ವಿರಾಜಪೇಟೆ: ಗಣೇಶ ಚತುರ್ಥಿಯಿಂದ ಐದು ದಿನಗಳವರೆಗೆ ಪೂಜೆಗೈದು ಉತ್ಸವ ಮೂರ್ತಿಯನ್ನು ಮೆರೆವಣಿಗೆಯೊಂದಿಗೆ ತೆರಳಿ ಕದನೂರು ಹೊಳೆಯಲ್ಲಿ ಬುಧವಾರ ವಿಸರ್ಜಿಸಲಾಯಿತು.
ಶ್ರೀ ಸಿದ್ಧಿ ವಿನಾಯಕ ಉತ್ಸವ ಸಮಿತಿ ಕದನೂರು ವತಿಯಿಂದ 9ನೇ ವರ್ಷದ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಐದು ದಿನಗಳವರೆಗೆ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಗಿ ಬುಧವಾರ ರಾತ್ರಿ ಕದನೂರು ವೇಬ್ರಿಡ್ಜ್ ಜಂಕ್ಷನ್ ವರೆಗೆ ಮೆರವಣಿಗೆಯಲ್ಲಿ ತೆರಳಿ ಹಿಂದುರುಗಿ ಅರಮೇರಿ ಮಠದ ರಸ್ತೆಯವರೆಗೆ ಮೆರವಣಿಗೆ ಮಾಡಲಾಯಿತು. ಬಳಿಕ ಕದನೂರು ಹೊಳೆಯಲ್ಲಿ ಉತ್ಸವ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
ಸಮಿತಿಯ ವತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಿತಿಯ ಅಧ್ಯಕ್ಷ ಪುನೀತ್, ಉಪಾಧ್ಯಕ್ಷ ನಿತಿನ್, ಕಾರ್ಯದರ್ಶಿ ಮನು ಬೋಪಣ್ಣ ಮತ್ತು ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.