

ಧಾರವಾಡ:ಮುಂಗಾರು ಮಳೆ ವಿಳಂಬ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗುವ ಸಾಧ್ಯತೆ ಇದೆ. ಇದರ ಮಧ್ಯೆ ಅಂತರ್ಜಲ ಮಟ್ಟವೂ ಕುಸಿಯುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 3 ಮೀಟರ್‌ನಷ್ಟು ಅಂತರ್ಜಲದ ಸ್ಥಿರ ಮಟ್ಟ ಕುಸಿದಿದೆ. ಇದರ ದುಷ್ಪರಿಣಾಮ ಕೊಳವೆ ಬಾವಿಗಳ ಮೇಲಾಗುತ್ತಿದ್ದು, ಕೊಳವೆ ಬಾವಿ ನೆಚ್ಚಿಕೊಂಡ ನೀರಾವರಿ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಕಲಘಟಗಿ, ಅಳ್ನಾವರ ತಾಲೂಕು ಹಾಗೂ ಧಾರವಾಡ ತಾಲೂಕಿನ ಪಶ್ಚಿಮ ಭಾಗದ ಪ್ರದೇಶಗಳಲ್ಲಿ ಅರಣ್ಯದ ಪ್ರಮಾಣ ಹೆಚ್ಚಿದೆ. ಹೀಗಾಗಿ ಜಿಲ್ಲೆಯ ಈ ಭಾಗದಲ್ಲಿ ಹೆಚ್ಚು ಮಳೆಯಾಗುತ್ತದೆ. ಇದೇ ಕಾರಣಕ್ಕೆ ಈ ಪ್ರದೇಶಗಳನ್ನು ಅರೆ ಮಲೆನಾಡು ಪ್ರದೇಶ ಎಂದು ಗುರುತಿಸುತ್ತಾರೆ. ಆದರೀಗ ಇದೇ ತಾಲೂಕುಗಳಲ್ಲಿ ಅತಿ ಹೆಚ್ಚು ಅಂತರ್ಜಲ ಮಟ್ಟ ಕುಸಿದಿರುವುದು ಆತಂಕ ತಂದಿದೆ.
ಅಂತರ್ಜಲ ನಿರ್ದೇಶನಾಲಯದ ಜಿಲ್ಲಾ ಅಂತರ್ಜಲ ಕಚೇರಿಯಿಂದ ಈಗಾಗಲೇ ಅಳತೆ ಮಾಡಲಾಗಿದ್ದು, ಸದ್ಯ 10.92125 ಮೀಟರ್ ಅಂದರೆ, ಹತ್ತಿರತ್ತಿರ 11 ಮೀಟರ್‌ಗೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಸುಮಾರು 3 ಮೀಟರ್ ಗಿಂತ ಹೆಚ್ಚಿನ ಇಳಿಕೆಯಾಗಿದೆ. ಜೂನ್ ತಿಂಗಳಿನಲ್ಲಿಯೇ ದಿಢೀರ್ ಕುಸಿತ ಕಂಡು ಬಂದಿರುವುದು ಗಮನಿಸಬೇಕಾದ ವಿಷಯ.
ತಾಲೂಕುವಾರು ನೋಡುವುದಾದರೆ ಅಳ್ನಾವರ 8.23 ಮೀ., ಅಣ್ಣಿಗೇರಿ 5.44 ಮೀ., ಧಾರವಾಡ ತಾಲೂಕು 18.73 ಮೀ., ಹುಬ್ಬಳ್ಳಿ ನಗರ 12.32 ಮೀ., ಹುಬ್ಬಳ್ಳಿ ಗ್ರಾಮೀಣ 9.58 ಮೀ., ಕಲಘಟಗಿ ತಾಲೂಕು 16.46 ಮೀ., ಕುಂದಗೋಳ 7.41 ಮೀ., ನವಲಗುಂದ ತಾಲೂಕಿನ ಅಂತರ್ಜಲ ಮಟ್ಟ 9.2 ಮೀಟರ್‌ಗೆ ಇಳಿದಿದೆ. ಧಾರವಾಡ ಹಾಗೂ ಕಲಘಟಗಿ ತಾಲೂಕಿನಲ್ಲಿಯೇ ಕಳೆದ ವರ್ಷಕ್ಕಿಂತ ಹೆಚ್ಚಿನ ಕುಸಿತ ಕಂಡಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.
