ಮಹಿಳಾ ಸಬಲೀಕರಣದಿಂದ ದೇಶದ ಅಭಿವೃದ್ಧಿ

bank
ಅಂಗನವಾಡಿ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ಆರ್ಥಿಕ ಸಾಕ್ಷರತೆ ಕಾರ್ಯಾಗಾರವನ್ನು ಬಿ.ಆರ್.ಶಂಕರಪ್ಪ ಉದ್ಘಾಟಿಸಿದರು. ಶಶಿರೇಖಾ, ಕಾಂತೇಶ್, ಸಿ.ಗಂಗೂಬಾಯಿ, ಬಿ.ಚಂದ್ರಶೇಖರ್ ಮುಂತಾದವರಿದ್ದರು.
Published on

ಶಿವಮೊಗ್ಗ: ಮಹಿಳಾ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹಾಗಾಗಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಆರ್‌ಬಿಐ ಅನೇಕ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಚಂದ್ರಶೇಖರ್ ತಿಳಿಸಿದರು.

ಜಿಲ್ಲಾಡಳಿತ, ಆರ್‌ಬಿಐ, ಲೀಡ್ ಬ್ಯಾಂಕ್, ವಾರ್ತಾ ಇಲಾಖೆ ಸಹಯೋಗದಲ್ಲಿ ಮಂಗಳವಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ಆರ್ಥಿಕ ಸಾಕ್ಷರತೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಅಭಿವೃದ್ಧಿ ಹೊಂದಬೇಕು ಎಂಬುದು ಆರ್‌ಬಿಐ ಮುಖ್ಯ ಉದ್ದೇಶ. ಅದಕ್ಕಾಗಿ ಈ ವರ್ಷ ಹಣಕಾಸು ಯೋಜನೆ ಕುರಿತು ಫೆ.28ರವರೆಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಕಾರ ಕ್ಷೇತ್ರದಲ್ಲಿರುವವರಿಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಮನೆ ನಿರ್ವಹಣೆ ಮಾಡುವವರು ಮಹಿಳೆಯರೇ ಆಗಿರುವುದರಿಂದ ಅವರಿಗೆ ಆರ್ಥಿಕ ಯೋಜನೆ ಬಹಳ ಮುಖ್ಯ. ಸಂಬಳದಲ್ಲಿ ಉಳಿತಾಯ ಮಾಡುವುದನ್ನು ಕಲಿಯಬೇಕು. ಅನಾವಶ್ಯಕವಾಗಿ ಖರ್ಚು ಮಾಡಬಾರದು. ಇಲ್ಲದಿದ್ದರೆ ಜೀವನದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

ಆರ್ಥಿಕ ಸಾಕ್ಷರತಾ ಸಲಹೆಗಾರ ಬಿ.ಆರ್.ಶಂಕರಪ್ಪ ಮಾತನಾಡಿ, ಮಹಿಳೆಯರಲ್ಲಿ ಮಾನಸಿಕ ಸ್ಥೈರ್ಯ ಮೂಡಬೇಕು. ಸರ್ಕಾರ ಸಾಕಷ್ಟು ಯೋಜನೆಗಳನ್ನು ಮಹಿಳೆಯರಿಗೆ ನೀಡಿದ್ದು ಅದರ ಜತೆಗೆ ಸಾಲ ಸೌಲಭ್ಯ ನೀಡುತ್ತಿದೆ. ಉಳಿತಾಯ, ಹೂಡಿಕೆಯನ್ನು ಮಹಿಳೆಯರು ಜಾಗ್ರತೆಯಿಂದ ನಿರ್ವಹಿಸಬೇಕು. ಬ್ಯಾಂಕ್‌ನೊಂದಿಗೆ ವ್ಯವಹಾರ ಶುದ್ಧವಾಗಿರಬೇಕು. ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿಸಬೇಕೆಂದು ಹೇಳಿದರು.

ರೂರಲ್ ಸೆಲ್ಫ್ ಎಂಪ್ಲಾಯ್‌ಮೆಂಟ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್‌ನ ಕಾಂತೇಶ್ ಮಾತನಾಡಿ, ಮೊದಲು ನಾವು ಉಳಿತಾಯ ಮಾಡುವುದನ್ನು ಕಲಿಯಬೇಕು. ನಂತರ ಅದನ್ನು ಹೂಡಿಕೆ ಮಾಡಬೇಕು. ದುಡಿಮೆ ಇಲ್ಲದಿದ್ದರೆ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ಯಾವುದೇ ಉದ್ಯೋಗ ಸಿಗದಿದ್ದರೆ ಸ್ವಂತ ಉದ್ಯೋಗ ಮಾಡಲು ಯೋಚಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಗಂಗೂಬಾಯಿ, ಲೀಡ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಬಿ.ಹೊನ್ನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net