ಬಾಬ್ರಿ ಮಸೀದಿ ಧ್ವಂಸದ ತೀರ್ಪು ಸೆ.30 ರೊಳಗೆ ನೀಡಿ; ಸುಪ್ರೀಂ ಸೂಚನೆ; ಏನಾಗುತ್ತೆ ಅಡ್ವಾಣಿ, ಜೋಶಿ, ಕಲ್ಯಾಣ್​ ಸಿಂಗ್​ ಭವಿಷ್ಯ?

Supreme Cort
Published on

ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸೆ.30 ರೊಳಗೆ ತೀರ್ಪು ನೀಡುವಂತೆ ವಿಚಾರಣೆ ನಡೆಸುತ್ತಿರುವ ಲಖನೌದ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್​ ಸೂಚನೆ ನೀಡಿದೆ.

ಮಾಜಿ ಉಪಪ್ರಧಾನಿ ಲಾಲ್​ಕೃಷ್ಣ ಅಡ್ವಾಣಿ, ಉತ್ತರಪ್ರದೇಶದ ಮಾಜಿ ಸಿಎಂ ಕಲ್ಯಾಣ್​ ಸಿಂಗ್​, ಬಿಜೆಪಿ ನಾಯಕರಾದ ಮುರಳಿ ಮನೋಹರ್ ಜೋಶಿ, ಉಮಾಭಾರತಿ, ವಿನಯ್​ ಕಟಿಯಾರ್​, ಸಾಧ್ವಿ ರಿತಂಭರಾ ಸೇರಿ 32 ಜನರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಸಿಬಿಐನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಂದ್ರಕುಮಾರ್​ ಯಾದವ್​ ವರದಿಯನ್ನು ಓದಿದ ಬಳಿಕ ವಿಚಾರಣೆ ಕೊನೆಯ ಹಂತದಲ್ಲಿರುವುದು ತಿಳಿದುಬರುತ್ತದೆ. ಈ ಕಾರಣಕ್ಕಾಗಿ ಇನ್ನೊಂದು ತಿಂಗಳು ಕಾಲಾವಕಾಶ ನೀಡಲಾಗುತ್ತಿದೆ. ಅಂದರೆ, ಸೆ.30ರೊಳಗೆ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ನೀಡುವಂತೆ ಸುಪ್ರೀಂ ಕೋರ್ಟ್​ ತಿಳಿಸಿದೆ. ಕೋರ್ಟ್​ ಈ ಮೊದಲು ಆಗಸ್ಟ್​ 31ರ ಗಡುವು ವಿಧಿಸಿತ್ತು.

ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿಯನ್ನು 1992ರ ಡಿಸೆಂಬರ್​ 6ರಂದು ಕರಸೇವಕರು ಧ್ವಂಸಗೊಳಿಸಿದ್ದರು. ಮಸೀದಿ ಇದ್ದ ಜಾಗದಲ್ಲಿ ಭವ್ಯ ರಾಮಮಂದಿರವಿತ್ತು. ಅಲ್ಲಿ ಮತ್ತೆ ರಾಮಮಂದಿನ ನಿರ್ಮಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಕರ ಸೇವಕರ ಹೋರಾಟಕ್ಕೆ ಎಲ್​.ಕೆ. ಅಡ್ವಾಣಿ, ಮುರಳಿ ಮನೋಹರ್​ ಜೋಶಿ ಈ ಹೋರಾಟದ ನೇತೃತ್ವ ವಹಿಸಿದ್ದರು.

ಕಳೆದ ತಿಂಗಳು ವಿಡಿಯೋ ಕಾನ್ಫರೆನ್ಸ್​ ಮೂಲಕ ತಮ್ಮ ಹೇಳಿಕೆ ದಾಖಲಿಸಿದ್ದ ಅಡ್ವಾಣಿ, ರಾಜಕೀಯ ಕಾರಣಗಳಿಗಾಗಿ ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದರು. ಎಲ್ಲ ಆರೋಪಿಗಳು ಹಾಗೂ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿರುವ ಕೋರ್ಟ್​ ತೀರ್ಪು ನೀಡುವುದೊಂದೇ ಬಾಕಿಯಿದೆ. ಹೀಗಾಗಿ ಇವರೆಲ್ಲರ ಭವಿಷ್ಯ ಏನಾಗುತ್ತೆ ಎಂಬ ಕುತೂಹಲ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net