

ಹುಳಿಯಾರು: ಪುಸ್ತಕದ ಮುಂದೆ ತಲೆ ತಗ್ಗಿಸಿದರೆ ಪ್ರಪಂಚದ ಮುಂದೆ ತಲೆ ಎತ್ತುವಂತೆ ಮಾಡುತ್ತದೆ. ಮೊಬೈಲ್ ಮುಂದೆ ತಲೆ ಎತ್ತಿದರೆ ತಲೆ ತಗ್ಗಿಸುವಂತೆ ಮಾಡುತ್ತದೆ ಎಂದು ಬೋರನಕಣಿವೆ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ವಿ.ಎಚ್.ರೇವಣ್ಣ ತಿಳಿಸಿದರು.
ಹುಳಿಯಾರು ಹೋಬಳಿಯ ಬೋರನಕಣಿವೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವರ್ಗಾವಣೆಗೊಂಡ ಉಪನ್ಯಾಸಕರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಪನ್ಯಾಸಕಿ ಟಿ.ಆರ್.ವರಮಹಾಲಕ್ಷಿ$್ಮ ಮಾತನಾಡಿ, ವಿದ್ಯೆ ಸಾಧಕನ ಸೊತ್ತೆ ಹೊರತು ಸೋಮಾರಿಗಳ ಸೊತ್ತಲ್ಲ. ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಒಂದಲ್ಲ ಒಂದು ದಿನ ಪ್ರತಿಫಲ ಕೊಡುತ್ತದೆ ಎನ್ನುವುದನ್ನು ವಿದ್ಯಾರ್ಥಿಗಳು ಮನಗಂಡು ಕಲಿಕೆಯಲ್ಲಿ ತೊಡಗಬೇಕು ಎಂದರು.
ಎಚ್.ಬಿ.ತುಂಗಾ, ಡಿ.ಎಸ್.ಪ್ರೇಮಾ, ಕೆ.ಎಸ್.ಗಗನ, ಎಚ್.ಭೂಮಿಕಾ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ವಿದ್ಯಾರ್ಥಿಗಳಾದ ಸಿ.ಕೆ.ಯೋಗೀಶ್, ಬಿ.ಕೆ.ಯಶವಂತ ಕುಮಾರ್, ಎ.ವಿ.ನರಸಿಂಹಮೂರ್ತಿ, ಬಿ.ಡಿ.ರಂಗಸ್ವಾಮಿ, ಎನ್.ಅಜಯ್ ಕುಮಾರ್, ಕೃಷ್ಣಪ್ಪ, ಕಾಂಚನಾ, ಹಂಸಾ, ರೇಣುಕಾಪ್ರಸಾದ್, ಮೋಹನ್ ಕುಮಾರಿ ಇದ್ದರು.