ನವದೆಹಲಿ: ಮೇಕ್ ಇನ್ ಇಂಡಿಯಾ ಕಾರ್ಯಕ್ರಮವು ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲುಗಳನ್ನು ದಾಟುತ್ತಿದೆ. 2023-24ರಲ್ಲಿ ಭಾರತದ ವಾರ್ಷಿಕ ರಕ್ಷಣಾ ಉತ್ಪಾದನೆಯೂ ಸರಿಸುಮಾರು 1.27 ಲಕ್ಷ ಕೋಟಿಗಳ ದಾಖಲೆ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ (ಜುಲೈ 5) ಹೇಳಿದ್ದಾರೆ.
ಇದನ್ನು ಓದಿ: ಅಬಕಾರಿ ನೀತಿ ಪ್ರಕರಣ: ಸಿಬಿಐಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್
ಭಾರತವನ್ನು ಪ್ರಮುಖ ಜಾಗತಿಕ ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಹೆಚ್ಚು ಅನುಕೂಲಕರ ಆಡಳಿತವನ್ನು ರಚಿಸಲು ಸರ್ಕಾರವು ಬದ್ಧವಾಗಿದೆ ಎಂದು ಸರ್ಕಾರದ ಸಾಧನೆ ಕುರಿತು ಸಚಿವ ರಾಜನಾಥ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿಗಳು ಮತ್ತು ಉಪಕ್ರಮಗಳ ಯಶಸ್ವಿ ಅನುಷ್ಠಾನದ ಹಿನ್ನೆಲೆಯಲ್ಲಿ, ರಕ್ಷಣಾ ಸಚಿವಾಲಯವು 2023-24ರ ಆರ್ಥಿಕ ವರ್ಷದಲ್ಲಿ ಸ್ಥಳೀಯ ರಕ್ಷಣಾ ಉತ್ಪಾದನೆಯಲ್ಲಿ ಅತ್ಯಧಿಕ ಬೆಳವಣಿಗೆಯನ್ನು ಸಾಧಿಸಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು, ರಕ್ಷಣಾ ವಸ್ತುಗಳನ್ನು ತಯಾರಿಸುವ ಇತರ ಪಿಎಸ್ಯುಗಳು ಮತ್ತು ಖಾಸಗಿ ಕಂಪನಿಗಳಿಂದ ಪಡೆದ ಮಾಹಿತಿಯ ಪ್ರಕಾರ, ದೇಶದಲ್ಲಿ ರಕ್ಷಣಾ ಉತ್ಪಾದನೆಯ ಮೌಲ್ಯವು 1,26,887 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಹಿಂದಿನ ಹಣಕಾಸು ವರ್ಷದ ರಕ್ಷಣಾ ಉತ್ಪಾದನೆಗೆ ಹೋಲಿಸಿದರೆ ಶೇಕಡಾ 16.7ರಷ್ಟು ಹೆಚ್ಚಳವಾಗಿದೆ. 2022-23ರ ಹಣಕಾಸು ವರ್ಷದಲ್ಲಿ ರಕ್ಷಣಾ ಉತ್ಪಾದನೆಯ ಮೌಲ್ಯವು 1,08,684 ಕೋಟಿ ರೂ.ಗಳಷ್ಟಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿದೆ.
2023-24ರಲ್ಲಿ ಉತ್ಪಾದನೆಯ ಒಟ್ಟು ಮೌಲ್ಯದಲ್ಲಿ 79.2 ಪ್ರತಿಶತವು ಸರ್ಕಾರದಿಂದ ಮತ್ತು 20.8 ಪ್ರತಿಶತ ಖಾಸಗಿ ವಲಯದ ಕೊಡುಗೆಯಾಗಿದೆ. ಸರ್ಕಾರಿ ಮತ್ತು ಖಾಸಗಿ ವಲಯಗಳೆರಡೂ ಸಂಪೂರ್ಣ ಮೌಲ್ಯದ ಪರಿಭಾಷೆಯಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಸ್ಥಿರವಾದ ಬೆಳವಣಿಗೆಯನ್ನು ದಾಖಲಿಸಿವೆ ಎಂದು ಅಂಕಿಅಂಶಗಳಿಂದ ತಿಳಿದಿದೆ. ರಕ್ಷಣಾ ಉತ್ಪಾದನೆಯನ್ನು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯಲು ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ ಉದ್ಯಮದ ರಕ್ಷಣಾ ವಸ್ತುಗಳನ್ನು ತಯಾರಿಸುವ ಉದ್ಯಮವನ್ನು ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದರು. (ಏಜೆನ್ಸೀಸ್)
ಬೆಂಗಳೂರು ಮೂಲದ ಸ್ವದೇಶಿ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಸ್ಥಗಿತ; ಸಂಸ್ಥಾಪಕರು ಕೊಟ್ಟ ಕಾರಣ ಹೀಗಿದೆ