

ಹುಣಸೂರು: ಮಹಿಳೆಯರು ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ವೇದಿಕೆ ಒದಗಿಸಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಎಚ್.ವೈ.ಮಹದೇವ್ ಅಭಿಪ್ರಾಯಪಟ್ಟರು.
ನಗರದ ಗುರುಬೂದಿ ಮಂಗಳಮಂಟಪದಲ್ಲಿ ಶುಕ್ರವಾರ ಚಿಕ್ಕಹುಣಸೂರು ವಲಯ ವ್ಯಾಪ್ತಿಯ ಒಕ್ಕೂಟಗಳ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಅಡುಗೆ ಮನೆಗೆ ಸೀಮಿತಗೊಳ್ಳದೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಲು ಧರ್ಮಸ್ಥಳ ಯೋಜನೆ ನೆರವಾಗಿದೆ. ಮಹಿಳೆಯರು ಶೈಕ್ಷಣಿಕವಾಗಿಯೂ ಅಭಿವೃದ್ಧಿ ಹೊಂದುವತ್ತ ಗಮನ ನೀಡಬೇಕು. ಮುಕ್ತ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪಡೆಯುವ ಅವಕಾಶವಿದ್ದು, ಓದಿನ ಕಡೆಗೆ ಗಮನ ಕೇಂದ್ರೀಕರಿಸುವುದು ಉತ್ತಮ ಬೆಳವಣಿಗೆ ಎಂದರು.
ನಗರಸಭೆ ಸದಸ್ಯೆ ಸೌರಭ ಸಿದ್ದರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎಚ್.ಎಲ್.ಮುರುಳಿಧರ್, ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಯೋಜನೆಯ 2ನೇ ಕಚೇರಿಯ ಯೋಜನಾಧಿಕಾರಿ ಧನಂಜಯ, ವಲಯ ಮೇಲ್ವಿಚಾರಕ ಸತೀಶ್, ನಗರಸಭೆ ಸದಸ್ಯ ಮಂಜು ಮತ್ತು ವಿವಿಧ ಹೋಬಳಿ ಸಂಘಟನೆಯ ಅಧ್ಯಕ್ಷರು ಉಪಸ್ಥಿತರಿದ್ದರು.