

ಹಾಸನ: ಮಾಜಿ ಪ್ರಧಾನಿ ದೇವೇಗೌಡರು ನನಗಿಂತ 15 ವರ್ಷ ಹಿರಿಯರು. ಅವರು ಅಷ್ಟೆ ಘನತೆಯಿಂದ ಮಾತಾಡಬೇಕಿತ್ತು. ಯಾವತ್ತೂ ಗರ್ವ ತೋರಿಸದ ನನಗೆ, "ಸಿದ್ದರಾಮಯ್ಯ ಅವರ ಗರ್ವಭಂಗ ಮಾಡ್ತೀನಿ" ಎಂದರು. ಇದನ್ನು ನೀವು ಒಪ್ಪಿಕೊಳ್ಳುತ್ತೀರಾ, ಸಹಿಸುತ್ತೀರಾ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ಜನರನ್ನು ಪ್ರಶ್ನಿಸಿದರು.
ಹಾಸನದಲ್ಲಿ ಗುರುವಾರ(ಡಿ.05) ನಡೆದ ಬೃಹತ್ ಜನಕಲ್ಯಾಣೋತ್ಸವ ಸಮಾವೇಶವದಲ್ಲಿ ಮಾತನಾಡಿದರು.
ಹಾಸನದ ಹೆಣ್ಣು ಮಕ್ಕಳು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ರೈತರ ಪಾಲಿನ ಸಾಲದಲ್ಲಿ ಶೇ58 ರಷ್ಟನ್ನು ಕಡಿತಗೊಳಿಸಿದೆ. ಇದರಿಂದ ಹಾಸನದ ರೈತರು ಮತ್ತು ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಮಗ ಎಂದುಕೊಂಡಿರುವ ಕುಮಾರಸ್ವಾಮಿ ಏಕೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ. ನಬಾರ್ಡ್ ನಿಂದ ಆಗಿರುವ ಅನ್ಯಾಯವನ್ನು ಎಚ್ಡಿಕೆ ಏಕೆ ಸರಿಪಡಿಸುತ್ತಿಲ್ಲ? ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆಗಿರುವ 11 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯಕ್ಕೆ ಕೊಡಿಸಲು ಬಿಜೆಪಿ-ಜೆಡಿಎಸ್ ಏಕೆ ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು.
ದೇವೇಗೌಡರು ರಾಜಕೀಯವಾಗಿ ಒಕ್ಕಲಿಗ ನಾಯಕರನ್ನು ನಿರಂತರವಾಗಿ ಮುಗಿಸುತ್ತಿದ್ದಾರೆ. ಬಚ್ಚೇಗೌಡರು, ವೈ.ಕೆ.ರಾಮಯ್ಯ, ಬೈರೇಗೌಡರು, ಕೃಷ್ಣಪ್ಪ, ಚಲುವರಾಯಸ್ವಾಮಿ ಸೇರಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ದೇವೇಗೌಡರು ರಾಜಕೀಯವಾಗಿ ಮುಗಿಸಿದರು. ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಅವರು ಆಗಲೇ ಈ ಪಾಪದ ಹೊರೆಯನ್ನು ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಈಗ ಒಕ್ಕಲಿಗ ನಾಯಕ ಕೃಷ್ಣಪ್ಪ ಅವರ ಮಾತು ನಿಜವಾಗಿದೆ ಎಂದರು.
ನಾನು ಮತ್ತು ಜಾಲಪ್ಪ ಒಟ್ಟಾಗಿ ರಾಮಕೃಷ್ಣಹೆಗಡೆಯವರ ಬದಲಿಗೆ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದೆವು. ಆಮೇಲೆ ನನ್ನನ್ನೇ ಪಕ್ಷದಿಂದ ಉಚ್ಚಾಟಿಸಿದರು ಎಂದರು.
ನಾವು ಐದು ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಜನರ ಖಾತೆಗೆ ನೇರವಾಗಿ ಹಾಕುತ್ತಿದ್ದೇವೆ. ಈ ಐದು ಗ್ಯಾರಂಟಿಗಳನ್ನು ಪಡೆಯುತ್ತಿರುವ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ದೊಡ್ಡ ಜನದ್ರೋಹಿಗಳು ಎಂದರು.
ಕೇಂದ್ರದಲ್ಲಿ ಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿಯವರು ಮೇಕೆದಾಟು ವಿಚಾರದಲ್ಲಿ ಮೌನ ಆಗಿರುವುದು ಏಕೆ? ಬೆಂಗಳೂರಿನ ಜನತೆಗೆ ನೀರು ಬೇಕಾಗಿದೆ. ಕೊಡಿಸಲಿ ಎಂದು ಸವಾಲು ಹಾಕಿದರು.
ಹಾಸನ ಮತ್ತೆ ಕಾಂಗ್ರೆಸ್ ತೆಕ್ಕೆಗೆ
ಕಾಂಗ್ರೆಸ್ ಸರ್ಕಾರ ಮಾತ್ರ ಸುಭದ್ರ ಸರ್ಕಾರ ಕೊಡಲು ಸಾಧ್ಯ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿಗಳಿಸಲಿದೆ. ಇದು ಶತಸಿದ್ದ ಎಂದು ಭರವಸೆ ವ್ಯಕ್ತಪಡಿಸಿದರು.