ಇಲಾಖೆಗಳ ಗುದ್ದಾಟ ಅಭಿವೃದ್ಧಿ ಕುಂಠಿತ

byn
Published on

ವಿಜಯವಾಣಿ ಸುದ್ದಿಜಾಲ ಬೈಂದೂರು ಬೈಂದೂರಿನ ಸೋಮೇಶ್ವ ಬೀಚ್‌ಗೆ ಅತ್ಯಾಧುನಿಕ ವ್ಯವಸ್ಥೆಗಳ ಅಳವಡಿಸಿ ಹೊಸತನದ ಸ್ಪರ್ಶ ನೀಡಿದ್ದರೂ ಇಲಾಖೆಗಳ ನಡುವಿನ ಗುದ್ದಾಟಗಳಿಂದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಯಾಗಿರುವ ಸೋಮೇಶ್ವರ ಬೀಚ್‌ಗೆ ನಿತ್ಯವೂ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ದಶಕಗಳಿಂದ ಈ ಬೀಚ್ ಅಭಿವೃದ್ಧಿಗೆ ಬೇಡಿಕೆ ಬರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ವಿಶೇಷ ಮುತುವರ್ಜಿಯಲ್ಲಿ 10 ಕೋಟಿ ರೂ.ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ ಪ್ರವಾಸೋದ್ಯಮ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳ ಸಮನ್ವಯತೆ ಕೊರತೆಯಿಂದ ಸೋಮೇಶ್ವರ ಬೀಚ್ ಪ್ರವೇಶಿಸುವ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸಮನ್ವಯ ಕೊರತೆ ಹೇಗೆ?: ಪ್ರವಾಸೋದ್ಯಮ ಇಲಾಖೆಯ ಅಭಿವೃದ್ಧಿ ನೀಲಿನಕಾಶೆಯಲ್ಲಿ ಸೋಮೇಶ್ವರ ದೇವಸ್ಥಾನದ ರಸ್ತೆ ಕಾಂಕ್ರೀಟಿಕರಣಕ್ಕೆ ಅನುದಾನ ಮಂಜೂರಾಗಿಲ್ಲ. ದೇವಸ್ಥಾನದ ಕೆರೆ ತನಕ 60 ಸೆಂಟ್ಸ್ ಜಾಗ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಇದಕ್ಕಾಗಿಯಾದರೂ ಪ್ರವಾಸೋದ್ಯಮ ಇಲಾಖೆ ಧಾರ್ಮಿಕ ದತ್ತಿ ಇಲಾಖೆಯ ಅನುಮತಿ ಪಡೆಯಬೇಕಿದೆ. ಹೀಗಾಗಿ ಸರ್ಕಾರಕ್ಕೆ 1.24 ಕೋಟಿ ರೂ. ಕಾಮಗಾರಿ ಪ್ರಸ್ತಾವನೆ ಕಳುಹಿಸಲಾಗಿದೆ. ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಯನ್ನು ಗುತ್ತಿಗೆದಾರರು ವಿನಾ ಕಾರಣ ಅಗೆದುಹಾಕಿದ್ದು, ದೇವಳ, ಬೀಚ್‌ಗೆ ಆಗಮಿಸುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಶಾಸಕ, ಜಿಲ್ಲಾಧಿಕಾರಿ ಸಹಿತ ಜನಪ್ರತಿನಿಧಿಗಳು ಈ ಕುರಿತು ಶೀಘ್ರವೇ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಭಿವೃದ್ಧಿ ಯೋಜನೆಯಲ್ಲಿ ಏನೇನಿವೆ?

10 ಕೋಟಿ ರೂ. ಅನುದಾನದಲ್ಲಿ 152 ಮೀ. ಉದ್ದದ ರಸ್ತೆ ನಿರ್ವಾಣ, ಸಮುದ್ರಕ್ಕೆ ಇಳಿಯಲು ಮೆಟ್ಟಿಲು, ಹೈವಾಸ್ಟ್ ದೀಪ, ಸಮುದ್ರ ವೀಕ್ಷಣೆ ವಾಡಲು ಬೆಂಚುಗಳು, ಅಲಂಕಾರ ದೀಪ ಒಳಗೊಂಡಿದೆ. ನದಿ, ಸಾಗರ ಸಂಗಮದ ಜತೆಗೆ ಗುಡ್ಡದ ಮೇಲ್ಗಡೆ ಕ್ಷತಿಜ ನೇಸರಧಾಮ ಹೊಂದಿದೆ. ಕೇಂದ್ರ ಪ್ರವಾಸೋದ್ಯಮ ಸಚಿವರು ಕೂಡ ಇತ್ತೀಚೆಗೆ ಬೀಚ್ ಪ್ರದೇಶಕ್ಕೆ ಭೇಟಿ ನೀಡಿ ಸೋಮೇಶ್ವರ ಅಭಿವೃದ್ಧಿ ಬಗ್ಗೆ ಭರವಸೆ ನೀಡಿದ್ದರು.

ಸೋಮೆಶ್ವರ ದೇವಸ್ಥಾನದ ರಸ್ತೆ ಬಗ್ಗೆ ಇಲಾಖೆಗಳ ಮಧ್ಯೆ ಸಮನ್ವಯತೆ ಕೊರತೆಯಿಂದ ಇದುವರೆಗೆ ಯಾವುದೇ ಅನುದಾನ ಬರಲಿಲ್ಲ. ಆದರೂ ತಾತ್ಕಾಲಿಕ ರಸ್ತೆ ನಿರ್ವಾಣದ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಗುರುರಾಜ ಗಂಟಿಹೊಳೆ, ಬೈಂದೂರು ಶಾಸಕ ಸರ್ಕಾರದ ಅನುದಾನ ಬಳಸಿ ನಡೆಯುವ ಅಭಿವೃದ್ಧಿಗಳು ದೀರ್ಘಾವಧಿಗೊಳ್ಳದೆ ಒಂದೆರಡು ವರ್ಷದಲ್ಲಿ ಮುಗಿದರೆ ಅಂತಹ ಪ್ರದೇಶ ಅಭಿವೃದ್ಧಿಯಾಗುತ್ತದೆ. ಇಲಾಖೆ ಬಗ್ಗೆ ಗೌರವವೂ ಮೂಡುತ್ತದೆ. ಸೋಮೇಶ್ವರ ಕಾಮಗಾರಿ ಅತೀ ಶ್ರೀದಲ್ಲಿ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವಿದೆ. -ಸರ್ದಾರ್ ತಿಮ್ಮಪ್ಪ ಶೇರುಗಾರ್, ಪಡುವರಿ ಗ್ರಾಪಂ ವಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net