ಧಾರವಾಡ ಜಿಲ್ಲೆಯಲ್ಲಿ ಒಂದೇ ಒಂದು ನದಿ ಇಲ್ಲ. ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳಗಳು ಸಾಕಷ್ಟು ಪ್ರಮಾಣದಲ್ಲಿ ನೀರು ತುಂಬಿ ಹರಿದರೂ ಶೀಘ್ರವಾಗಿ ಖಾಲಿಯಾಗುತ್ತವೆ. ಹೀಗಾಗಿ ಈ ಹಳ್ಳಗಳಿಂದ ಅಂತರ್ಜಲ ಮಟ್ಟಕ್ಕೆ ಯಾವುದೇ ಸಹಕಾರಿಯಾಗುವುದಿಲ್ಲ. ಕಲಘಟಗಿ ಮತ್ತು ಅಳ್ನಾವರ ತಾಲೂಕಿನಲ್ಲಿ ಹೆಚ್ಚು ಕೆರೆಗಳಿವೆ. ಆದರೆ, ಈ ಸಲ ಬೇಸಿಗೆ ಹೆಚ್ಚಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಜೂನ್ ತಿಂಗಳಿಡೀ ಮಳೆಯಾಗಿಲ್ಲ. ಕೆರೆಗಳು ಬತ್ತುತ್ತಿವೆ. ಹೀಗಾಗಿ ಕೆರೆಗಳಿಂದಲೂ ಕೊಳವೆ ಬಾವಿಗಳ ಅಂತರ್ಜಲ ಮಟ್ಟಕ್ಕೆ ಯಾವುದೇ ಸಹಕಾರಿಯಾಗಿಲ್ಲ. ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯದಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಈ ಭಾಗದಲ್ಲಿರುವ ಕೊಳವೆ ಬಾವಿಗಳು ಬತ್ತುತ್ತಿವೆ.
2021ರಲ್ಲಿ ಧಾರವಾಡ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟ 8.975 ಮೀ. ಇತ್ತು. 2022ರ ಅಂತ್ಯಕ್ಕೆ ಇದು 7.5825 ಮೀ.ಗೆ ಇಳಿದಿತ್ತು. ಕೇವಲ 1 ಮೀ. ಮಾತ್ರ ಇಳಿಕೆಯಾಗಿತ್ತು. ಕಳೆದ ವರ್ಷ ಅಳ್ನಾವರದಲ್ಲಿ 4.35 ಮೀ.ನಷ್ಟು ತೀರಾ ಸನಿಹಕ್ಕೆ ಅಂತರ್ಜಲ ಮಟ್ಟ ಬಂದಿತ್ತು. ಕಲಘಟಗಿ ತಾಲೂಕಿನಲ್ಲಿಯೂ 2021-22ರಲ್ಲಿ ಅಂತರ್ಜಲಮಟ್ಟ ಚೆನ್ನಾಗಿತ್ತು. ಆದರೀಗ ಈ ತಾಲೂಕುಗಳಲ್ಲೇ ಹೆಚ್ಚಿನ ಅಂತರ್ಜಲ ಮಟ್ಟ ಕುಸಿತ ಕಂಡಿರುವುದು ಆತಂಕ ಸೃಷ್ಟಿಸಿದೆ.
ಮಳೆ ವಿಳಂಬವಾದ ಹಿನ್ನೆಲೆಯಲ್ಲಿ ಬೋರ್‌ವೆಲ್ ನಂಬಿ ಶೇಂಗಾ ಬಿತ್ತನೆ ಮಾಡಿದ್ದೆವು. ಆರಂಭದಲ್ಲಿ ಚೆನ್ನಾಗಿ ಬರುತ್ತಿದ್ದ ನೀರಿನ ಪ್ರಮಾಣ ಈಗ ಅರ್ಧದಷ್ಟು ಕಡಿಮೆಯಾಗಿದೆ. ಹೀಗೆ ಆದರೆ ಪೂರ್ತಿ ನೀರು ಬಂದ್ ಆಗುತ್ತೇನೋ ಎನ್ನುವ ಆತಂಕ ಕಾಡುತ್ತಿದೆ.ಕಲ್ಮೇಶ ಕಮಲಾಪುರ ರೈತ
ಅಳತೆ ಹೇಗೆ?
ಜಿಲ್ಲೆಯ ಅಂತರ್ಜಲ ಮಟ್ಟವನ್ನು ಅಳೆಯುವ ಕೆಲಸವನ್ನು ಅಂತರ್ಜಲ ನಿರ್ದೇಶನಾಲಯದ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿಗಳ ನೇತೃತ್ವದಲ್ಲಿ ನಡೆಯುತ್ತದೆ. ಇದಕ್ಕಾಗಿ ಇಲಾಖೆಯಿಂದ ಜಿಲ್ಲೆಯಲ್ಲಿ ಒಟ್ಟು 33 ಕೊಳವೆ ಬಾವಿ ಹಾಗೂ 3 ತೆರೆದ ಬಾವಿಗಳಿವೆ. 30 ಕೊಳವೆ ಬಾವಿಗಳಿಗೆ ಟೆಲಿ ಮೀಟರ್ ಅಳವಡಿಸಿರುತ್ತಾರೆ. ನೀರಿನ ಮಟ್ಟವನ್ನು ಇವುಗಳು ಪ್ರತಿ ಆರು ತಾಸಿಗೊಮ್ಮೆ ತಿಳಿಸುತ್ತವೆ. ಪ್ರತಿ ಆರು ತಾಸಿಗೊಮ್ಮೆ ಸಿಗುವ ಡೇಟಾವನ್ನು ಇಲಾಖೆಯ ಅಧಿಕಾರಿಗಳು ನಮೂದಿಸಿಕೊಳ್ಳುತ್ತಾರೆ. ಹಾಗೆ ನಮೂದಿಸಲಾಗಿರುವ ಡೇಟಾ ಪ್ರಕಾರ, ಜೂನ್ ತಿಂಗಳಿನಲ್ಲಿಯೇ ಅತೀ ವೇಗವಾಗಿ ಅಂತರ್ಜಲ ಮಟ್ಟ ಇಳಿಕೆಯಾಗಿದೆ.