ಡಿ.15ರೊಳಗೆ ಕಾಮಗಾರಿ ಪೂರ್ಣಗೊಳಿಸಿ; ಶಾಸಕ ಕೆ.ಶಿವನಗೌಡ ನಾಯಕ ಗಡುವು

18102021 Devadurga tAluka Officer meeting
Published on


ದೇವದುರ್ಗದಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆ

ದೇವದುರ್ಗ: ವಿವಿಧ ಕಾಮಗಾರಿಗಳ ವಿಳಂಬ ಪ್ರಶ್ನಿಸಿ ಶಾಸಕ ಕೆ.ಶಿವನಗೌಡ ನಾಯಕ ತಾಲೂಕು ಮಟ್ಟದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಪಟ್ಟಣ ಪ್ರವಾಸಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಸೇರಿ ಸಚಿವರಿಗೆ ಮನವಿ ಮಾಡಿ, ವಿವಿಧ ಇಲಾಖೆಯಿಂದ ಕಾಮಗಾರಿ ತಂದಿದ್ದೇನೆ. ಸಮರ್ಪಕವಾಗಿ ಅನುಷ್ಠಾನ ಮಾಡಿ, ಜಾರಿಗೆ ತರುವುದು ನಿಮ್ಮ ಕೆಲಸ. ಪಿಡಬ್ಲುಡಿ ವಿರುದ್ಧ ಸಾರ್ವಜನಿಕರಿಂದ ಹಲವು ದೂರು ಕೇಳಿಬರುತ್ತಿವೆ. ಕಾಮಗಾರಿ ವಿಳಂಬ, ಕಳಪೆ ಹಾಗೂ ಸಮಯ ಪಾಲನೆ ಮಾಡುತ್ತಿಲ್ಲ ಎನ್ನುವ ಬಗ್ಗೆ ಆರೋಪಗಳಿವೆ. ನಿರ್ಲಕ್ಷ್ಯ ಮುಂದುವರಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆದರೆ, ಕಾಮಗಾರಿ ವೇಗ ಪಡೆದಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚು ಕುಳಿತಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ. ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಿಮಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬೇರೆ ಕಡೆ ವರ್ಗಾವಣೆ ಮಾಡಿಕೊಳ್ಳಿ. ಇಲ್ಲವೆ ನಿವೃತ್ತಿ ಪಡೆದುಕೊಳ್ಳಿ ಎಂದು ಚಾಟಿ ಬೀಸಿದರು.

220ಕೆವಿ ಕೆಇಬಿ ಮಂಜೂರಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದ ಸ್ಥಾಪನೆಯಾಗಿಲ್ಲ. ನೀಲವಂಜಿ, ಅಮರಾಪುರ, ಮಸರಕಲ್‌ನಲ್ಲಿ ಸ್ಥಳ ಪರಿಶೀಲನೆ ಮಾಡಲಾಗಿದೆ. ಘಟಕ ಸ್ಥಾಪನೆ ಯಾಕೆ ವಿಳಂಬವಾಗುತ್ತಿದೆ ಎನ್ನುವುದು ಗೊತ್ತಿಲ್ಲ. ಪಟ್ಟಣ ದಿನೇದಿನೆ ಬೆಳೆಯುತ್ತಿದ್ದು, ವಿದ್ಯುತ್‌ಗೆ ಬೇಡಿಕೆ ಹೆಚ್ಚಿದೆ. ಜೆಸ್ಕಾಂ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಿ ಘಟಕ ಸ್ಥಾಪಿಸಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net