

ವಿಜಯಪುರ: ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿಗೊಳಿಸುತ್ತಿದ್ದು ಅವುಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆ ಲಾಭ ದೊರಕಿಸಬೇಕೆಂದು ಎಡಿಸಿ ಸೋಮನಿಂಗ ಗೆಣ್ಣೂರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ 2025-26ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಜುಲೈ -2025ರ ಅಂತ್ಯಕ್ಕೆ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಕಾಲಮಿತಿಯೊಳಗೆ ವೆಚ್ಚ ಮಾಡಬೇಕು. ಎಸ್‌ಸಿಪಿ ಟಿಎಸ್‌ಪಿ ಅನುದಾನ ಉಳಿಕೆಯಾಗದಂತೆ ನೋಡಿಕೊಂಡು ಸಮರ್ಪಕವಾಗಿ ಬಳಕೆ ಮಾಡುವಂತೆ ಸೂಚಿಸಿದರು.
ವಿವಿಧ ನಿಮಗಮಗಳಿಂದ ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ, ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬ ಒದಗಿಸುವಂತೆಯೂ, ಅವಶ್ಯ ಇರುವ ಕಾಲನಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಕ್ರಮವಹಿಸಬೇಕು. ಎಲ್ಲ ಇಲಾಖೆಗಳು ಎಸ್‌ಸಿಪಿ- ಟಿಎಸ್‌ಪಿ ಯೋಜನೆಯಡಿಯ ನಿಗದಿತ ಗುರಿಯನ್ನು ಕಾಲಮಿತಿಯೊಳಗೆ ಸಾಧಿಸುವಂತೆ ಸೂಚಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲನಿಗಳಲ್ಲಿ ಕಾರ್ಮಿಕ ಇಲಾಖೆಯಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಬಾಲಕಾರ್ಮಿಕ ನಿಷೇಧ ಕಾಯ್ದೆ ಕುರಿತು ಜಾಗೃತಿ ಮೂಡಿಸಬೇಕು. ಆಯುಷ್ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಆರೋಗ್ಯದ ಮಹತ್ವದ ಕುರಿತು ತಿಳಿ ಹೇಳುವ ಹಾಗೂ ಕಾಲಕಾಲಕ್ಕೆ ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು. ಮೀನುಗಾರಿಕೆ ವೃತ್ತಿಯಲ್ಲಿ ನೂರಾರು ಕುಟುಂಬಗಳು ತೊಡಗಿಸಿಕೊಂಡಿಸಿವೆ. ಇಂತಹ ಅರ್ಹ ಫಲಾನುಭವಿಗಳಿಗೆ ಲೈವ್ ಜಾಕೆಟ್ ಸೇರಿದಂತೆ ಪೂರಕ ಪರಿಕರಗಳನ್ನು ಒದಗಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆಯ ಮೂಲಕ ಅನುಷ್ಟಾನಗೊಳಿಸುತ್ತಿರುವ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ವಸತಿ ಶಾಲೆ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳಿಗೂ ಅವಕಾಶ ಮಾಡಿಕೊಡುವ ಮೂಲಕ ಅವರು ಓದಿನೊಂದಿಗೆ ರಾಜ್ಯದ ಪರಂಪರೆ, ಇತಿಹಾಸ, ಐತಿಹಾಸಿಕ ತಾಣಗಳನ್ನು ವೀಕ್ಷಣೆ ಮಾಡುವುದರಿಂದ ಮತ್ತಷ್ಟು ವಿಷಯದ ಜ್ಞಾನಾರ್ಜನೆಗೆ ಇಂಬು ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳು ಸಮನ್ವಯ ಸಾಧಿಸಿಕೊಂಡು ಅನುಷ್ಟಾನಗೊಳಿಸಲು ಜಿಲ್ಲೆಯ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆಗಾಗ ಕಲಾ ತರಬೇತಿ, ಕಮ್ಮಟ ಆಯೋಜನೆಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಅಶೋಕ ಘೋಣಸಗಿ, ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವಾಣ್, ಹೆಸ್ಕಾಂನ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಪಾಲಿಕೆಯ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕ್ರೀಡಾಧಿಕಾರಿ ರಾಜಶೇಖರ ದೈವಾಡಿ ಮತ್ತಿತರರಿದ್ದರು.