

ದಾವಣಗೆರೆ: ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಕಾಂ. ಪಂಪಾಪತಿ ಅವರ ಹೆಸರು ನಾಮಕರಣ ಮಾಡಬೇಕು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಒತ್ತಾಯಿಸಿದೆ.
ಶ್ರಮಿಕರ ಧ್ವನಿಯಾಗಿ, ನಗರಸಭೆ ಅಧ್ಯಕ್ಷರು ಹಾಗೂ ಶಾಸಕರಾಗಿ ದಿಟ್ಟ ಆಡಳಿತದ ಮೂಲಕ ನಗರಕ್ಕೆ ಹತ್ತು ಹಲವು ಯೋಜನೆಗಳ ಕೊಡುಗೆ ನೀಡಿರುವ ಪಂಪಾಪತಿ ಅವರ ಹೆಸರನ್ನು ಜಿಲ್ಲಾಡಳಿತ ಕಡೆಗಣಿಸಿದೆ ಎಂದು ಸಮಿತಿಯ ಎಚ್.ಜಿ. ಉಮೇಶ್ ಹಾಗೂ ಸತೀಶ್ ಅರವಿಂದ್ ಸುದ್ದಿಗೋಷ್ಠಿಯಲ್ಲಿ ದೂರಿದರು.
1974ರಲ್ಲಿ ನಗರಸಭೆ ಚುನಾವಣೆಯಲ್ಲಿ ಆಯ್ಕೆಗೊಂಡ ಪಂಪಾಪತಿ ಅವರು ಬಾತಿ ಕೆರೆ ಅಭಿವೃದ್ಧಿಗೊಳಿಸಿ ಜನತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವ್ಯಾಯಾಮ ಶಾಲೆ ಹಾಗೂ ಗರಡಿಮನೆ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದ್ದರಲ್ಲದೆ 6 ಸಾವಿರ ಗಿಡ ನೆಟ್ಟು ನಗರವನ್ನು ಹಸಿರುಗೊಳಿಸಿದ್ದರು ಎಂದರು.
1978ನೇ ಸಾಲಿನಲ್ಲಿ ಶಾಸಕರಾಗಿ ಚುನಾಯಿತರಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಡಿಪೋ ಸ್ಥಾಪನೆಗೆ ನಗರಸಭೆ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಸತತ ಐದು ದಿನಗಳ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ ಹಿನ್ನೆಲೆಯಲ್ಲಿ ಅಂದಿನ ಸರ್ಕಾರ ನಗರಕ್ಕೆ ಅಗತ್ಯವಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಡಿಪೋ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿತ್ತು ಎಂದು ತಿಳಿಸಿದರು.
ನಗರದಲ್ಲಿ 11 ಹೊಸ ಬಡಾವಣೆ ನಿರ್ಮಿಸುವ ಮೂಲಕ 18 ಸಾವಿರ ಆಶ್ರಯ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿ ಸೂರು ಕಲ್ಪಿಸಿರುವುದು ಇತಿಹಾಸ. ಬಸ್ ನಿಲ್ದಾಣಕ್ಕೆ ಪಂಪಾಪತಿ ಅವರ ಹೆಸರನ್ನಿಡಲು ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ, ನಿಯೋಗದ ಮೂಲಕ ಜಿಲ್ಲಾ ಹಾಗೂ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು. ನಿರ್ಲಕ್ಷಿಸಿದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೆೆ.ಎಚ್. ಆನಂದರಾಜ್, ರಾಜೇಂದ್ರ ಬಂಗೇರ, ನರೇಗಾ ರಂಗನಾಥ್, ಮಹಮ್ಮದ್ ರಫೀಕ್ ಸುದ್ದಿಗೋಷ್ಠಿಯಲ್ಲಿದ್ದರು.