

ಸವಣೂರ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದರುವ ರೈತರ ಪಹಣಿ ಪತ್ರಿಕೆಯಲ್ಲಿನ ನ್ಯೂನತೆಗಳನ್ನು ಇಲಾಖೆ ಅಧಿಕಾರಿಗಳೇ ಖುದ್ದಾಗಿ ಪರಿಶೀಲಿಸಿ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ವಿಭಾಗಾಧಿಕಾರಿ ಮೊಹಮ್ಮದ ಖಿಜರ್ ಹೇಳಿದರು.
ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ರೈತರ ಪಹಣಿ ಪತ್ರಿಕೆ ಸಮಸ್ಯೆಗಳ ಇತ್ಯರ್ಥಪಡಿಸುವ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರ ಜಮೀನಿನ ಪಹಣಿಯಲ್ಲಿರುವ ಹೊಸ ಷರತ್ತು, 15 ವರ್ಷ ಪರಾಧೀನ, ಅದರ್ಸ್ ಇವುಗಳನ್ನು ಪ್ರಥಮ ಹಂತದಲ್ಲಿ ಸರಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು. ಆಗ ರೈತರು ಒಕ್ಕೊರಲಿನಿಂದ, ಸರ್ಕಾರ ಹಾಗೂ ಇನಾಂ ಇವುಗಳನ್ನು ತೆಗೆದು ಹಾಕುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಒತ್ತಾಯಿಸಿದರು. ಉಪ ವಿಭಾಗಾಧಿಕಾರಿ ಮೊಹಮ್ಮದ ಖಿಜರ್ ಮಾತನಾಡಿ, ಸರ್ಕಾರ ಮತ್ತು ಇನಾಂ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಇತ್ಯರ್ಥಪಡಿಸಲಾಗುವುದು ಎಂದರು.
ರೈತ ಸಂಘದ ಅಧ್ಯಕ್ಷ ಪ್ರಕಾಶ ರ್ಬಾ ಮಾತನಾಡಿ, ಸವಣೂರ ಪಟ್ಟಣದಲ್ಲಿ ನೀರಿನ ಹೋರಾಟದಲ್ಲಿ ದಾಖಲೆಯ ಅಭಿಲೇಖನಾಲಯ (ರೆಕಾರ್ಡ್ ರೂಂ)ಗೆ ಬೆಂಕಿಬಿದ್ದ ಕುರಿತು ಪೊಲೀಸ್ ಇಲಾಖೆಯ ಎಫ್ಐಆರ್ನಲ್ಲಿ ದಾಖಲಾಗಿಲ್ಲ. ಇಲಾಖೆ ಸಿಬ್ಬಂದಿ ದಾಖಲೆಗಳನ್ನು ಹುಡುಕದೆ ಸುಟ್ಟಿವೆ ಎಂದು ಹಾರಿಕೆ ಉತ್ತರ ನೀಡುತ್ತ ಬಂದಿದ್ದಾರೆ. ಸಮರ್ಪಕವಾಗಿ ಹುಡುಕಿ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಬೇಕು ಎಂದರು.
ಪಹಣಿಯಲ್ಲಿನ ಸಮಸ್ಯೆಗಳನ್ನು ಸರಿಪಡಿಸುವಂತೆ ಈ ಹಿಂದೆ ಅಹೋರಾತ್ರಿ ಧರಣಿ ಕೈಗೊಂಡ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ಸ್ಥಳಕ್ಕೆ ಆಗಮಿಸಿ, 4 ತಿಂಗಳಲ್ಲಿ ಇತ್ಯರ್ಥಪಡಿಸುವ ಭರವಸೆ ನೀಡಿದ್ದರು. ಆದರೆ ಮಾತಿನಂತೆ ನಡೆದುಕೊಂಡಿಲ್ಲ. ರೈತರ ಸಮಸ್ಯೆ ನಿವಾರಿಸದಿದ್ದರೆ ಧರಣಿ ಸತ್ಯಾಗ್ರಹ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ತಹಸೀಲ್ದಾರರಾದ ಭರತ್ರಾಜ ಕೆ.ಎನ್., ರೇಣುಕಾ, ರೈತ ಸಂಘಟನೆಯ ಪದಾಧಿಕಾರಿಗಳಾದ ಶಿವಪುತ್ರಪ್ಪ ಸಪಗಾಯಿ, ಸಂಗಮೇಶ ಪಿತಾಂಬ್ರಶೆಟ್ಟಿ, ಚನ್ನಪ್ಪ ಮರಡೂರ, ರಮೇಶ ದೊಡ್ಡೂರ, ನಾಗರಾಜ ಬಂಕಾಪುರ, ಮಹೇಶ ರ್ಬಾ, ಪಕ್ಷೀಗೌಡ ನೀರಲಗಿ, ನೂರಅಹ್ಮದ ಮುಲ್ಲಾ, ಅಬ್ದುಲ್ಖಾದರ ಬುಡಂದಿ, ಮಹಾಂತೇಶ ಪರಮ್ಮನವರ, ಸಿದ್ದಣ್ಣ ಕ್ಯಾಲಕೊಂಡ, ರಾಜು ಕುಳೆನೂರ, ಚಂದ್ರು ಜೋಗೇರ ಇತತರು ಇದ್ದರು.
ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಕಚೇರಿಯಲ್ಲಿ ಮಧ್ಯವರ್ತಿಗಳ ಬದಲಾಗಿ ರೈತರು ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಖುದ್ದಾಗಿ ಇಲಾಖೆಗೆ ಆಗಮಿಸಿ ಇತ್ಯರ್ಥಪಡಿಸಿಕೊಳ್ಳಬೇಕು. | ಮೊಹಮ್ಮದ ಖಿಜರ್, ಉಪವಿಭಾಗಾಧಿಕಾರಿ