

ವಿಜಯವಾಣಿ ಸುದ್ದಿಜಾಲ ಕೊಕ್ಕಡ ಮುಜರಾಯಿ ಇಲಾಖೆ ಅಧಿಕಾರಿಗಳೇ ದಯವಿಟ್ಟು ಬಿಡುವು ಮಾಡಿಕೊಂಡು ನಮ್ಮ ಶಿಶಿಲ ದೇವಾಲಯಕ್ಕೆ ಬನ್ನಿ. ಹುಂಡಿ ಹಣ ಎಣಿಸಲಿಕ್ಕಲ್ಲ. ಶ್ರದ್ಧಾ ಭಕ್ತಿಯ ಭಾವನೆಯಿಂದ ನೋಡುವ ಭಕ್ತರ ನೋವಿಗೆ ಸ್ಪಂದಿಸಿ. ನಮ್ಮೂರ ಒಡೆಯನ ಒಡಲು ಶುದ್ಧಗೊಳಿಸಿ ಎಂದು ಶಿಶಿಲ ಭಕ್ತರು ಆಗ್ರಹಿಸಿದ್ದಾರೆ. ಜೂ.25ರಂದು ಬೆಳ್ತಂಗಡಿ ತಾಲೂಕಾದ್ಯಂತ ಸುರಿದ ಭಾರಿ ಮಳೆಗೆ ಶಿಶಿಲ ಗ್ರಾಮದ ಶ್ರೀ ಶಿಶೀಲೇಶ್ವರನ ಸನ್ನಿಧಿಯಲ್ಲಿರುವ ಕಪಿಲಾ ನದಿ ಮೈದುಂಬಿ ಹರಿದು ದೇವರ ಅಂಗಣ ಪ್ರವೇಶಿಸಿತ್ತು. ದೇವಳದ ಹೊರಾಂಗಣದಲ್ಲಿ ಕಟ್ಟಿರುವ ತಡಗೋಡೆ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿ ಅಂಗಣ ಸಂಪೂರ್ಣ ಕೆಸರುಮಯವಾಗಿದೆ. ದೇವಾಲಯದ ಕಚೇರಿ ಸೊತ್ತು ನೀರು ಪಾಲಾಗಿ ಹಾನಿಯಾಗಿದೆ. ದೇವಳದ ತಡೆಗೋಡೆ ಕುಸಿದು ಬಿದ್ದಿದ್ದು, ಅಪಾಯ ತಂದೊಡ್ಡಿದೆ. ಮಳೆಯಿಂದ ಕಪಿಲೆ ಮತ್ತೊಮ್ಮೆ ಉಕ್ಕಿ ಹರಿದರೆ ಗೋಪುರ ಸಹಿತ ಕ್ಷೇತ್ರದ ದೇವಾಲಯಕ್ಕೆ ಅಪಾಯವಾಗಲಿದೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಭದ್ರತೆ ಕಲ್ಪಿಸುವಂತೆ ಆಗ್ರಹ ಶಿಶಿಲ ದೇವಳದಲ್ಲಿ ನೆರೆ ಪರಿಸ್ಥಿತಿ ಉಂಟಾಗಿ ಎರಡು ದಿನ ಕಳೆದರೂ ಕೂಡ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಳದಲ್ಲಿ ವ್ಯವಸ್ಥಾಪನಾ ಸಮಿತಿ ಇಲ್ಲದೆ ಭಕ್ತರು ಮುಂದೆ ನಿಂತು ಕಾರ್ಯ ಕೈಗೊಳ್ಳುವ ಪರಿಸ್ಥಿತಿಯಿದೆ. ಸಂಬಂಧಿಸಿದ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಭದ್ರತೆ ಕಲ್ಪಿಸಿ ಕೊಡುವಂತೆ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕಪಿಲಾ ನದಿ ಉಕ್ಕಿ ಹರಿದು ದೇವಳದ ತಡಗೋಡೆ ಧ್ವಂಸಗೊಳಿಸಿ ಹೊರಾಂಗಣ ಪ್ರವೇಶಿಸಿದೆ. ಘಟನೆ ಸಂಭವಿಸಿ ಎರಡು ದಿನವಾದರೂ ಸೌಜನ್ಯಕ್ಕಾದರೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಬರಲಿಲ್ಲ. ಭಕ್ತರೇ ನೇತೃತ್ವ ವಹಿಸಿ ದೇವಳ ಶುಚಿಗೊಳಿಸಿದ್ದೇವೆ. ತಾಲೂಕಿನಲ್ಲಿ ಅತಿವೃಷ್ಟಿಯಾಗುತ್ತಿದ್ದು ಮತ್ತೆ ಕಪಿಲೆ ಉಕ್ಕಿ ಹರಿದರೆ ದೇವಳಕ್ಕೆ ಹಾನಿಯಾಗಬಹುದು. ಕೂಡಲೇ ಸಂಬಂಧಿಸಿದ ಇಲಾಖೆ ದೇವಳಕ್ಕೆ ಬರಬೇಕು. ನೆರೆ ಹಾನಿ ಅನುದಾನ ಬಳಸಿಕೊಂಡು ತಕ್ಷಣ ಕಾರ್ಯ ಪ್ರವೃತ್ತರಾಗಬೇಕು ಎಂದು ಮುಜರಾಯಿ ಸಚಿವರಿಗೆ ಒತ್ತಾಯಿಸುತ್ತೇನೆ. ಜಯರಾಮ ನೆಲ್ಲಿತ್ತಾಯ ಮತ್ಸೃ ಹಿತರಕ್ಷಣಾ ವೇದಿಕೆ ಅಧ್ಯಕ್ಷ