

ನವದೆಹಲಿ: ಕೊವಿಡ್-19 ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ದೆಹಲಿಯ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದಲ್ಲದೆ, ವೀಸಾ ಷರತ್ತುಗಳನ್ನು ಮೀರಿ, ಇಲ್ಲಿಯೇ ಇದ್ದುಕೊಂಡು ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದ 82 ಬಾಂಗ್ಲಾದೇಶಿ ಮುಸ್ಲಿಮರ ವಿರುದ್ಧ ಚಾರ್ಜ್ಶೀಟ್ ದಾಖಲಿಸಲಾಗಿತ್ತು.
ಈಗ ಅವರೆಲ್ಲರಿಗೂ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಮೆಟ್ರೊಪೊಲಿಟಿನ್ ಮ್ಯಾಜಿಸ್ಟ್ರೇಟ್ನ ಮುಖ್ಯ ನ್ಯಾಯಾಧೀಶರಾದ ಗುರ್ಮೋಹನ್ ಕೌರ್ ಅವರು ಎಲ್ಲರಿಗೂ ತಲಾ 10 ಸಾವಿರ ರೂ.ವೈಯಕ್ತಿಕ ಬಾಂಡ್ ಆಧಾರದ ಮೇಲೆ ಜಾಮೀನು ನೀಡಿದ್ದಾರೆ.
ವಿದೇಶಿ ಪ್ರಜೆಗಳ ಪರವಾಗಿ ಅಶಿಮಾ ಮಂಡ್ಲಾ ಮತ್ತು ಮಂದಾಕಿನಿ ಸಿಂಗ್ ಅವರು ವಾದ ಮಂಡನೆ ಮಾಡಿದ್ದರು. ಅವರು ಮಾಡಿದ್ದ ಅಪರಾಧಕ್ಕೆ ಏಳುವರ್ಷಗಳವರೆಗೂ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. 82 ಜನರೂ ಜಾಮೀನಿಗಾಗಿ ಅರ್ಜಿ ಸಲ್ಲಿಸಿ, ಶಿಕ್ಷೆಯಿಂದ ಪಾರು ಮಾಡುವಂತೆ ಮನವಿ ಮಾಡಿದ್ದರು.
ಎಲ್ಲರನ್ನೂ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಒಳಪಡಿಸಲಾಗಿತ್ತು. (ಏಜೆನ್ಸೀಸ್)