ವಿಶ್ವವಿದ್ಯಾಲಯ ಸಮಸ್ಯೆ ಪರಿಹಾರಕ್ಕೆ ಆಗ್ರಹ

protest
ಕುಂದಾಪುರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
Published on

ಕುಂದಾಪುರ: ಕಾಲೇಜು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ, ಪದವಿ ಕಾಲೇಜುಗಳಿಗೆ ಉಪನ್ಯಾಸಕರ ನೇಮಕಾತಿ ಮತ್ತು ವಿಶ್ವವಿದ್ಯಾಲಯದ ವಿವಿಧ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಕುಂದಾಪುರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಮಂಗಳೂರು ವಿವಿ ವ್ಯಾಪ್ತಿಯಲ್ಲಿ 188 ಕಾಲೇಜುಗಳಲ್ಲಿ 75 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿದ್ದು, ವಿಶ್ವವಿದ್ಯಾಲಯ ಇಂದು ಸಮಸ್ಯೆಗಳ ಗೂಡಾಗಿದೆ. ಈಗಾಗಲೇ ರಾಜ್ಯದೆಲ್ಲೆಡೆ ಪದವಿ ಪೂರ್ವ ಕಾಲೇಜುಗಳ ತರಗತಿ ಶುರುವಾಗಿ ಎರಡು ತಿಂಗಳು ಕಳೆದಿದ್ದು, ಪರೀಕ್ಷೆ ಮುಗಿದು ತರಗತಿ ಪ್ರಾರಂಭವಾಗಿವೆ. ಆದರೆ ಹಾಸ್ಟೆಲ್ ಪ್ರವೇಶಾತಿ ಪ್ರಾರಂಭವಾಗದೇ ಇರುವುದು ಬಡ ಪ್ರತಿಭಾವಂತ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ಹಾಸ್ಟೆಲ್ ಪ್ರವೇಶಾತಿ ಆರಂಭಿಸಿ, ಹಾಸ್ಟೇಲ್ ಸೀಟ್‌ಗಳನ್ನು ಹೆಚ್ಚಿಸಬೇಕು. ಉಪನ್ಯಾಸಕರ ನೇಮಕಾತಿ ಮಾಡಬೇಕೆಂದು ಉಡುಪಿ ಜಿಲ್ಲಾ ಎಬಿವಿಪಿ ಸಹ ಸಂಚಾಲಕ ದರ್ಶನ್ ಆಗ್ರಹಿಸಿದರು.

ಅಂಕಪಟ್ಟಿಗೆ ಪರದಾಟ

ಕಳೆದ ತಿಂಗಳು ನಡೆದ ಸೆಮಿಸ್ಟರ್ ಪರೀಕ್ಷೆಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಬಂದು ಹತ್ತು ದಿನ ಕಳೆದಿವೆ. ಆದರೆ ಅನೇಕ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಡಿಜಿಲಾಕರ್ ಮೂಲಕ ಪಡೆಯಲು ಕಷ್ಟವಾಗುತ್ತಿದೆ. ಉನ್ನತ ಶಿಕ್ಷಣ ಹಾಗೂ ಉದ್ಯೋಗಾಕಾಂಕ್ಷಿಗಳು ಪರದಾಡುತ್ತಿದ್ದಾರೆ. ಪ್ರತಿ ವರ್ಷ ಅಂಕಪಟ್ಟಿ ಹಾಗೂ ಪ್ರಮಾಣಪತ್ರ ಪ್ರೊಸೆಸಿಂಗ್ ಚಾರ್ಜ್ 280 ರೂ. ಪಡೆಯಲಾಗುತ್ತಿದ್ದರೂ ಅಂಕಪಟ್ಟಿ ಕಲ್ಪಿಸುವಲ್ಲಿ ವಿವಿ ವಿಫಲವಾಗುತ್ತಿದೆ ಎಂದು ಉಡುಪಿ ಜಿಲ್ಲಾ ಎಬಿವಿಪಿ ಸಂಚಾಲಕ ಕಾರ್ತಿಕ್ ದೂರಿದರು.

ಕುಂದಾಪುರದ ಶಾಸ್ತ್ರಿ ವೃತ್ತದಿಂದ ಮೆರವಣಿಗೆಯಲ್ಲಿ ಸಾಗಿದ ಎಬಿವಿಪಿ ವಿದ್ಯಾರ್ಥಿಗಳು, ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ತಹಸೀಲ್ದಾರ್ ಶೋಭಾಲಕ್ಷ್ಮೀ ಅವರಿಗೆ ಮನವಿ ಸಲ್ಲಿಸಿದರು. ಕಾರ್ತಿಕ್ ಉಡುಪಿ ಜಿಲ್ಲಾ ಸಂಚಾಲಕ, ದರ್ಶನ್ ಶೆಟ್ಟಿ ಜಿಲ್ಲಾ ಸಹ ಸಂಚಾಲಕ, ಆಕಾಶ್ ತಾಲೂಕು ಸಂಚಾಲಕ, ಪ್ರಮುಖ ಕಾರ್ಯಕರ್ತರಾದ ಪ್ರಥಮ್, ರಕ್ಷನ್, ಶಶಿ, ವಿಘ್ನೇಶ್ವರ, ಧ್ವನಿ, ಸಿಂಚನಾ, ವೈಷ್ಣವಿ ಮೊದಲಾದವರು ಪಾಲ್ಗೊಂಡಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net