

ವಿಜಯವಾಣಿ ಸುದ್ದಿಜಾಲ ಕಡಬ
ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಚೇರು ಸರ್ಕಾರಿ ಶಾಲೆಗೆ ಅತಿಥಿ ಶಿಕ್ಷಕರನ್ನು ನಿಯೋಜಿಸುವಂತೆ ಒತ್ತಾಯಿಸಿ ಶಾಲಾ ವಿದ್ಯಾರ್ಥಿಗಳ ಪಾಲಕರು ಹಾಗೂ ಊರವರು, ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ವತಿಯಿಂದ ಬಿಳಿನೆಲೆ ಗ್ರಾಮ ಪಂಚಾಯಿತಿ ಕಚೇರಿಯ ಜಗುಲಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಕೊರತೆಯಿಂದ ಈ ವರ್ಷದ ಶೈಕ್ಷಣಿಕ ಆರಂಭದಲ್ಲಿ ಶಾಲೆ ಮುಚ್ಚುವ ಹಂತಕ್ಕೆ ತಲುಪಿದ್ದಾಗ ಊರವರು ಇಲಾಖೆಯ ಗಮನ ಸೆಳೆದಿದ್ದರು. ಸ್ಥಳಕ್ಕೆ ಬಂದ ಶಿಕ್ಷಣಾಧಿಕಾರಿ ಲೋಕೇಶ್ ಎಸ್‌ಆರ್ ಓರ್ವ ಕಾಯಂ ಹಾಗೂ ಓರ್ವ ಅತಿಥಿ ಶಿಕ್ಷಕರನ್ನು ನಿಯೋಜಿಸುವ ಭರವಸೆ ನೀಡಿದ್ದರು. ಬಳಿಕ ಊರವರು ವಿದ್ಯಾರ್ಥಿಗಳನ್ನು ಶಾಲೆಗೆ ಸೇರ್ಪಡೆಗೊಳಿಸಿದ್ದರು. ಆದರೆ ಹಲವು ತಿಂಗಳು ಕಳೆದರೂ ಅತಿಥಿ ಶಿಕ್ಷಕರನ್ನು ನಿಯೋಜಿಸದ ಕಾರಣ ವಿದ್ಯಾರ್ಥಿಗಳ ಸಂಖ್ಯೆ 13ರಿಂದ 4ಕ್ಕೆ ಇಳಿದಿದೆ. ಇಲ್ಲಿರುವ ಕಾಯಂ ಶಿಕ್ಷಕರು ಕರ್ತವ್ಯ ನಿಮಿತ್ತ ಹೊರ ಹೋಗುವ ಸಂದಭರ್ ಶಿಕ್ಷಕರಿಲ್ಲದೇ ಸಮಸ್ಯೆ ಆಗುತ್ತಿದೆ. ತಕ್ಷಣ ಅತಿಥಿ ಶಿಕ್ಷಕರನ್ನು ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷೆ ಸೌಮ್ಯ, ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಸಂಚಾಲಕ ವಿನೀಶ್ ಬಿಳಿನೆಲೆ , ನಿರ್ದೇಶಕ ರಾಮಕೃಷ್ಣ ಹೊಳ್ಳಾರು, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸುಕುಮಾರ ಚೇರು, ಊರವರಾದ ಮಮತಾ ಚೇರು, ರಾಜೇಶ್ವರಿ, ಗಿರಿಜಾ ಗೋಪಾಳಿ, ಅಕ್ಷತಾ ಗೋಪಾಳಿ, ತೀರ್ಥ ಗೋಪಾಳಿ, ಲಕ್ಷ್ಮೀ ಗೋಪಾಳಿ, ವಿಮಲ ಗೋಪಾಳಿ, ದೇವಪ್ಪ ಗೋಪಾಳಿ, ಹರೀಶ್ ಚೇರು, ಪುರಂದರ ಗೋಪಾಳಿ, ಪ್ರವೀಣ್ ಭಾಗ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.