

ಗದಗ: ಡಿಜಿಟಲ್ ಗುರುತಿನ ಚೀಟಿ ತೋರಿಸಿದ ಮಹಿಳೆಗೆ ಉಚಿತ ಟಿಕೆಟ್ ನೀಡಲು ನಿರಾಕರಿಸಿದ ಘಟನೆ ಪಟ್ಟಣದಲ್ಲಿ ಬಸ್ ನಿಲ್ದಾಣದಲ್ಲಿ ಸೋಮವಾರ ಜರುಗಿದ್ದು, ಇದೇ ವಿಷಯವಾಗಿ ಮಹಿಳೆ- ಬಸ್ ನಿರ್ವಾಹಕರ ಮಧ್ಯೆ ತೀವ್ರವಾದ ಮಾತಿನ ಜಟಾಪಟಿ ನಡೆದಿದೆ.
ಗದಗದಿಂದ ಹುಬ್ಬಳಿಗೆ ಪ್ರಯಾಣಿಸುತ್ತಿದ್ದ ಮಹಿಳೆ ಉಚಿತ ಟಿಕೆಟ್ ಪಡೆಯುವ ಸಂದರ್ಭದಲ್ಲಿ ಮುದ್ರಿತ ಗುರುತಿನ ಚೀಟಿ ತೋರಿಸುವಂತೆ ಬಸ್ ನಿರ್ವಾಹಕ ತಿಳಿಸಿದ್ದಾರೆ. ಆದರೆ, ಮೊಬೈಲ್ನಲ್ಲಿದ್ದ ಡಿಜಿಟಲ್ ಆಧಾರ್ ಕಾರ್ಡ್ ತೋರಿಸಿದ ಮಹಿಳೆ ಉಚಿತ ಟಿಕೆಟ್ ನೀಡುವಂತೆ ಕೇಳಿದ್ದಾಳೆ. ಮೊಬೈಲ್ನಲ್ಲಿ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ನಿರ್ವಾಹಕ ಖಡಕ್ ಆಗಿ ಹೇಳಿದ್ದಾನೆ. ಈ ವಿಷಯ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ, ವಿಚಾರ ನಗರದ ಹೊಸ ಬಸ್ ನಿಲ್ದಾಣದಲ್ಲಿರುವ ಸಂಚಾರ ನಿಯಂತ್ರಣ ಕೊಠಡಿ ವರೆಗೂ ತಲುಪಿ ವಾಗ್ವಾದ ಮತ್ತಷ್ಟು ಉಲ್ಬಣಗೊಂಡಿತು. ಕೊನೆಗೆ ಮಹಿಳೆ 75 ರೂಪಾಯಿ ಹಣ ನೀಡಿ ಟಿಕೆಟ್ ಪಡೆದು ಹುಬ್ಬಳ್ಳಿಗೆ ಪ್ರಯಾಣಿಸಬೇಕಾಯಿತು.
ನಗರದ ಪಂಡಿತ್ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲೂ ಇಂಥದ್ದೇ ಪ್ರಕರಣ ಜರುಗಿದೆ. ಗುರುತಿನ ಚೀಟಿ ತಂದಿರದ ಮಹಿಳೆಯೊಬ್ಬರು ಹಣ ಕೊಟ್ಟು ಟಿಕೆಟ್ ಪಡೆದು ಪ್ರಯಾಣಿಸಿದರು.
ಶೇ.80ರಷ್ಟು ಮಹಿಳೆಯರು: ಗದಗ ವಿಭಾಗದ 514 ಬಸ್ಗಳು ಸೋಮವಾರ ಮಹಿಳೆಯರಿಂದಲೇ ಸಂಪೂರ್ಣ ಭರ್ತಿಯಾಗಿದ್ದ ದೃಶ್ಯ ಕಂಡುಬಂದವು. ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಮಹಿಳೆಯರು ದಿಢೀರ್ನೆ ಬಸ್ ಏರಿ ಕುಳಿತುಕೊಳ್ಳುತ್ತಿದ್ದರು. ಬಸ್ ಹತ್ತಲು ನೂಕುನುಗ್ಗುಲು ಸಾಮಾನ್ಯವಾಗಿದೆ.