ದೇವದುರ್ಗದಲ್ಲಿ ಸರಣಿ ಕಳ್ಳತನ

12-DVD-4
Published on

ದೇವದುರ್ಗ: ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಕಳ್ಳತನಗಳಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ದೇವದುರ್ಗ, ಅರಕೇರಾ, ಜಾಲಹಳ್ಳಿ, ಆಲ್ಕೋಡ್ ಸೇರಿ ವಿವಿಧೆಡೆ ಮನೆ ಹಾಗೂ ಬೈಕ್ ಕಳ್ಳತನ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಆಲ್ಕೋಡ್ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಾಗರಾಜ ಎಂಬುವವರು ಮನೆಮುಂದೆ ನಿಲ್ಲಿಸಿದ್ದ ಸ್ಪ್ಲೆಂಡರ್ ಬೈಕ್ ಕಳ್ಳತನ ಮಾಡಲಾಗಿದೆ. ಕೆಲತಿಂಗಳ ಹಿಂದೆ ಜಾಲಹಳ್ಳಿಯಲ್ಲಿ ಯಂಕಪ್ಪ ಉಪ್ಪಾರಗೆ ಸೇರಿದ್ದ ಸ್ಕೂಟಿ ಕಳ್ಳತನ ಮಾಡಲಾಗಿತ್ತು. ಅರಕೇರಾದಲ್ಲಿ ಬುಲೆಟ್ ಕಳ್ಳತನವಾಗಿದ್ದು ಇದುವರೆಗೆ ಪತ್ತೆಯಾಗಿಲ್ಲ. ದೇವದುರ್ಗ ಬಸ್‌ನಿಲ್ದಾಣದಲ್ಲಿ ಹಿರಿಯ ಪತ್ರಕರ್ತರೊಬ್ಬರು ನಿಲ್ಲಿಸಿದ್ದ ಹೊಂಡಶೈನ್ ಬೈಕ್ ಕಳ್ಳತನವಾಗಿತ್ತು.

ಕೆಲ ತಿಂಗಳ ಹಿಂದೆ ಆಲ್ಕೋಡ್ ಗ್ರಾಮದಲ್ಲಿ ಮನೆಗಳ್ಳತನ, ಜಾಲಹಳ್ಳಿ, ಅರಕೇರಾದಲ್ಲಿ ಸರಣಿ ಮನೆಗಳ್ಳತನ ನಡೆದಿದ್ದವು. ಆಲ್ಕೋಡ್ ಗ್ರಾಮದಲ್ಲಿ ನಾಗರಾಜ ಮಾಲಿಪಾಟೀಲ್ ಮನೆಯಲ್ಲಿ ಕಳ್ಳತನವಾಗಿತ್ತು. ಸಿಎಸ್‌ಸಿ ಕೇಂದ್ರದಲ್ಲಿ 2 ಲಕ್ಷ ರೂ. ನಾಲ್ಕು ತೊಲ ಬಂಗಾರ ಕಳ್ಳತನವಾಗಿತ್ತು.
ಜಾಲಹಳ್ಳಿ ಪೊಲೀಸ್ ಠಾಣೆ ಮುಂಭಾಗದಲ್ಲಿನ ಮೊಬೈಲ್ ಶಾಪ್‌ನಲ್ಲಿ ಕಳ್ಳರು ಕೈಚಳಕ ತೋರಿಸಿದ್ದರು. ಜಾಲಹಳ್ಳಿಯಲ್ಲಿ ಕಿರಾಣಿ ಅಂಗಡಿ, ಪಾನ್‌ಶಾಪ್, ಹೋಟೆಲ್‌ಗಳಲ್ಲಿ ಸರಣಿ ಕಳ್ಳತನ ನಡೆದಿದ್ದವು. ಇದರಿಂದ ಬೇಸತ್ತಿದ್ದ ಜನರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು.
ತಿಂಥಣಿ ಬ್ರಿಡ್ಜ್‌ನಲ್ಲಿ ಬಸ್‌ಹತ್ತುವಾಗ ಮಹಿಳೆಯೊಬ್ಬರ 5 ತೊಲ ಬಂಗಾರ ಕಳ್ಳತನವಾಗಿತ್ತು. ಈ ಬಗ್ಗೆ ದೂರು ಪ್ರಕರಣ ದಾಖಲಾಗಿದ್ದು ಈವರೆಗೆ ಕಳ್ಳರು ಪತ್ತೆಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net