ಒತ್ತುವರಿ ತೆರವು ನೆಪದಲ್ಲಿ ಅಡಕೆ ತೆಂಗು ನಾಶ

gubbi mar 20
Published on

ಗುಬ್ಬಿ: ದೇವಸ್ಥಾನದ ಜಾಗ ಒತ್ತುವರಿ ನೆಪದಲ್ಲಿ 150 ಅಡಕೆ ಮರ ಹಾಗೂ 50 ತೆಂಗಿನಮರಗಳನ್ನು ತಾಲೂಕು ಆಡಳಿತದ ಸಮ್ಮುಖದಲ್ಲಿ ಕಡಿದಿರುವುದರಿಂದ ತಾಲೂಕಿನ ತಿಪ್ಪೂರಿನಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ.

ತಿಪ್ಪೂರಿನ ಕೋಡಿಕೆಂಪಮ್ಮ ದೇಗುಲ ಅರ್ಚಕ ಸಣ್ಣಕೆಂಪಯ್ಯ ಇನಾಮ್ತಿ ಜಮೀನಿನಲ್ಲಿ ತೋಟ ಬೆಳೆದು 30 ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ಆದರೆ ತೋಟಕ್ಕೆ ಏಕಾಏಕಿ ಕಾಲಿಟ್ಟ ತಾಲೂಕು ಆಡಳಿತ ಮಾ.6ರಂದು ತೆಂಗು, ಅಡಕೆ ಮರಗಳನ್ನು ಉರುಳಿಸಿದೆ. ಘಟನೆಗೆ ಸಂಬಂಧಿಸಿದಂತೆ ವಾಲ್ಮೀಕಿ ನಾಯಕ ಸಮಾಜದ ನೂರಾರು ಮಂದಿ ಸೋಮವಾರ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿದರು.

ಮರಗಳನ್ನು ನೆಲಕ್ಕುರುಳಿಸಿದ ಗ್ರಾಮಲೆಕ್ಕಾಧಿಕಾರಿ ಮುರಳಿ, ಒತ್ತುವರಿ ತೆರವಿಗೆ ಆದೇಶವಿದೆ ಎಂದು ಪೊಲೀಸರ ಸಮಕ್ಷಮದಲ್ಲಿ ತೆರವು ಮಾಡಿದ್ದಾರೆ. ಯಾವುದೇ ನೋಟಿಸ್ ನೀಡದೆ ಮರಗಳನ್ನು ಕಡಿದಿರುವುದು ಅಮಾನವೀಯ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.

7 ತಾಸು ಧರಣಿ ನಡೆದರೂ ಅಹವಾಲು ಸ್ವೀಕರಿಸದ ತಹಸೀಲ್ದಾರ್ ವಿರುದ್ಧ ಪ್ರತಿಭಟನಾಕಾರರು ಘೊಷಣೆ ಕೂಗಿದರು. ಸಾರ್ವಜನಿಕರಿಗೆ ತೊಂದರೆ ಕೊಟ್ಟ ತಹಸೀಲ್ದಾರ್, ಕಂದಾಯ ನಿರೀಕ್ಷಕ ಮತ್ತು ಗ್ರಾಮಲೆಕ್ಕಿಗರನ್ನು ಅಮಾನತು ಮಾಡಬೇಕು ಮತ್ತು ಫಲಭರಿತ ಮರಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ದಾಖಲೆ ಮತ್ತು ಸ್ಥಳ ಪರಿಶೀಲನೆ ನಡೆಸಿ ಮುಂದಿನ 10 ದಿನದಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದು ಉಪವಿಭಾಗಾಧಿಕಾರಿ ಅಜಯ್ ಭರವಸೆ ನೀಡಿದರು.

ತಿಪ್ಪೂರಿನಲ್ಲಿ ನೂರಾರು ಅಡಿಕೆ, ತೆಂಗು ಮರಗಳನ್ನು ಕಡಿದಿರುವುದು ಅಕ್ಷಮ್ಯ. ಗ್ರಾಮಲೆಕ್ಕಿಗ, ತಹಸೀಲ್ದಾರ್ ವಿರುದ್ಧ ಕಾನೂನು ಕ್ರಮ ಜರುಗಿಸಿ ಬಂಧಿಸಬೇಕು. ಜಿಲ್ಲಾಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು. | ಸಚಿನ್ ಮೀಗಾ, ರಾಜ್ಯ ಕಾಂಗ್ರೆಸ್ ಕಿಸಾನ್ ಘಟಕ ಅಧ್ಯಕ್ಷ https://www.vijayavani.net/yuvaratn-film-teaser-release-on-march-17/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net