

ಕಾರವಾರ: ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೇ 3,00,226 ಯಜಮಾನಿ ಮಹಿಳೆಯರು ನೊಂದಾಯಿಸಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಹುಲಿಗೆಮ್ಮ ಕುಕನೂರು ತಿಳಿಸಿದ್ದಾರೆ.
ಪತ್ರಿಕಾ ಹೇಳಿರುವ ಅವರು, ನೋಂದಾಯಿಸಿದ ಎಲ್ಲ ಮಹಿಳೆಯರ ಅರ್ಜಿಗಳು ಪರಿಶೀಲನೆಗೊಂಡು, ಪರಿಶೀಲನೆಯಲ್ಲಿ ಅರ್ಹರೆಂದು ದೃಢಪಟ್ಟ ಮಹಿಳೆಯರ ಖಾತೆಗೆ ಹಣ ಸಂದಾಯ ಮಾಡಲು ಕ್ರಮ ವಹಿಸಲಾಗಿದೆ.
ಪ್ರಸ್ತುತ 1,17,335 ಫಲಾನುಭವಿಗಳ ಖಾತೆಗೆ ಆಗಸ್ಟ್ ತಿಂಗಳ ಧನ ಸಹಾಯವನ್ನು ಜಮಾ ಮಾಡಲಾಗಿದೆ, ಆದರೆ ತಾಂತ್ರಿಕ ತೊಂದರೆಗಳಿಂದ ಇದರಲ್ಲಿ 1,164,78 ಮಹಿಳೆಯರಿಗೆ ಮಾತ್ರ ಅವರ ಖಾತೆಗೆ ಹಣ ಜಮಾ ಆಗಿರುತ್ತದೆ.
ಇದನ್ನೂ ಓದಿ:ಶೇ.100 ಸಾಕ್ಷರ ಜಿಲ್ಲೆಯಾಗಲು ಶ್ರಮ ವಹಿಸಿ
ಗೃಹಲಕ್ಷ್ಮೀ ಯೋಜನೆಯಡಿ ಒದಗಿಸಿರುವ ಬ್ಯಾಂಕ್ ಖಾತೆಯ ಫಲಾನುಭವಿಗಳ ಆಧಾರದೊಂದಿಗೆ ಜೋಡಣೆಯಾಗದಿರುವುದರಿಂದ ಸಮಸ್ಯೆಯಾಗಿದೆ.
ಒದಗಿಸಿರುವ ಬ್ಯಾಂಕ್ ಖಾತೆಯು ನಿಷ್ಕ್ರಿಯವಾಗಿರುವುದರಿಂದ ಹಾಗೂ ಒದಗಿಸಿದ ಬ್ಯಾಂಕ್ ಖಾತೆಯೊಂದಿಗೆ ಬಹಳಷ್ಟು ಸಮಯದಿಂದ ವ್ಯವಹಾರ ಮಾಡದೇ ಇರುವುದರಿಂದ 859 ಮಹಿಳೆಯರ ಖಾತೆಗೆ ಹಣ ಜಮಾ ಆಗದೇ ಹಣ ಹಿಂದಕ್ಕೆ ಬಂದಿರುತ್ತದೆ.
ಈ ಕುರಿತು ಆಯಾಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಿ ಸರಿಪಡಿಸಿ ಹಿಂತಿರುಗಿಸಲು ಸೂಚಿಸಲಾಗಿದೆ.
ಇದರ ಜತೆಗೆ 2 ನೇ ಹಂತದಲ್ಲಿ 1,10,093 ಮಹಿಳೆಯರ ಖಾತೆಗೆ ಅಗಸ್ಟ್-2023 ರ ಮಾಹೆಯ ಧನಸಹಾಯವನ್ನು ಜಮಾ ಮಾಡುವ ಕುರಿತು ಬಿಲ್ಲನ್ನು ತಯಾರಿಸಿ ಖಜಾನೆಗೆ ಸಲ್ಲಿಸಲಾಗಿದೆ.
ಅದೂ ಸಹ ಒಂದೆರಡು ದಿನಗಳಲ್ಲಿ ಸಂಬಂಧಪಟ್ಟ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ.
ಒಟ್ಟಾರೆಯಾಗಿ ನೊಂದಾಯಿಸಿದ ಎಲ್ಲ ಅರ್ಹ ಮಹಿಳೆಯರಿಗೂ ಹಂತ-ಹಂತವಾಗಿ ಪರಿಶೀಲನೆಯಾಗಿ ಬಂದಂತೆ ಅನುದಾನ ಲಭ್ಯತೆಗನುಗುಣವಾಗಿ ಅವರ ಖಾತೆಗೆ ಧನ ಸಹಾಯವನ್ನು ಜಮಾ ಮಾಡಲು ಕ್ರಮ ವಹಿಸಲಾಗುವುದು.
ಹಾಗೆಯೇ ಹೊಸದಾಗಿ ಅರ್ಜಿಗಳನ್ನು ನೊಂದಾಯಿಸುವವರು ಸಹ ತಮ್ಮ ಅರ್ಜಿಗಳನ್ನು ಸಂಬಂಧಪಟ್ಟ ಕೇಂದ್ರಗಳಲ್ಲಿ ನೊಂದಾಯಿಸಬಹುದಾಗಿದೆ.
ಅರ್ಜಿಯನ್ನು ನೊಂದಾಯಿಸಲು ಅಂತಿಮ ದಿನಾಂಕ ನಿಗದಿಪಡಿಸಿದ್ದು ಇರುವುದಿಲ್ಲ.
ಗೃಹಲಕ್ಷ್ಮಿ ಯೋಜನೆಯ ಸದುಪಯೋಗ ಪಡೆಯಲು ಕುಟುಂಬದ ಯಜಮಾನಿಯ ಸ್ಥಾನ ಬದಲಾಯಿಸುವ ಅವಶ್ಯಕತೆಯಿದ್ದಲ್ಲಿ ಸಪ್ಟೆಂಬರ್-14 ರವರೆಗೆ ಅವಕಾಶವನ್ನು ಸಹ ವಿಸ್ತರಿಸಲಾಗಿದೆ.
ಕಾರಣ ಈ ಯೋಜನೆಯಲ್ಲಿ ನೊಂದಾಯಿಸಿದ ಹಾಗೂ ನೊಂದಾಯಿಸುತ್ತಿರುವ ಎಲ್ಲ ಮಹಿಳೆಯರು ಗೊಂದಲಕ್ಕೆ ಒಳಗಾಗದೇ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಕೋರಿದೆ.
ಹೆಸರು ನೋಂದಾಯಿಸಿ ಸಂದೇಶ ಬಾರದೇ ಇದ್ದವರು ಸಮೀಪದ ಅಂಗನವಾಡಿ ಕಾರ್ಯಕರ್ತೆಯನ್ನು ಸಂಪರ್ಕಿಸಿ, ಅಥವಾ ವೆಬ್ ಸೈಟ್ ನಲ್ಲಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.