ದೇವದುರ್ಗ: ಶಾಲೆಗಳಲ್ಲಿ ಬಿಸಿಯೂಟ ನೌಕರರಿಗೆ ಎಸ್ಡಿಎಂಸಿ, ಮುಖ್ಯಶಿಕ್ಷಕರು ನೀಡುತ್ತಿರುವ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಅಕ್ಷರ ದಾಸೋಹ ನೌಕರರ ಸಂಘದಿಂದ (ಸಿಐಟಿಯು ಸಂಯೋಜಿತ) ಪಟ್ಟಣದ ಬಿಇಒ ಕಚೇರಿ ವ್ಯವಸ್ಥಾಪಕ ಅಮರೇಶ ಹಿರೇಮಠ ಮೂಲಕ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಅಡುಗೆ ಸಿಬ್ಬಂದಿ ಹಾಗೂ ಸಹಾಯಕರು ಹಲವು ಸಮಸ್ಯೆಗಳ ಮಧ್ಯೆಯೇ ವಿದ್ಯಾರ್ಥಿಗಳಿಗೆ ಪೌಷ್ಟಿಕ ಹಾಗೂ ಗುಣಮಟ್ಟದ ಅಡುಗೆ ತಯಾರಿಸಿ ಉಣಬಡಿಸುತ್ತಿದ್ದಾರೆ. ಆದರೆ, ಕೆಲ ಶಾಲೆಗಳಲ್ಲಿ ಎಸ್ಡಿಎಂಸಿ ಹಾಗೂ ಮುಖ್ಯಶಿಕ್ಷಕರು ಕಿರುಕುಳ ನೀಡುತ್ತಿದ್ದು, ಕೆಲಸ ಮಾಡದಂಥ ಸ್ಥಿತಿ ಇದೆ. ಸರ್ಕಾರ ನೌಕರರಿಗೆ ಸಮರ್ಪಕ ವೇತನ ನೀಡದೆ ಬಾಕಿ ಉಳಿಸಿಕೊಂಡಿರುವುದರಿಂದ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಡುಗೆ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಮಸರಕಲ್, ಮಲ್ಲಾಪುರ, ಪಾತ್ರಗುಡ್ಡ ಸೇರಿ ಕೆಲವು ಶಾಲೆಗಳ ಎಸ್ಡಿಎಂಸಿ ಹಾಗೂ ಮುಖ್ಯಶಿಕ್ಷಕರಿಗೆ ಕಡಿವಾಣ ಹಾಕಿ, ಭದ್ರತೆ ಒದಗಿಸಬೇಕು. ಬಾಕಿ ವೇತನ ಪಾವತಿಸಿ, ನಿವೃತ್ತ ನೌಕರರಿಗೆ ಇಡುಗಂಟು ಹಾಗೂ ಬೇಸಿಗೆ ರಜೆಯಲ್ಲಿ ಅಡುಗೆ ಮಾಡಿದವರಿಗೆ ಸಂಭಾವನೆ ನೀಡಬೇಕು. ನಿರ್ಲಕ್ಷ್ಯ ತೋರಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.