

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ರಾಜ್ಯದಲ್ಲಿ ದೇವದಾಸಿ ಮಕ್ಕಳ ಮದುವೆಗೆ ಅನುದಾನ ಕೊರತೆಯಿಂದ ಪ್ರೋತ್ಸಾಹ ಧನ ಸಿಗದೇ ,ನವವಿವಾಹಿತರು ಒಂದೆಡೆ ಸಮಾಜಕ್ಕೆ - ಹೆತ್ತವರಿಗೂ ಭಾರವಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಇವಾಗ ಸರ್ಕಾರವೂ ತಿರಸ್ಕಾರ ಭಾವದಿಂದ ನೋಡುವಂತಹ ಪ್ರಸಂಗ ಎದುರಾಗಿ ಸಂಕಷ್ಟಕ್ಕೆ ಒಳಗಾಗಿರುವ ಸಂಗತಿ ಜರುಗಿದೆ.
ದೇವದಾಸಿ ಮಹಿಳೆಯರ ಪುತ್ರ ಸಜಾತಿ ಅಥವಾ ಅನ್ಯ ಜಾತಿಯ ಯುವತಿಯನ್ನು ಮದುವೆ ಆಗುವುದಾದರೆ 3 ಲಕ್ಷ ರೂ. ಹಾಗೂ ದೇವದಾಸಿಯ ಮಗಳು ಸಜಾತಿಯ ಅಥವಾ ಅನ್ಯ ಜಾತಿಯ ಹುಡುಗನನ್ನು ವರಿಸಿದ್ದಾದರೆ 5 ಲಕ್ಷ ರೂ. ಪ್ರೋತ್ಸಾಹ ಧನ ಮಂಜೂರು ಮಾಡಲಾಗುತ್ತದೆ. ಇಂತಹ ವಿಶೇಷ ಮದುವೆಗಳು ಏರ್ಪಟ್ಟ ಕೂಡಲೇ ವಿಳಂಬ ನೀತಿಗೆ ಅವಕಾಶ ನೀಡದೆ ತಕ್ಷಣ ಪ್ರೋತ್ಸಾಹ ಧನ ಮಂಜೂರು ಮಾಡಬೇಕೆಂದು ಸಚಿವರ ಆದೇಶವಿದ್ದರೂ ಕೂಡ ಸರಿಯಾದ ವೇಳೆಗೆ ಪರಿಹಾರ ಬಾರದೇ ನವಜೋಡಿಗಳು ಸಂಕಷ್ಟಕ್ಕೆ ಒಳಗಾಗಿವೆ.
ಪುನರ್ವಸತಿ ಕಲ್ಪಿತ ದೇವದಾಸಿಯರ ಮಕ್ಕಳನ್ನು ಮದುವೆಯಾಗಲು ಆರ್ಥಿಕ ಹಾಗೂ ಕೌಟುಂಬಿಕ ಕಾರಣದಿಂದ ಹಲವರು ಹಿಂಜರಿಯುತ್ತಾರೆ. ಅದಕ್ಕೆಂದೇ ಅಂಥ ಮದುವೆಗಳಿಗೆ ರಾಜ್ಯ ಸರ್ಕಾರ 2019ರಲ್ಲಿ ಪ್ರೋತ್ಸಾಹ ಧನ ಜಾರಿಗೊಳಿಸಿತು. ಇದರಿಂದ ಕೆಲ ಕುಟುಂಬಗಳ ಆರ್ಥಿಕ ಪರಿಸ್ಥಿತಿಯು ಸುಧಾರಿಸಿತು. ಆದರೆ ಕಳೆದ ಎರಡು ವರ್ಷದಿಂದ ಅನುದಾನವಿಲ್ಲ ಇರುವುದರಿಂದ ಫಲನುಭವಿಗಳು ಸಮಾಜ ಕಲ್ಯಾಣ ಇಲಾಖೆಗೆ ನಿತ್ಯ ಅಲೆಯುತ್ತಿದ್ದಾರೆ.
ಎಷ್ಟು ಜನರಿಂದ ಅರ್ಜಿ
ರಾಜ್ಯದ 31 ಜಿಲ್ಲೆಯಲ್ಲಿ 2024 ರಿಂದ 2025 ರವರೆ ಒಟ್ಟು 6,717 ಅರ್ಜಿಗಳು ಬಂದಿದ್ದು, ಇದರಲ್ಲಿ 742 ಅರ್ಜಿಗಳು ಅನುಮೋದನೆಯಾಗಿದ್ದು, 2,561 ಅರ್ಜಿಗಳು ಪೇಡಿಂಗ್ ಇದ್ದು, 2,933 ಜನರಿಗೆ ಹಣ ಜಮವಾಗಿದ್ದು, 425 ಅರ್ಜಿಗಳು ತಿರಸ್ಕರವಾಗಿವೆ.
