

ಕಾಸರಗೋಡು: ಡೆಪ್ಯುಟಿ ತಹಸೀಲ್ದಾರ್‌ನನ್ನು ತಡೆದು ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಸೇರಿದಂತೆ ಮೂವರಿಗೆ ಕಾಸರಗೋಡು ನ್ಯಾಯಾಲಯ ತಲಾ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಅಪರಾಧಿಗಳು ಒಂದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. 15 ವರ್ಷಗಳ ಹಿಂದೆ ಮಂಜೇಶ್ವರದಲ್ಲಿ ಹಲ್ಲೆ ಪ್ರಕರಣ ನಡೆದಿದ್ದು, ಎ.ಕೆ.ಎಂ.ಅಶ್ರಫ್, ಐಯುಎಂಎಲ್ ಕಾರ್ಯಕರ್ತ ಬಶೀರ್ ಅಬ್ದುಲ್ಲ, ಅಬ್ದುಲ್ ಖಾದರ್ ಯಾನೆ ಕಾಯಿಞಿ ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ.