನ್ನು ಖಚಿತಪಡಿಸಿದ್ದಾರೆ.
ಪಂದ್ಯದ ಟಾಸ್ ವೇಳೆ ಟಿವಿ ನಿರೂಪಕ ಹಾಗೂ ಕಿವೀಸ್ ಮಾಜಿ ವೇಗಿ ಡ್ಯಾನಿ ಮೊರಿಸನ್, ‘ಇದು ಸಿಎಸ್‌ಕೆ ಪರ ನಿಮ್ಮ ಕೊನೇ ಪಂದ್ಯವೇ?’ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಯಾಗಿ ಧೋನಿ, ‘ಖಂಡಿತವಾಗಿಯೂ ಇಲ್ಲ’ ಎಂದುತ್ತರಿಸಿದರು. ಇದರಿಂದ 39 ವರ್ಷದ ಧೋನಿ ಮುಂದಿನ ವರ್ಷದ ಐಪಿಎಲ್‌ನಲ್ಲೂ ಮತ್ತೆ ಸಿಎಸ್‌ಕೆ ತಂಡದ ಹಳದಿ ಜೆರ್ಸಿಯಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.
ಧೋನಿ 2021ರ ಐಪಿಎಲ್‌ನಲ್ಲೂ ಆಡುವುದನ್ನು ಖಚಿತಪಡಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷದ ಐಪಿಎಲ್ ಟೂರ್ನಿ 2021ರ ಏಪ್ರಿಲ್-ಮೇನಲ್ಲಿ ಭಾರತದಲ್ಲೇ ನಡೆಯುವ ನಿರೀಕ್ಷೆ ಇದೆ.
ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಸಿಎಸ್‌ಕೆ ತಂಡ ಇದೇ ಮೊದಲ ಬಾರಿಗೆ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿದೆ. ಈ ಮುನ್ನ ಧೋನಿ ಸಾರಥ್ಯದಲ್ಲಿ ಆಡಿದ 10 ಬಾರಿಯೂ ಕನಿಷ್ಠ ಪ್ಲೇಆಫ್ ಅಥವಾ ಸೆಮಿಫೈನಲ್ ಹಂತಕ್ಕೇರಿತ್ತು. 2016-17ರಲ್ಲಿ 2 ಆವೃತ್ತಿಗಳಲ್ಲಿ ನಿಷೇಧದಿಂದಾಗಿ ಆಡಿರಲಿಲ್ಲ.