ಒತ್ತುವರಿ ಜಾಗ ತೆರವು ಮಾಡಿಸಲು ಆಗ್ರಹ

19blrp1
Published on


ಬೇಲೂರು : ತಾಲೂಕಿನ ಕಳ್ಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆಂಡೇಹಳ್ಳಿ (ಆಡುವಳ್ಳಿ)ಸಂತೇ ಮೈದಾನದ ಜಾಗ ಒತ್ತುವರಿ ತೆರವು ಗೊಳಿಸುವಂತೆ ಆಗ್ರಹಿಸಿ ಕಳ್ಳೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಹಕೀಂ ನೇತೃತ್ವದಲ್ಲಿ ಗೆಂಡೇಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟಿಸಿ ಶಿರಸ್ತೇದಾರ್ ಶ್ವೇತಾ ಅವರಿಗೆ ಮನವಿ ಮತ್ರ ಸಲ್ಲಿಸಿದರು.


ಅಬ್ದುಲ್ ಹಕೀಂ ಮಾತನಾಡಿ, ತಾಲೂಕಿನ ಕಳ್ಳೇರಿ ಗ್ರಾಪಂಗೆ ಸೇರಿದ ಗೆಂಡೇಹಳ್ಳಿ(ಆಡುವಳ್ಳಿ)ಸಂತೇ ಮೈದಾನದ ಜಾಗವು ಸರ್ವೇ ನಂ. 6 ರಲ್ಲಿ 3 ಎಕರೆಯಷ್ಟಿದ್ದು ಜಾಗವನ್ನು ಸರ್ವೇ ಮಾಡಿಸಿ ಗಡಿ ಗುರುತಿಸಿ ಕೊಡುವಂತೆ ಆಗ್ರಹಿಸಿ 2022 ರಿಂದಲೂ ಒತ್ತಾಯಿಸಲಾಗುತ್ತಿದೆ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪತ್ರ ಬರೆದರೂ ಅಧಿಕಾರಿಗಳು ಉಡಾಫೆಯಿಂದ ವರ್ತಿಸುತಿದ್ದಾರೆ ಎಂದು ಕಿಡಿಕಾರಿದರು.


ಗೆಂಡೇಹಳ್ಳಿ(ಆಡುವಳ್ಳಿ)ಸಂತೇ ಅಭಿವೃದ್ಧಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಯಿಂದ 1 ಕೋಟಿ ರೂ., ಅನುದಾನ ಬಂದಿದ್ದು, ಇದರಲ್ಲಿ ಸಂತೆ ಜಾಗ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ತಹಸೀಲ್ದಾರ್ ಮತ್ತು ಸಂಬಂಧಿಸಿದ ಸರ್ವೇ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ತುರ್ತಾಗಿ ಸರ್ವೇ ಮಾಡಿಸಿ ಗಡಿ ಗುರುತಿಸಿ ಕೊಡಬೇಕು. ಮುಂದಿನ 15 ದಿನಗಳಲ್ಲಿ ಸರ್ವೇ ಮಾಡದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗೆಂಡೇಹಳ್ಳಿ ಭಾಗದ ಗ್ರಾಮಸ್ಥರೊಂದಿಗೆ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.


ಕೇಂದ್ರ ಕಾಫಿ ಮಂಡಳಿ ಸದಸ್ಯ ಜಿ.ಕೆ.ಕುಮಾರ್ ಮಾತನಾಡಿದರು. ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಉಪಾಧ್ಯಕ್ಷ ದರ್ಶನ್, ಹೋಬಳಿ ಅಧ್ಯಕ್ಷ ಮಹೇಶ್, ದಬ್ಬೆ ಗ್ರಾಪಂ ಮಾಜಿ ಅಧ್ಯಕ್ಷ ನಾಗೇಶ್, ಮುಖಂಡರಾದ ಜುಂಜಯ್ಯ, ನವೀನ್, ವಿಕಾಸ್, ಮಲ್ಲೇಶ್, ಸಚ್ಚಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net