ಜಾಕ್‌ವೆಲ್ ಕಾಮಗಾರಿ ಸ್ಥಳಕ್ಕೆ ನಿಯೋಗ ಭೇಟಿ

New Project (19)
Published on

ಬಂಟ್ವಾಳ: ಸುಳ್ಯ ತಾಲೂಕು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಚ್ಚಾ ನೀರನ್ನು ಒದಗಿಸುವ ನಿಟ್ಟಿನಲ್ಲಿ ಶಂಭೂರು-ಬಾಳ್ತಿಲ ಗ್ರಾಮಗಳ ಗಡಿಪ್ರದೇಶವಾದ ಕುಂದಾಯ ಗೋಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಾಕ್‌ವೆಲ್ ಕಾಮಗಾರಿಯ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ನಿಯೋಗ ಬುಧವಾರ ಭೇಟಿ ನೀಡಿ ಪರಿಶೀಲನೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು.

ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪಾಣೆ ಮಂಗಳೂರು ಜಾಕ್‌ವೆಲ್, ಶುದ್ಧೀಕರಣ ಘಟಕವನ್ನು ಕೂಡ ಪರಿಶೀಲಿಸಿ ಸುಳ್ಯ-ಪುತ್ತೂರು ಕ್ಷೇತ್ರಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪೂರ್ಣ ವಿವರ, ಯೋಜನಾ ವರದಿಗಳ ವಿವರ ಪಡೆಯಿತು.

ಬಳಿಕ ಮಾತನಾಡಿದ ಶಾಸಕಿ, ಇದು ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಜಾಕ್‌ವೆಲ್ ಕಾಮಗಾರಿಯ ಪರಿಶೀಲನೆಯ ಜತೆಗೆ ಹಲವು ಅನುಮಾನಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಪ್ರಸ್ತುತ ಕಾಮಗಾರಿ ಭರದಿಂದ ಸಾಗುವಂತೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಸುಳ್ಯ ತಾಲೂಕಿನ 25 ಗ್ರಾ.ಪಂ.ಗಳ ಅಧ್ಯಕ್ಷರು-ಉಪಾಧ್ಯಕ್ಷರನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಮಾಹಿತಿ ನೀಡುವ ಕಾರ್ಯ ಮಾಡಲಿದ್ದೇವೆ. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, 2026ರ ಮಾರ್ಚ್ ವೇಳೆಗೆ ಕಾರ್ಯಾರಂಭಗೊಳ್ಳುವ ಸಾಧ್ಯತೆ ಇದೆ ಎಂದರು.

ಜಿ.ಪಂ.ಮಾಜಿ ಸದಸ್ಯ ಎಸ್.ಎನ್.ಮನ್ಮಥ, ಐವರ್ನಾಡು ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಪ್ರಮುಖರಾದ ಶ್ರೀನಾಥ್ ಬಾಳಿಲ, ಪದ್ಮನಾಭ ಬೂಡು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬಂಟ್ವಾಳ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ನಟೇಶ, ಸಹಾಯಕ ಎಂಜಿನಿಯರ್‌ಗಳಾದ ಜಗದೀಶ್ ನಿಂಬಾಳ್ಳರ್, ನಾಸಿರ್, ಸುಳ್ಯ ಉಪವಿಭಾಗದ ಎಇಇ ಚೈತ್ರ, ಸಹಾಯಕ ಎಂಜಿನಿಯರ್‌ಗಳಾದ ಮಣಿಕಂಠ, ಜನಾರ್ದನ, ಗುತ್ತಿಗೆ ಸಂಸ್ಥೆ ಶಂಕರನಾರಾಯಣ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಶ್ರೀನಿವಾಸ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net