

ಗಾಂಧಿನಗರ: ಆಟಿಕೆ ಎಂದಾಕ್ಷಣ ಮೇಡ್ ಇನ್ ಚೈನಾ ಉತ್ಪನ್ನಗಳೇ ಕಣ್ಮುಂದೆ ಬರುವ ಪರಿಸ್ಥಿತಿ ಇದೆ. ಇದನ್ನು ಬದಲಾಯಿಸಲು ಭಾರತೀಯ ಸಂಸ್ಕೃತಿ, ಪರಂಪರೆ, ರಾಷ್ಟ್ರೀಯ ನಾಯಕರು, ನಾಗರೀಕತೆ ಮುಂತಾದ ವಿಷಯಗಳಿಂದ ಪ್ರೇರಣೆ ಪಡೆದು ಆಟಿಕೆ ತಯಾರಿಕೆಯಲ್ಲಿ ಹೊಸತನವನ್ನು ತರಬೇಕು. ಆಟಿಕೆಗಳ ಉದ್ಯಮ ಬೆಳೆಯಬೇಕೆಂದರೆ ಡಿಸೈನ್ ಇನ್ ಇಂಡಿಯಾ ಮತ್ತು ಇನ್ನೋವೇಟ್ ಇನ್ ಇಂಡಿಯಾ ಮಂತ್ರಗಳನ್ನು ಪಾಲಿಸಬೇಕು ಎಂದು ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ (ಐಎನ್ಎಸ್ಎ) ಅಧ್ಯಕ್ಷ ಹಾಗೂ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್(ಸಿಎಸ್ಐಆರ್)ನ ಮಾಜಿ ಡೈರೆಕ್ಟರ್ ಜನರಲ್ ಆದ ಡಾ.ರಘುನಾಥ್ ಮಶೇಲ್ಕರ್ ಕರೆ ನೀಡಿದ್ದಾರೆ.
ಗುಜರಾತಿನಲ್ಲಿ ನಡೆಯುತ್ತಿರುವ ಡಿಸೈನ್ ಕಾನ್ಫ್ಲುಯೆನ್ಸ್ನಲ್ಲಿ "ಟಾಯಿಂಗ್ ವಿತ್ ಡಿಸೈನ್" ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದ ಮಶೇಲ್ಕರ್ ಅವರು, "ಆಟಿಕೆ ತಯಾರಿಕೆ ಕ್ಷೇತ್ರದಲ್ಲಿ ಜಾಗತಿಕ ಮಾರುಕಟ್ಟೆಯ ಶೇ.80 ರಷ್ಟು ಪಾಲು ಚೀನಾದಾಗಿದ್ದರೆ, ಭಾರತದ ಪಾಲು ಕೇವಲ ಶೇ. 0.5 ರಷ್ಟಿದೆ. ಈ ಪರಿಸ್ಥಿತಿಯನ್ನು ಸುಧಾರಿಸಲು ಆತ್ಮಾವಲೋಕನ ಮಾಡಿಕೊಳ್ಳಬೇಕು, ಪ್ರಧಾನಿ ಮೋದಿ ಅವರ ವೋಕಲ್ ಫಾರ್ ಲೋಕಲ್ ಸಿದ್ಧಾಂತವನ್ನು ಆಟಿಕೆ ಉದ್ಯಮದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ" ಎಂದಿದ್ದಾರೆ.
ಭಾರತ ತನ್ನ ಮೌಲ್ಯವನ್ನು ಅರಿಯುಬೇಕು ಎಂದ ಗುಜರಾತ್ ವಿವಿ ಕುಲಪತಿ ಡಾ.ಹಿಮಾಂಶು ಪಾಂಡ್ಯ, “ಭಾರತವು ಅತಿದೊಡ್ಡ ಆಟಿಕೆ ಮಾರುಕಟ್ಟೆಯಾಗಿದೆ, ಅದರ ಬದಲಿಗೆ ಅತಿದೊಡ್ಡ ನಿರ್ಮಾತೃವಾಗಬೇಕು. ಐರನ್ ಮ್ಯಾನ್, ಹಲ್ಕ್ ಬದಲಿಗೆ ಭಾರತದ ಸೂಪರ್ ಹೀರೋಗಳಾದ ಏಕಲವ್ಯ ಮತ್ತು ಭೀಮನಂಥವರನ್ನು ಆಧರಿಸಿ ಆಟಿಕೆಗಳನ್ನು ತಯಾರಿಸಬಹುದು" ಎಂದಿದ್ದಾರೆ.
ಭಾರತದ ಆಟಿಕೆ ಮಾರುಕಟ್ಟೆ ವರ್ಷಕ್ಕೆ 7 ಸಾವಿರ ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸುತ್ತಿದ್ದು, ಅದರಲ್ಲಿ ಭಾರತೀಯ ತಯಾರಕರು ಕೇವಲ ಶೇ. 10-15 ರಷ್ಟು ಪಾಲುದಾರರಾಗಿದ್ದಾರೆ. ಆಟಿಕೆ ಉದ್ಯಮಗಳ ಬೆಳವಣಿಗೆಯಲ್ಲಿ ಆಕ್ಸಿಲಿಯರಿ ಇಂಡಸ್ಟ್ರಿಗಳು ಬೆಳೆಯುವುದಕ್ಕೂ ಸಾಕಷ್ಟು ಅವಕಾಶವಿದೆ. ಇದನ್ನು ಉದ್ದಿಮೆದಾರರು ಬಳಸಿಕೊಳ್ಳಬೇಕು ಎಂದು ಭಾರತೀಯ ಆಟಿಕೆ ತಯಾರಕರ ಒಕ್ಕೂಟದ ಅಧ್ಯಕ್ಷ ಮನೀಷ್ ಕುಕ್ರೇಜ ಹೇಳಿದ್ದಾರೆ.
ಗುಜರಾತ್ ಸರ್ಕಾರದ ಐ-ಹಬ್ ಮತ್ತು ಗಾಂಧಿನಗರದ ಕರ್ಣಾವತಿ ಯೂನಿವರ್ಸಿಟಿ ನಡೆಸುತ್ತಿರುವ ಐದು ದಿನದ 'ಅಹಮದಾಬಾದ್ ಡಿಸೈನ್ ವೀಕ್' ಸಮ್ಮೇಳನವು ಫೆಬ್ರವರಿ 7 ರವರೆಗೆ ವರ್ಚುಯಲ್ ಪ್ಲಾಟ್ಫಾರಂನಲ್ಲಿ ಲಭ್ಯವಿದೆ. ಟಾಯ್ ಡಿಸೈನಿಂಗ್ ಮತ್ತು ಗೇಮ್ ಇನೊವೇಶನ್ ತಜ್ಞರು, 15,000 ಶಾಲಾ ವಿದ್ಯಾರ್ಥಿಗಳು, 20,000 ಡಿಸೈನ್ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವೃತ್ತಿಪರರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.(ಏಜೆನ್ಸೀಸ್)