ಅದರಂತೆ ರಾಯಚೂರು ಜಿಲ್ಲೆಯಲ್ಲಿಯೇ ಕಳೆದ ಎರಡು ವರ್ಷದಲ್ಲಿ 116 ಅರ್ಜಿಗಳು ಬಂದಿದ್ದು, ಈ ಪೈಕಿ ದೇವದುರ್ಗ 24, ಲಿಂಗಸೂಗೂರು 35, ಮಾನ್ವಿಯಲ್ಲಿ 18, ರಾಯಚೂರು 8 ಹಾಗೂ ಸಿಂಧನೂರು ತಾಲೂಕಿನಲ್ಲಿ 31 ಅರ್ಜಿಗಳು ಬಂದಿದ್ದು, ಆದರೆ ಯಾವುದೇ ಅರ್ಜಿಗಳು ವಿಲೇವಾರಿಯಾಗಿಲ್ಲ. ಈ ಸಾಲಿನಲ್ಲಿ ಸರ್ಕಾರದಿಂದ ಒಟ್ಟು 5.04 ಕೋಟಿ ರೂ. ಮಾತ್ರ ಅನುದಾನ ಬಂದಿದ್ದು, ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಸಿನಿಯಾರಿಟಿ ಮೂಲಕ ಪ್ರೋತ್ಸಹ ಧನ ನೀಡಲಾಗಿದೆ. ಇನ್ನು ಕೆಲವರಿಗೆ ಸರ್ಕಾರದ ಅನುದಾನ ಕೊರತೆಯಿಂದ ಸಾಕಷ್ಟು ಅರ್ಜಿಗಳು ವಿಲೇವಾರಿಯಾಗಿಲ್ಲವೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಗುವಾದರು ಪ್ರೋತ್ಸಹ ಧನವಿಲ್ಲ
2019ಕ್ಕೂ ಮೊದಲು ಮದುವೆಯಾದ ಹಲವರಿಗೂ ಇತ್ತೀಚೆಗೆ ಮದುವೆಯಾಗಿದೆ ಎಂದು ಉಪನೋಂದಣಿ ಕಚೇರಿಗಳಲ್ಲಿ ನೋಂದಣಿ ಮಾಡಿಸಿ, ಪ್ರೋತ್ಸಾಹ ಧನ ಪಡೆಯುತ್ತಿದ್ದಾರೆ. ಅದಕ್ಕೆ ಕೆಲ ಅರ್ಹರಿಗೆ ಹಣ ಮಂಜೂರು ಆಗಲು ವಿಳಂಬವಾಗುತ್ತಿದೆ ಎಂದು ಅರ್ಜಿದಾರರು ದೂರಿದ್ದು, ಮದುವೆಯಾಗಿ ಎರಡು ವರ್ಷಗಳಾಗಿವೆ. ಒಂದು ಮಗು ಇದೆ. ಇನ್ನೂ ಪ್ರೋತ್ಸಾಹ ಧನ ಬಂದಿಲ್ಲ. ಮದುವೆ ವೇಳೆ ಸಾಲವಿತ್ತು. ಪ್ರೋತ್ಸಾಹ ಧನ ಸಿಕ್ಕಿದ್ದರೆ, ಸಾಲ ತೀರುತಿತ್ತು. ಈಗಲಾದರೂ ಸರ್ಕಾರ ನಮಗೆ ಪ್ರೋತ್ಸಾಹ ಧನ ನೀಡಲಿ ಎಂದು ಅರ್ಜಿದಾರರೊಬ್ಬರು ತಿಳಿಸಿದರು.
ವಿಮುಕ್ತ ದೇವದಾಸಿಯರ ಮಕ್ಕಳ ಮದುವೆಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ಯೋಜನೆಗೆ ಅರ್ಜಿಯನ್ನು ಅನ್‌ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ತಾಲೂಕು ಕಚೇರಿಯಿಂದ ಪಂಚಿನಾಮೆ ಮಾಡಿ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಕಳೆದ ಎರಡು ವರ್ಷದಲ್ಲಿ 5.04 ಕೋಟಿ ರೂ. ಅನುದಾನ ಬಂದಿದ್ದು ಸಿನಿಯಾರಿಟಿ ಮೂಲಕ ಫಲಾನುಭವಿಗಳಿಗೆ ಪ್ರೋತ್ಸಹಧನ ನೀಡಲಾಗಿದೆ. ಚಿದಾನಂದಪ್ಪ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ರಾಯಚೂರು