

ಕುಂದಾಪುರ: ಗ್ರಾಮೀಣ ಜನರ ಜೀವನೋಪಾಯಕ್ಕಾಗಿ ವರದಾನವಾದ ನರೇಗಾ ಯೋಜನೆಯು ಗ್ರಾಮಾಂತರ ಪ್ರದೇಶಗಳ ಜೀವನಾಡಿಯಾಗಿರುವ ಕೆರೆ, ಮದಗಗಳ ಪುನರುಜ್ಜೀವನಕ್ಕೂ ಸದ್ಬಳಕೆಯಾಗುತ್ತಿದ್ದು, ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಕಳೆದ ವರ್ಷ(2024-25ನೇ ಸಾಲಿನಲ್ಲಿ) ನರೇಗಾ ಯೋಜನೆಯಡಿ 50 ಪಾಳುದ್ದ ಕೆರೆಗಳಿಗೆ ಮರುಜೀವ ನೀಡುವ ಕಾರ್ಯ ನಡೆದಿದೆ.
ಹೂಳು ತುಂಬಿ, ಕಸಕಡ್ಡಿಗಳು, ದಟ್ಟವಾಗಿ ಬೆಳೆದಿದ್ದ ಹುಲ್ಲು, ಗಿಡಗಳನ್ನು ತೆರವು ಮಾಡಿ ಕೆರೆಗಳ ಆಳವನ್ನು ವಿಸ್ತರಿಸುವ ಮೂಲ ಅಭಿವೃದ್ಧಿಪಡಿಸಲಾಗುತ್ತಿದೆ. ಆಳ ಮಾಡುವ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ. ಉಭಯ ತಾಲೂಕುಗಳ ಪಾಳು ಬಿದ್ದ ಕೆರೆ, ಮದಗಗಳನ್ನು ಅಭಿವದ್ಧಿಪಡಿಸುವ ಮೂಲಕ ಆ ಭಾಗದ ಅಂತರ್ಜಲ ಮಟ್ಟ ವೃದ್ಧಿಸುವ ಮಹತ್ವಾಕಾಂಕ್ಷೆ ಇದರ ಉದ್ದೇಶವಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳ ಕೃಷಿ ಭೂಮಿ, ಬಾವಿಗಳ ಅಂತರ್ಜಲ ಮಟ್ಟವೂ ಸುಧಾರಣೆಯಾಗುವ ನಿರೀಕ್ಷೆಯಿದೆ.
ಪುನರುಜ್ಜೀವನ ಕಾರ್ಯ: ನರೇಗಾ ಯೋಜನೆಯಡಿ ಕೆರೆಗಳನ್ನು ಪುನರುಜ್ಜೀವನಗೊಳಿಸಿರುವುದು ಉತ್ತಮ ಬೆಳವಣಿಗೆ. ಇದೇ ರೀತಿಯಲ್ಲಿ ಉಭಯ ತಾಲೂಕುಗಳಲ್ಲಿರುವ ಇನ್ನೂ ಕೆಲವು ಗ್ರಾಪಂಗಳಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯಬೇಕಿದ್ದು, ಇದರಿಂದ ಮುಂಬರುವ ದಿನಗಳಲ್ಲಿ ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳ ಕೃಷಿ ಭೂಮಿ, ಬಾವಿಗಳ ಅಂತರ್ಜಲ ಮಟ್ಟವೂ ಸುಧಾರಣೆ ಮಾಡುವ ಪ್ರಯತ್ನ ಆಗಬೇಕಿದೆ.
ಕುಂದಾಪುರ ತಾಲೂಕಿನಲ್ಲಿ ಕಳೆದ ವರ್ಷ ಒಟ್ಟು 37 ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ಕೈಗೊಂಡಿದ್ದು, ಈ ಪೈಕಿ ಈಗಾಗಲೇ 20 ಕೆರೆಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ. ಆಲೂರು ಗ್ರಾಪಂ ವ್ಯಾಪ್ತಿಯಲ್ಲಿ ಗರಿಷ್ಠ 8 ಕೆರೆಗಳನ್ನು ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. 5 ಕೆರೆಗಳು ಪೂರ್ಣಗೊಂಡಿವೆ. 3 ಕೆರೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಹಂಗಳೂರಿಲ್ಲಿ 7 ಕೆರೆಗಳು, ಹಕ್ಲಾಡಿಯಲ್ಲಿ 6, ಕಂದಾವರ 3, ಕಟ್‌ಬೆಲ್ತೂರಿನಲ್ಲಿ 2 ಕೆರೆಗಳು, ಗುಲ್ವಾಡಿಯಲ್ಲಿ 1 ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಬೈಂದೂರು ತಾಲೂಕಿನಲ್ಲಿ 13 ಕೆರೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ. ನಾಡದಲ್ಲಿ ಗರಿಷ್ಠ 4 ಕೆರೆಗಳು, ಹೇರೂರಲ್ಲಿ 3 ಕೆರೆ, ಉಪ್ಪುಂದ, ಕಿರಿಮಂಜೇಶ್ವರದಲ್ಲಿ ತಲಾ 2, ಬಿಜೂರು, ಕೆರ್ಗಾಲಿನಲ್ಲಿ ತಲಾ ಒಂದೊಂದು ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ನರೇಗಾದಡಿ ಹೂಳು ತುಂಬಿ, ಕಸ, ಕಡ್ಡಿ, ದಟ್ಟವಾಗಿ ಗಿಡ, ಹುಲ್ಲು ಬೆಳೆದಿರುವ ಕೆರೆಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ ಪುನಶ್ಚೇತನ ಮಾಡಲಾಗಿದೆ. ಗ್ರಾಮೀಣ ಜನರ ಜೀವನೋಪಾಯಕ್ಕಾಗಿ ವರದಾನವಾದ ನರೇಗಾ ಯೋಜನೆಯು, ಗ್ರಾಮಾಂತರ ಪ್ರದೇಶಗಳ ಜೀವನಾಡಿಯಾಗಿರುವ ಕೆರೆಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತಿರುವುದು ಉತ್ತಮ ಬೆಳವಣಿಗೆ. -ರಾಜೇಶ ದೇವಾಡಿಗ, ಆಲೂರು ಗ್ರಾ.ಪಂ. ಅಧ್ಯಕ್ಷ https://www.vijayavani.net/sewerage-mess-at-trasi-junction https://www.vijayavani.net/kalya-mallayabettu-kuntadi-connection-road