

ಉಡುಪಿ: ಮಣಿಪಾಲ ಮಣ್ಣಪಳ್ಳ ಕೆರೆಯನ್ನು ಜಿಲ್ಲಾಡಳಿತ ಖಾಸಗಿ ವ್ಯಕ್ತಿಗಳಿಗೆ ನೀಡಲು ಮುಂದಾಗಿರುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೆರೆಯ ಸಮಗ್ರ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ನಗರಸಭೆಗೆ ತಕ್ಷಣ ಹಸ್ತಾಂತರಿಸುವಂತೆ ಶಾಸಕ ಯಶ್ ಪಾಲ್ ಸುವರ್ಣ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಮಣ್ಣಪಳ್ಳ ಕೆರೆ ಸುಮಾರು 120 ಎಕ್ರೆ ವಿಸ್ತೀರ್ಣ ಹೊಂದಿರುವ ನಗರ ಭಾಗದ ಅತೀದೊಡ್ಡ ಕೆರೆಯಾಗಿದ್ದು, ಪ್ರವಾಸೋದ್ಯಮ ಚಟುವಟಿಕೆ, ಉದ್ಯಾನವನ, ವಾಕಿಂಗ್, ಸಾಂಸತಿಕ ಚಟುವಟಿಕೆ ನಡೆಸಲು ವಿಫುಲ ಅವಕಾಶವಿದ್ದು, ಸೂಕ್ತ ನಿರ್ವಹಣೆ ಕೊರತೆಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ. ಮಣ್ಣಪಳ್ಳ ಕೆರೆಯನ್ನು ಅತ್ಯಂತ ಸುವ್ಯವಸ್ಥಿತವಾಗಿ ಅಭಿವೃದ್ಧಿಗೊಳಿಸಿ ನಿರ್ವಹಣೆ ಮಾಡಲು ನಗರಸಭೆ ಬದ್ಧವಾಗಿದ್ದು,ಈಗಾಗಲೇ ನಗರಸಭೆಯ ಸಾಮಾನ್ಯ ಸಭೆಯಲ್ಲಿ ರ್ನಿಣಯಕೈಗೊಂಡು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ನಗರಸಭೆ ವತಿಯಿಂದ ಮಣ್ಣಪಳ್ಳ ಕೆರೆಯನ್ನು ಸಮಗ್ರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗೆ ಕ್ರೀಡಾಂಗಣ, ಸಾಂಸತಿಕ ಚಟುವಟಿಕೆಗಳಿಗೆ ಬಯಲು ರಂಗ ಮಂದಿರ, ಜಲ ವಿಹಾರ ಚಟುವಟಿಕೆ, ಕೆರೆಯ ಹೂಳು ತೆರವು ಮಾಡಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಳ, ಸುಸಜ್ಜಿತ ವಾಕಿಂಗ್ ಟ್ರ್ಯಾಕ್, ಸೈಕ್ಲಿಂಗ್ ಟ್ರ್ಯಾಕ್, ಸಿ ಸಿ ಕ್ಯಾಮರ ಅಳವಡಿಕೆ, ಶೌಚಾಲಯ, ಭದ್ರತಾ ಸಿಬ್ಬಂದಿ ನಿಯೋಜನೆ ಹಾಗೂ ಬೇಸಿಗೆ ಸಂದರ್ಭದಲ್ಲಿಯೂ ಕೆರೆಯಲ್ಲಿ ನೀರು ಕಲ್ಪಿಸುವ ನಿಟ್ಟಿನಲ್ಲಿ ಶೀಂಬ್ರ ನದಿಯಿಂದ ಪೈಪ್ ಲೈನ್ ಮೂಲಕ ಕೆರೆಗೆ ನೀರು ತುಂಬಿಸಿ ಪರಿಸರದ ಅಂತರ್ಜಲವೃದ್ಧಿಸುವ ಕಾಮಗಾರಿಗಳ ಬಗ್ಗೆ ಮಾಸ್ಟರ್ ಪ್ಲಾನ್ ತಯಾರಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಣ್ಣಪಳ್ಳ ಕೆರೆಯನ್ನು ಪಿ ಪಿ ಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಖಾಸಗಿ ವ್ಯಕ್ತಿಗಳಿಗೆ ನೀಡಲು ಉದ್ದೇಶಿಸಿರುವ ಬಗ್ಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಮಣ್ಣಪಳ್ಳ ಕೆರೆ ಉಳಿಸಿ ಹೋರಾಟ ಸಮಿತಿಯ ಮೂಲಕ ಉಗ್ರ ಹೋರಾಟ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.