

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಯುವಜನತೆಗೆ ಭಾರತದ ಪ್ರಜಾಪ್ರಭುತ್ವದ ಬಗ್ಗೆ ತಿಳಿವಳಿಕೆ ಹಾಗೂ ಗೌರವ ಮೂಡಿಸುವ ದೃಷ್ಟಿಯಿಂದ ಸರ್ಕಾರ ಬೃಹತ್ ಮಾನವ ಸರಪಣಿ ಮುಖಾಂತರ ಕಾರ್ಯಕ್ರಮ ಹಮ್ಮಿಕೊಂಡಿದೆ. ದೇಶದ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕಾಗಿದೆ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಮೂಲ್ಕಿ ಹಾಗೂ ಮೂಡುಬಿದಿರೆ ತಾಲೂಕು ವತಿಯಿಂದ ವಿವಿಧ ಇಲಾಖೆಗಳ ಸಹಭಾಗಿತ್ವದೊಂದಿಗೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಮೂಲ್ಕಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರು ಅಂಬೇಡ್ಕರ್ ಹಾಗೂ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭಾರತದ ಸಂವಿಧಾನ ಪೀಠಿಕೆ ಓದಿದರು.
ಬಳಿಕ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ವನಮಹೋತ್ಸವ ಆಚರಣೆ, ಬಪ್ಪನಾಡು ಸೇತುವೆ ಬಳಿಯಿಂದ ಪಾವಂಜೆ ಸೇತುವೆವರೆಗೆ ವಿವಿಧ ಸಂಘ ಸಂಸ್ಥೆಗಳಿಂದ ಬೃಹತ್ ಮಾನವ ಸರಪಣಿ ನಡೆಯಿತು.
ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಮುಖ್ಯಾಧಿಕಾರಿ ಮಧುಕರ್, ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಮುಖ್ಯಾಧಿಕಾರಿ ಇಂದು ಎಂ., ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್, ವಿವಿಧ ಇಲಾಖೆ ಅಧಿಕಾರಿಗಳು, ನಪಂ ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ನಿರೂಪಿಸಿದರು.
ಭಾರತ ದೇಶದ ಸಂವಿಧಾನ ಭದ್ರ ಬುನಾದಿ ಹೊಂದಿದ್ದು, ದೇಶದ ವಿವಿಧತೆಯಲ್ಲಿ ಏಕತೆ ಪ್ರತಿನಿಧಿಸುತ್ತಿದೆ. ಈ ಬಗ್ಗೆ ಯುವ ಸಮಾಜ ತಿಳಿವಳಿಕೆ ಹೊಂದಬೇಕು. ಅಭಯಚಂದ್ರ ಜೈನ್, ಮಾಜಿ ಸಚಿವರು
ಅಭಯಚಂದ್ರ ಜೈನ್, ಮಾಜಿ ಸಚಿವರು