

ಇದಕ್ಕೆ ಹಾಲು ಮತ್ತು ಬೆಲ್ಲ ಸೇರಿಸಿ ಕೊಡುವುದೂ ಉತ್ತಮ. ಹಾಲಿಗೆ ಬಾದಾಮಿ, ಅಕ್ರೂಟ್, ಖರ್ಜೂರ ಹಾಕಿ ಕುಡಿಯಬೇಕು. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಎರಡೆರಡು ಚಮಚ ಎಕ್ಸ್ಟ್ರಾ ವರ್ಜಿನ್ ಕೋಕೋನಟ್ ಆಯಿಲ್ ಸೇವಿಸುವುದರಿಂದ ಮಿದುಳು ಚುರುಕಾಗಿರುತ್ತದೆ. ಇದು ದೇಹದಲ್ಲಿನ ಅನೇಕ ಸಮಸ್ಯೆಗಳನ್ನು ಹತೋಟಿ ಮಾಡುವಲ್ಲಿಯೂ ಸಹಕಾರಿ. ತುಪ್ಪವು ಮಿದುಳಿನ ಆಹಾರ. ಅದನ್ನು ಸಹ ಸೇವಿಸುವುದು ಒಳ್ಳೆಯದು.
ಊಟ ಮಾಡುವಾಗ ಅಥವಾ ಆಹಾರ ಸೇವಿಸುವಾಗಲೂ ಓದುವ ಅಭ್ಯಾಸ ಅನೇಕರಿಗಿರುತ್ತದೆ. ಆ ಅಭ್ಯಾಸ ಒಳ್ಳೆಯದಲ್ಲ. ಮೊದಲು ಎರಡು ತುತ್ತು ಸಿಹಿ ಅಂಶವಿರುವ ಆಹಾರಪದಾರ್ಥ ಸೇವನೆ, ನಂತರ ತಂಬುಳಿಯಂತಹ ಸೌಮ್ಯ ಪದಾರ್ಥದ ಸೇವನೆ, ನಂತರದಲ್ಲಿ ಸಾಂಬಾರು - ಈ ರೀತಿಯ ಪದ್ಧತಿ ಒಳ್ಳೆಯದು. ವಾಯು ಉತ್ಪತ್ತಿ ಮಾಡುವ ಕೋಸು, ಆಲೂಗಡ್ಡೆ ಇತ್ಯಾದಿ ಪದಾರ್ಥಗಳ ಬದಲಾಗಿ ಹೀರೆಕಾಯಿ, ಪಡವಲಕಾಯಿ, ಮೂಲಂಗಿ, ಕ್ಯಾರೆಟ್ನಂತಹ ತರಕಾರಿಗಳ ಬಳಕೆ ಉತ್ತಮ.
ಮಕ್ಕಳ ಆಹಾರಪದಾರ್ಥಗಳಲ್ಲಿ ಹಸಿ ಮೆಣಸಿನಕಾಯಿಯ ಬಳಕೆಯನ್ನು ಕಡಿಮೆ ಮಾಡುವುದು, ಸಾಂಬಾರ ಪದಾರ್ಥಗಳನ್ನು ಬಳಕೆ ಮಾಡುವುದು, ತೆಂಗಿನ ಉತ್ಪನ್ನಗಳನ್ನು ಹೆಚ್ಚಿಸುವುದು, ಕರಿದ ಆಹಾರ ಪದಾರ್ಥಗಳು, ಬೇಕರಿ ತಿನಿಸುಗಳನ್ನು ತ್ಯಜಿಸುವುದು, ಕಡೆದ ಮಜ್ಜಿಗೆಯನ್ನು ಕುಡಿಸುವುದು ಒಳ್ಳೆಯದು.
