

ಗುರುಪುರ: ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ನಿಧಿಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಹಾಲಿ ಮೇಯರ್ ಮನೋಜ್ ಕುಮಾರ್ ಅನುದಾನ ಬಿಡುಗಡೆಗೆ ಸಹಕರಿಸಿದ್ದಾರೆ. ಸ್ಥಳೀಯರ ಬಹುದಿನದ ಬೇಡಿಕೆ ಈಡೇರಿಸಲಾಗುತ್ತಿದೆ. ಸ್ಥಳೀಯವಾಗಿ ಪಾಲಿಕೆಯ ನಿಧಿಯಿಂದಲೇ ವಿವಿಧ ಅಭಿವೃದ್ಧಿ ಕಾರ್ಯ ನೆರವೇರಿಸುವ ಅನಿವಾರ್ಯತೆ ಎದುರಾಗಿದೆ ಎಂದು ಶಾಸಕ ಡಾ.ವೈ ಭರತ್ ಶೆಟ್ಟಿ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಂಗ್ರಕೂಳೂರು ಕೋಡುದಬ್ಬು ದೈವಸ್ಥಾನ ರಸ್ತೆಯನ್ನು 55 ಲಕ್ಷ ರೂ.ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದ್ದು ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯಕಿರಣ್ ಕುಮಾರ್ ಕೋಡಿಕಲ್ ಪ್ರಾಸ್ತಾವಿಸಿ, ಮಳೆಗಾಲ ಸಹಿತ ಇಲ್ಲಿನ ರಸ್ತೆ ಕೆಸರಿನಿಂದ ಕೂಡಿದ್ದು ದೈವಸ್ಥಾನ, ಬಡಾವಣೆಯಿರುವ ಸ್ಥಳವಾಗಿದೆ. ಶಾಸಕರಲ್ಲಿ ಮನವಿ ಮಾಡಿದ ಮೇರೆಗೆ ಪಾಲಿಕೆಯಲ್ಲಿ ಅನುದಾನ ಮೀಸಲಿರಿಸಿ ಇದೀಗ ಕಾಮಗಾರಿ ಆರಂಭಗೊಂಡಿದೆ ಎಂದರು.
ಮೇಯರ್ ಮನೋಜ್ ಕುಮಾರ್ ಕೋಡಿಕಲ್, ನಿಕಟ ಪೂರ್ವ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರಮುಖರಾದ ಉಮೇಶ್ ಮಲರಾಯನ ಸಾನ, ನವನೀತ್ ಕೋಟ್ಯಾನ್, ಲತೀಶ್, ಕೋಡದಬ್ಬು ದೈವಸ್ಥಾನದ ಪ್ರಮುಖರು, ಗುತ್ತಿಗೆದಾರ ಕೆ.ಸಿ., ಬಡವಾಣೆ ನಿವಾಸಿಗಳು ಉಪಸ್ಥಿತರಿದ್ದರು.