ಆಸಿಸ್​​ ವಿರುದ್ಧ ಹೀನಾಯ ಸೋಲು: ಕೋಚ್​ ಸ್ಥಾನದಿಂದ ಗೌತಮ್​ ಗಂಭೀರ್​ಗೆ ಗೇಟ್​ಪಾಸ್​? Gautam Gambhir

Gautam Gambhir
Published on

Gautam Gambhir : ಬಾರ್ಡರ್​-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಒಂಬತ್ತು ವರ್ಷಗಳ ಪ್ರಾಬಲ್ಯ ಅಂತ್ಯಗೊಂಡಿದೆ. ಟೀಮ್​ ಇಂಡಿಯಾ ಈ ಬಾರಿ 1-3 ಅಂತರದಿಂದ ಸರಣಿಯನ್ನು ಕಳೆದುಕೊಂಡಿದೆ. ಇಂದು (ಜ. 5) ಮುಕ್ತಾಯವಾದ ಅಂತಿಮ ಟೆಸ್ಟ್‌ನಲ್ಲಿ ಭಾರತ ಆರು ವಿಕೆಟ್‌ಗಳಿಂದ ಸೋತಿದೆ. ಈ ಸೋಲಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದಲೂ ಹೊರಬಿದ್ದಿದೆ. ಇದೇ ಮೊದಲ ಬಾರಿಗೆ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಭಾರತ ವಿಫಲವಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲಿನ ಹಿನ್ನಲೆಯಲ್ಲಿ ಟೀಮ್​ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಜೊತೆಗೆ ಹಲವು ಹಿರಿಯ ಆಟಗಾರರ ವೃತ್ತಿ ಜೀವನದ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಅದರಲ್ಲೂ ಟೀಮ್​​ ಇಂಡಿಯಾದ ಮುಖ್ಯ ಕೋಚ್ ಸ್ಥಾನದಿಂದ ಗಂಭೀರ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಗಂಭೀರ್ ಅವರನ್ನು ಅತ್ಯಂತ ಕೆಟ್ಟ ಕೋಚ್ ಎಂದು ಕರೆಯುತ್ತಿದ್ದಾರೆ. ಗಂಭೀರ್ ಕೋಚ್​ ಆಗಿ ಬಂದು ಟೀಮ್​ ಇಂಡಿಯಾವನ್ನು ಸರ್ವನಾಶ ಮಾಡಿದರು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಮತ್ತು ತಮ್ಮ ಕೆಟ್ಟ ತಂತ್ರಗಳಿಂದ ಟೀಮ್ ಇಂಡಿಯಾವನ್ನು ಹಾಳು ಮಾಡಿದ್ದಾರೆ ಎಂದು ಗಂಭೀರ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಗಂಭೀರ್​ ಆಗಮನಕ್ಕೂ ಮೊದಲು, ಟೀಮ್​ ಇಂಡಿಯಾ ಎಲ್ಲ ಫಾರ್ಮ್ಯಾಟ್‌ಗಳಲ್ಲಿ ಸತತ ಗೆಲುವುಗಳೊಂದಿಗೆ ಉನ್ನತ ಸ್ಥಾನದಲ್ಲಿತ್ತು. ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಭಾರತ ತಂಡ 2024ರ ಟಿ20 ವಿಶ್ವಕಪ್ ಗೆದ್ದಿತ್ತು. ಅದರ ಬೆನ್ನಲ್ಲೇ ಗಂಭೀರ್ ಅವರು ದ್ರಾವಿಡ್ ಅವರಿಂದ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡರು. ಇದಾದ ಬಳಿಕ ಶ್ರೀಲಂಕಾ ವಿರುದ್ಧ ನಡೆದ ಟಿ20 ಸರಣಿಯನ್ನು ಭಾರತ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. ಇದಾದ ಬಳಿಕ ಗಂಭೀರ್ ಅವರ ವೈಫಲ್ಯ ಶುರುವಾಯಿತು. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಭಾರತ 0-2 ಅಂತರದಿಂದ ಸೋತಿತು.

