

ಬೆಳ್ತಂಗಡಿ: ಪತ್ತನಾಜೆಯೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ಮೇಳದ ತಿರುಗಾಟ ಕ್ಷೇತ್ರದಲ್ಲಿ ಮೂರು ದಿನಗಳ ಸೇವೆಯಾಟದೊಂದಿಗೆ ಸಮಾಪನಗೊಂಡಿತು.
ಮೇಳದ ಶ್ರೀ ಮಹಾಗಣಪತಿಯನ್ನು ಪತ್ತನಾಜೆಯಂದು ಸಂಭ್ರಮದ ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ಅಮೃತವರ್ಷಿಣಿ ಸಭಾಮಂಟಪದಲ್ಲಿ ಭಾನುವಾರ ‘ಹನುಮೋದ್ಭವ ಇಂದ್ರಜಿತು ರಕ್ತರಾತ್ರಿ’ ಪ್ರಸಂಗ, ಸೋಮವಾರ ‘ರಿಜನ್ಮ ಮೋಕ್ಷ’ ಪ್ರಸಂಗ ಹಾಗೂ ಮಂಗಳವಾರ ‘ದಕ್ಷಯಜ್ಞ ಗಿರಿಜಾ ಕಲ್ಯಾಣ’ ಪೌರಾಣಿಕ ಪ್ರಸಂಗಗಳ ಯಕ್ಷಗಾನ ಸೇವೆಯಾಟದೊಂದಿಗೆ ಪ್ರಸಕ್ತ ಸಾಲಿನ ಯಕ್ಷಗಾನ ತಿರುಗಾಟ ಸಮಾಪ್ತಿಗೊಂಡಿತು.
ಮೇಳದ ಹಿರಿಯ ಕಲಾವಿದರಾಗಿದ್ದ ಕೆ.ಗೋವಿಂದ ಭಟ್ ಅವರು ಅತಿಥಿ ಕಲಾವಿದರಾಗಿ ಪಾತ್ರ ನಿರ್ವಹಿಸಿದ್ದರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಮೇಳದ ಯಜಮಾನರಾದ ಡಿ.ಹರ್ಷೇಂದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು, ಮೇಳದ ಕಲಾವಿದರು, ಭಕ್ತರು, ಸೇವೆಯಾಟದ ಸೇವಾರ್ಥಿಗಳ ಕುಟುಂಬ ಭಾಗವಹಿಸಿದ್ದರು.