ಕಾಟುಕುಕ್ಕೆ ಕ್ಷೇತ್ರದಲ್ಲಿ ಮಡಲು ಹೆಣೆಯುವ ಪ್ರಾತ್ಯಕ್ಷಿಕೆ

27
Published on

ಪೆರ್ಲ: ಮೇ 7ರಿಂದ 12ರ ತನಕ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರುಗಲಿದ್ದು ಅದಕ್ಕೆ ಅಗತ್ಯವಿರುವ ಮಡಲು, ಪೊರಕೆ ತಯಾರಿಯನ್ನು ಬ್ರಹ್ಮಕಲಶೋತ್ಸವ ಮಾತೃ ಸಮಿತಿ ನೇತೃತ್ವದಲ್ಲಿ ಆರಂಭಿಸಲಾಯಿತು.

ಗ್ರಾಮಸ್ಥರ ವಿವಿಧ ಪ್ರಾದೇಶಿಕ ಸಮಿತಿ ಮಹಿಳಾ ಸದಸ್ಯೆಯರು ಮಡಲು ಹೆಣೆಯುವ, ಪೊರಕೆ ನಿರ್ಮಾಣ ಕೈಂಕರ್ಯದಲ್ಲಿ ನುರಿತ ಪರಂಪರಾಗತ ಮಡಲು, ಕಸಬರಿಕೆ ತಯಾರಿಕೆ ಬಗ್ಗೆ ಪ್ರೇಮ ಕಲ್ಲಗದ್ದೆ, ಲೀಲಾವತಿ ಆಚಾರ್ಯ, ರೇಣುಕಾ ಕಲ್ಲಗದ್ದೆ, ಯಶೋದಾ ಕಾನ, ಸಾವಿತ್ರಿ ಕುರೆಡ್ಕ, ಸರೋಜಿನಿ ಮುಗೇರು ಪ್ರಾತ್ಯಕ್ಷಿಕೆ ನೀಡಿದರು. ಹಲವಾರು ಕಾರ್ಯಕರ್ತೆಯರು, ಮಕ್ಕಳು ಮಡಲು ಹೆಣೆಯುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರು. ಬ್ರಹ್ಮಕಲಶೋತ್ಸವಕ್ಕಾಗಿ 600 ಮಡಲುಗಳ ಅವಶ್ಯಕತೆಯಿದ್ದು, ಮುಂದಿನ ದಿನಗಳಲ್ಲಿ ಮಾತೃ ಸಂಘದ ವಿವಿಧ ಪ್ರಾದೇಶಿಕ ಸಮಿತಿ ನೇತೃತ್ವದಲ್ಲಿ ಮಡಲು ಹೆಣೆಯುವ, ಪೊರಕೆ ತಯಾರಿಸಿ ಕ್ಷೇತ್ರಕ್ಕೆ ತಂದೊಪ್ಪಿಸುವ ಯೋಜನೆ ಇರಿಸಲಾಗಿದೆ.

ಕ್ಷೇತ್ರದ ಆಡಳಿತ ಮೊಕ್ತೇಸರ ತಾರನಾಥ ರೈ ಪಡ್ಡಂಬೈಲ್ ಗುತ್ತು ಪ್ರಾತ್ಯಕ್ಷಿಗೆ ಚಾಲನೆ ನೀಡಿದರು. ಕ್ಷೇತ್ರ ಟ್ರಸ್ಟಿಗಳಾದ ಸುಧಾಕರ ಕಲ್ಲಗದ್ದೆ, ಚನಿಯಪ್ಪ ಪರವಗುಡ್ಡೆ, ಮಾತೃ ಮಂಡಳಿ ಅಧ್ಯಕ್ಷೆ ರಾಜಶ್ರೀ ಟಿ.ರೈ ಪೆರ್ಲ, ಚೇತನಾ, ಯಶೋದಾ ಕಾನ, ನಿರ್ಮಲಾ ಶೇಷಪ್ಪ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net