ಶ್ರೀಲಂಕಾ ಸರಣಿಯ ಬಳಿಕ ಟೀಮ್​ ಇಂಡಿಯಾ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಹಾಗೂ ಟಿ20 ಸರಣಿಯನ್ನು ಗೆದ್ದುಕೊಂಡಿತ್ತು. ಆ ಬಳಿಕ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲನುಭವಿಸಿತ್ತು. ಮೂರು ಪಂದ್ಯಗಳ ಟೆಸ್ಟ್​ ಸರಣಿಯನ್ನು 0-3 ಅಂತರದಿಂದ ಕಳೆದುಕೊಂಡಿತು. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಇಂತಹ ಹೀನಾಯ ಸೋಲು ಕಂಡಿದ್ದು ಇದೇ ಮೊದಲು. ಕಿವೀಸ್​ ವಿರುದ್ಧ ಅನುಭವಿಸಿದ ಹೀನಾಯ ಸೋಲನ್ನು ಮರೆಯುವ ಮುನ್ನವೇ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಭಾರತ ಸೋಲನ್ನು ಅನುಭವಿಸಿದೆ. ಈ ಸರಣಿಯಲ್ಲಿ ಮೊದಲ ಟೆಸ್ಟ್ ಗೆದ್ದ ನಂತರ, ಟೀಮ್​ ಇಂಡಿಯಾ 3 ನೇ ಟೆಸ್ಟ್​ ಅನ್ನು ಡ್ರಾ ಮಾಡಿಕೊಂಡಿತು. ಆದರೆ, ಉಳಿದ ಮೂರು ಪಂದ್ಯಗಳಲ್ಲಿ ಸೋಲುಗಳನ್ನು ಎದುರಿಸಿತು. ಸಾಲು ಸಾಲು ಸೋಲುಗಳು ಎದುರಾಗಿರುವ ಹಿನ್ನೆಲೆಯಲ್ಲಿ ಗಂಭೀರ್​ ಅವರ ಕೋಚ್​ ಸ್ಥಾನದ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಗಂಭೀರ್​ ಅವರಿಗೆ ಬಿಸಿಸಿಐ ಗೇಟ್​ಪಾಸ್​ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ, ಸಿಡ್ನಿ ಟೆಸ್ಟ್‌ನಲ್ಲಿ ಭಾರತ ನೀಡಿದ ಗುರಿಯನ್ನು ಆಸೀಸ್ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಬೆನ್ನಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 185 ರನ್‌ಗಳಿಗೆ ಆಲೌಟ್ ಆಯಿತು. ರಿಷಭ್ ಪಂತ್ (40) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆಸೀಸ್ ಪರ ಸ್ಕಾಟ್ ಬೋಲ್ಯಾಂಡ್ ನಾಲ್ಕು ವಿಕೆಟ್ ಪಡೆದು ಅಗ್ರ ಬೌಲರ್ ಎನಿಸಿಕೊಂಡರು. ನಂತರ ಆಸೀಸ್ ಮೊದಲ ಇನಿಂಗ್ಸ್‌ನಲ್ಲಿ 181 ರನ್‌ಗಳಿಗೆ ಆಲೌಟ್ ಆಗಿತ್ತು. ಬ್ಯೂ ವೆಬ್‌ಸ್ಟರ್ (57) ಅರ್ಧಶತಕ ಗಳಿಸಿದರು. ಭಾರತದ ಪರ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಮೂರು ವಿಕೆಟ್ ಪಡೆದರು.

ನಾಲ್ಕು ರನ್​ಗಳ ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ 157 ರನ್​ಗಳಿಗೆ ಆಲೌಟ್ ಆಗಿ ಭಾರಿ ನಿರಾಸೆ ಮೂಡಿಸಿತು. ರಿಷಭ್ ಪಂತ್ (61) ಅವರ ಅರ್ಧಶತಕ ಇಲ್ಲದಿದ್ದರೆ ಭಾರತ ಮೂರಂಕಿಯ ಸ್ಕೋರ್ ಕೂಡ ಗಳಿಸಲು ಸಾಧ್ಯವಾಗುತ್ತಿರಲಿಲ್ಲ. 162 ರನ್​ಗಳ ಗುರಿ ಬೆನ್ನತ್ತಿದ ಆಸೀಸ್, ಗೆಲುವಿನ ನಗೆ ಬೀರಿತು. ಆಸೀಸ್ ಇನ್ನಿಂಗ್ಸ್‌ನಲ್ಲಿ ಉಸ್ಮಾನ್ ಖವಾಜಾ 41, ಟ್ರಾವಿಸ್ ಹೆಡ್ 34 ಮತ್ತು ಬ್ಯೂ ವೆಬ್‌ಸ್ಟರ್ 39 ರನ್ ಗಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net