

ವಿಜಯವಾಣಿ ಸುದ್ದಿಜಾಲ ಅಮಾಸೆಬೈಲು
ಅಮಾಸೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ಬಲಗದ್ದೆ ಹಾಗೂ ಮಡಿವಾಳಕಟ್ಟು ಭಾಗದ ಜನರು ಮತ್ತು ವಿದ್ಯಾರ್ಥಿಗಳು ರಸ್ತೆ ಸಂಪರ್ಕ ಸರಿಪಡಿಸುವಂತೆ ಆಗ್ರಹಿಸಿ ಗ್ರಾಪಂ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
ಸರ್ಕಾರಿ ಜಾಗದಲ್ಲಿರುವ ರಸ್ತೆಯನ್ನು ಸ್ಥಳೀಯರೊಬ್ಬರು ಬಂದ್ ಮಾಡಿ ನಿರ್ಬಂಧ ಹೇರಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳಿಂದ ಶಾಸಕರ ತನಕ ರಸ್ತೆ ನಿರ್ಬಂಧ ತೆರವುಗೊಳಿಸುವಂತೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ಧರಣಿ ಕುಳಿತ್ತಿದ್ದೇವೆ. ನಮಗೆ ನ್ಯಾಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಧರಣಿ ಪ್ರದೇಶಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಅವರ ಪರವಾಗಿ ಸಹೋದರ ವಿರೇಂದ್ರ ಶೆಟ್ಟಿ ಗಂಟಿಹೊಳೆ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಅಮಾಸೆಬೈಲು ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಕುಲಾಲ್, ಉಪಾಧ್ಯಕ್ಷ ಶಂಕರ ಪೂಜಾರಿ, ಸದಸ್ಯರಾದ ಗಣೇಶ ಶೆಟ್ಟಿ ಮಠದಜೆಡ್ಡು, ಚಂದ್ರಶೇಖರ ಶೆಟ್ಟಿ ಕೆಲಾ, ಜಯಪ್ರಕಾಶ ಶೆಟ್ಟಿ, ಪಿಡಿಒ ಸ್ವಾಮೀನಾಥ ಆರ್., ಮಾಜಿ ಸದಸ್ಯ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.