ಎಷ್ಟೇ ಹೆಚ್ಚಿನ ಓದಿನ ಆವಶ್ಯಕತೆ ಇದ್ದರೂ ದಿನಕ್ಕೆ 5ರಿಂದ 10 ನಿಮಿಷ ಕಪಾಲಭಾತಿ ಕ್ರಿಯೆಯನ್ನು ಮಾಡುವುದರಿಂದ ಮಿದುಳಿಗೆ ಚೈತನ್ಯ ಸಿಕ್ಕಿ ಓದಿದ್ದನ್ನು ನೆನಪಿಸಿಕೊಳ್ಳಲು, ಲವಲವಿಕೆಯಿಂದಿರಲು ಸಹಾಯವಾಗುತ್ತದೆ. ಅತೀ ಹೆಚ್ಚಿನ ಸಮಯ ಓದಿದ ನಂತರ ವಿಶ್ರಾಂತಿ ತೆಗೆದುಕೊಳ್ಳಲು ಅನೇಕರು ಟಿ.ವಿ., ಮೊಬೈಲ್ಗಳನ್ನು ಆಶ್ರಯಿಸುವುದನ್ನು ಇತ್ತೀಚಿನ ದಿನಗಳಲ್ಲಿ ನಾವು ಕಾಣುತ್ತಿದ್ದೇವೆ. ಆದರೆ ಇದು ಖಂಡಿತ ಒಳ್ಳೆಯದಲ್ಲ.
ಹೆಚ್ಚು ಹೊತ್ತು ಓದಿದ ನಂತರ ಹಸಿರು ತುಂಬಿದ ವಾತಾವರಣದಲ್ಲಿ ಓಡಾಡುವುದರಿಂದ ಮಿದುಳಿಗೆ ನಿಜವಾದ ವಿಶ್ರಾಂತಿ ದೊರೆಯುತ್ತದೆ. ಹೆಚ್ಚು ಗಾಳಿ ಆಡುವಂತಹ ಜಾಗದಲ್ಲಿ ಓದು ಇರಲಿ. ಇದರಿಂದ ಆಮ್ಲಜನಕ ಚೆನ್ನಾಗಿ ದೊರೆಯುತ್ತದೆ.
ಇನ್ನೂ ಅನೇಕರು ಓದಿದ ನಂತರ ಒತ್ತಡವಾಗಿದೆ ಎಂಬ ಕಾರಣಕ್ಕೆ ಬಿಸಿನೀರಿನ ತಲೆಸ್ನಾನವನ್ನು ಮಾಡುತ್ತಾರೆ. ಇದು ಸರಿಯಲ್ಲ. ಎಷ್ಟೋ ವಿದ್ಯಾರ್ಥಿಗಳು ಓದುವ ಭರದಲ್ಲಿ ತಮ್ಮ ನೈಸರ್ಗಿಕ ಕ್ರಿಯೆಗಳನ್ನು ತಡೆಯುತ್ತಾರೆ. ಮಲ, ಮೂತ್ರ ವಿಸರ್ಜನೆ ಮಾತ್ರವಲ್ಲ, ಊಟ-ತಿಂಡಿ ಜೊತೆಗೆ ನಿದ್ರೆ - ಇವುಗಳಿಂದ ದೇಹ-ಮನಸ್ಸು ಎರಡೂ ಒತ್ತಡಕ್ಕೆ ಒಳಗಾಗಿ ಪರೀಕ್ಷೆ ಬರೆಯುವಾಗ ಓದಿದ್ದು, ನೆನಪಾಗದೆ ಇರುವಂತಹ ಸಮಸ್ಯೆಗೆ ಒಳಗಾಗುತ್ತಾರೆ.
ಇನ್ನಿತರ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅಭ್ಯಾಸ ಮಾಡುವುದರಿಂದ ಪರೀಕ್ಷೆಯಲ್ಲಿ ಒಳ್ಳೆಯ ಪ್ರಗತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕೇವಲ ಅಂಕಗಳಿಕೆಯೊಂದೇ ಜೀವನದಲ್ಲಿ ಸಾಲದು. ಸಾಮಾನ್ಯ ತಿಳಿವಳಿಕೆಯೂ ಬೇಕು. ತಿಳಿವಳಿಕೆಗಾಗಿ ಓದು ಇದ್ದಾಗ ಒಳ್ಳೆಯ ಅಂಕವೂ ದೊರೆಯುತ್ತದೆ.