ಸಂದೀಪ್ ಸಾಲ್ಯಾನ್ ಬಂಟ್ವಾಳ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯಾದ ಅಮೃತ ಭಾರತ್ ಯೋಜನೆಯಡಿ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಹೊಸರೂಪ ನೀಡಲಾಗುತ್ತಿದ್ದು, 28.49 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಈಗಾಗಲೇ ಕಾಮಗಾರಿ ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು, ಶೀಘ್ರವೇ ಹೊಸ ರೂಪದೊಂದಿಗೆ ಕಾಣಿಸಿಕೊಳ್ಳಲಿದೆ.
ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಕೆಲವು ಸಮಯದ ಬಳಿಕ ಕಾಮಗಾರಿಗಳು ನಿಧಾನಗತಿ ಪಡೆದುಕೊಂಡಿದ್ದವು. ಈ ಕುರಿತು ಸಾರ್ವಜನಿಕರಿಂದ ದೂರು ಸ್ವೀಕರಿಸಿದ ಹಿನ್ನೆಲೆಯಲ್ಲಿ ಸ್ವತಃ ಜನಪ್ರತಿನಿಧಿಗಳೇ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳ ಜತೆಗೆ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಕಾಮಗಾರಿಗೆ ವೇಗ ನೀಡಿದ್ದರು.
ಪ್ರಸ್ತುತ ಭಾಗಶಃ ಕೆಲಸಗಳು ಪೂರ್ಣಗೊಳ್ಳುತ್ತಾ ಬಂದಿದ್ದು, ಶೀಘ್ರವೇ ಪ್ರಯಾಣಿಕರ ಬಳಕೆಗೆ ಲಭ್ಯವಾಗಲಿದೆ. ಬಂಟ್ವಾಳ ರೈಲ್ವೆ ನಿಲ್ದಾಣದ ಅಭಿವೃದ್ಧಿ ಆರಂಭಗೊಂಡಲ್ಲಿಂದ ರೈಲು ಪ್ರಯಾಣಿಕರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದ್ದು, ರೈಲ್ವೆ ಅಧಿಕಾರಿಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಜತೆಗೆ, ಬಂಟ್ವಾಳ ರೈಲು ನಿಲ್ದಾಣ ಪ್ರಮುಖ ನಿಲ್ದಾಣಗಳ ಪೈಕಿ ಒಂದು.
ಹೊಸ ನಿಲ್ದಾಣದ ರೂಪುರೇಷೆ
ಸಾಕಷ್ಟು ಸ್ಥಳವಕಾಶದೊಂದಿಗೆ ಮುಂಗಡ ಬುಕ್ಕಿಂಗ್ ಸಹಿತ ಟಿಕೆಟ್ ಕೌಂಟರ್ ನಿರ್ಮಾಣವಾಗುತ್ತಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ವ್ಯವಸ್ಥೆ ಇದೆ. ಒಂದು ಕೆಫೆಟೀರಿಯಾ ಸಹಿತ ನಾಲ್ಕು ಕ್ಯಾಟರಿಂಗ್ ಸ್ಟಾಲ್‌ಗಳು ಇರಲಿವೆ. ಪ್ರತಿಯೊಂದು ಪ್ಲಾಟ್‌ಫಾರ್ಮ್‌ನಲ್ಲೂ ಸುಸಜ್ಜಿತ ಶೌಚಗೃಹ ನಿರ್ಮಿಸಲಾಗಿದೆ. ಸ್ಟೇಷನ್ ಕಟ್ಟಡಕ್ಕೆ ಗ್ರಾನೈಟ್ ನೆಲಹಾಸು, ಬೇರೆಡೆಗೆ ಕಾಂಕ್ರೀಟ್, ಟೈಲ್ಸ್ ಅಳವಡಿಕೆಯಾಗುತ್ತಿದೆ. ಪ್ಲಾಟ್‌ಫಾರ್ಮ್ ಉದ್ದಕ್ಕೂ ಶೆಲ್ಟರ್ ನಿರ್ಮಾಣವಾಗುತ್ತಿದೆ. ಸಂಪೂರ್ಣ ನಿಲ್ದಾಣಕ್ಕೆ ಸಿಸಿಟಿವಿ ಅಳವಡಿಕೆ, ವೈಫೈ ಸೌಲಭ್ಯ ಒದಗಿಸುವ ಯೋಜನೆ ಇದೆ. ಎಲ್‌ಇಡಿ ಪರದೆ ಮೂಲಕ ರೈಲುಗಳ ಮಾಹಿತಿ ನೀಡುವ ಕುರಿತು ಯೋಜನೆ ರೂಪಿಸಲಾಗಿದೆ.

ನಿಲ್ದಾಣ ವಿದ್ಯುದ್ದೀಕರಣಕ್ಕೆ ವ್ಯವಸ್ಥೆ
ಸ್ಟೇಷನ್‌ನ ಮುಖದ್ವಾರ ನಿರ್ಮಾಣ ನಡೆಯುತ್ತಿದ್ದು, ರೈಲ್ವೆ ನಿಲ್ದಾಣ ಸಂಪೂರ್ಣ ವಿದ್ಯುದ್ದೀಕರಣಕ್ಕೆ ಅಗತ್ಯ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ವಿದ್ಯುತ್ ರೈಲು ಓಡಾಟ ಆರಂಭಗೊಂಡರೆ, ಈ ರೈಲ್ವೆ ನಿಲ್ದಾಣದಲ್ಲಿ ಪೂರಕ ವ್ಯವಸ್ಥೆಗಳು ದೊರಕುತ್ತವೆ. ಬಂಟ್ವಾಳದ ರೈಲ್ವೆ ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳು ದುಪ್ಪಟ್ಟು ಪ್ರಮಾಣದಲ್ಲಿ ದೊರೆಯಲಿದೆ.
ಬಂಟ್ವಾಳದಲ್ಲಿ ಅಮೃತ್ ಭಾರತ್ ಯೋಜನೆಯಡಿ ರೈಲು ನಿಲ್ದಾಣದ ಅಭಿವೃದ್ದಿ ಕಾರ್ಯ ಪ್ರಗತಿಯಲ್ಲಿದೆ. ಆದಷ್ಟು ಶೀಘ್ರ ಮುಗಿಸುವ ಭರವಸೆ ಇದೆ. ಜತೆಗೆ ಅಮೃತ್ ಭಾರತ್ ಯೊಜನೆಯಡಿ ಆರಂಭಗೊಂಡ ರೈಲು ನಿಲ್ದಾಣಗಳ ಕೆಲಸವೂ ಪ್ರಗತಿಯಲ್ಲಿವೆ.
ಕ್ಯಾ.ಬ್ರಿಜೇಶ್ ಚೌಟ ಸಂಸದ
ಅಮೃತ ಭಾರತ್ ಯೋಜನೆಯಡಿ ಕಾಮಗಾರಿ
ವರ್ಚುವಲ್ ಮೂಲಕ ಉದ್ಘಾಟಿಸಿದ್ದ ಪ್ರಧಾನಿ
ಭಾಗಶಃ ಕಾರ್ಯಗಳು ಮುಕ್ತಾಯ
ಉತ್ತಮ ವ್ಯವಸ್ಥೆಗಳೊಂದಿಗೆ ಶೀಘ್ರವೆ ಸೇವೆಗೆ ಲಭ್ಯ