ಮಾನನಷ್ಟ ಪ್ರಕರಣ; ಕೋರ್ಟ್​ನಲ್ಲಿ ಕ್ಷಮೆ ಕೇಳಿದ ನಟಿ ಕಂಗನಾ ರನೌತ್; ಆದರೆ ನಾನು ಕ್ಷಮಿಸಲ್ಲ ಎಂದ 81 ವರ್ಷದ ಮಹಿಂದರ್ ಕೌರ್|Kangana Ranaut

ವಿಜಯವಾಣಿ - 2025-10-28T161050.052
Published on

ಬಟಿಂಡಾ: ದೆಹಲಿ ಗಡಿಯಲ್ಲಿ 2020 -21ರ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ನಟಿ ಮತ್ತು ಸಂಸದೆ ಕಂಗನಾ ರನೌತ್(Kangana Ranaut) ಸೋಮವಾರ ಬಟಿಂಡಾ ನ್ಯಾಯಾಲಯದಲ್ಲಿ 81 ವರ್ಷದ ಹಿರಿಯ ರೈತ ಮಹಿಳೆ ಮಹಿಂದರ್ ಕೌರ್ ಬಳಿ ಕ್ಷಮೆಯಾಚಿಸಿದ್ದಾರೆ. ಆದರೆ ಅವರನ್ನು ನಾನು ಕ್ಷಮಿಸಲ್ಲ ಎಂದು ಕೌರ್ ಹೇಳಿದ್ದಾರೆ ಎಂದು ಮಂಗಳವಾರ(ಅ. 28) ವರದಿಯಾಗಿದೆ.

2021ರಲ್ಲಿ ಮಹಿಂದರ್ ಕೌರ್ ಇದ್ದ ಫೋಟೋವನ್ನು ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದ ಕಂಗನಾ, ಇಂತಹ ಮಹಿಳೆಯರು 100 ರೂಪಾಯಿಗೆ ಪ್ರತಿಭಟನೆಗೆ ಬರುತ್ತಾರೆ ಎಂದು ಬರೆದಿದ್ದರು. ಆ ಪೋಸ್ಟ್ ಆಧಾರಿಸಿ ಬಟಿಂಡಾ ನ್ಯಾಯಾಲಯದಲ್ಲಿ ಕೌರ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಸೋಮವಾರ ಬಟಿಂಡಾ ಕೋರ್ಟ್​ಗೆ ವಿಚಾರಣೆಗೆ ಆಗಮಿಸಿದ್ದ ಕಂಗನಾ, ಕ್ಷಮೆ ಕೇಳಿದ್ದಾರೆ. ತಮ್ಮ ಟ್ವೀಟ್‌ನಿಂದ ತಪ್ಪು ತಿಳುವಳಿಕೆ ಉಂಟಾಗಿದೆ. ಟ್ವೀಟ್‌ನಲ್ಲಿ ವಯಸ್ಸಾದ ಮಹಿಳೆಯನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಪ್ರತಿಯೊಬ್ಬ ತಾಯಿಯನ್ನು ಗೌರವಿಸುತ್ತೇನೆ. ಪ್ರತಿಯೊಬ್ಬ ತಾಯಿಯೂ ಅವರು ಪಂಜಾಬ್ ಆಗಿರಲಿ ಅಥವಾ ಹಿಮಾಚಲದವರಾಗಿರಲಿ, ನನಗೆ ಗೌರವಾನ್ವಿತರು. ಮಹಿಂದರ್ (ಕೌರ್) ಜಿ ಅವರ ಕುಟುಂಬದೊಂದಿಗೆ ಯಾವುದೇ ತಪ್ಪು ತಿಳುವಳಿಕೆ ಉಂಟಾಗಿದ್ದೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಬಳಿಕ ಕೋರ್ಟ್​ 50,000 ರೂ.ಗಳ ಜಾಮೀನು ಬಾಂಡ್ ನೀಡಿದ ನಂತರ ಅವರಿಗೆ ಜಾಮೀನು ನೀಡಿದೆ. ಕೌರ್ ಅವರ ಆರೋಗ್ಯ ಸರಿಯಿಲ್ಲದ ಕಾರಣ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಅವರ ಪತಿ ಲಾಭ್ ಸಿಂಗ್ ಅವರು ಅವರ ಪರವಾಗಿ ವಾದಿಸಿದರು ಎಂದು ವರದಿಗಳು ಉಲ್ಲೇಖಿಸಿವೆ.

ದಿ ಟ್ರಿಬ್ಯೂನ್ ಜೊತೆ ಮಾತನಾಡಿರುವ ಮಹಿಂದರ್ ಕೌರ್, ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ. ಅವಳು ನನ್ನನ್ನು ಎಂದಿಗೂ ಭೇಟಿಯಾಗಿಲ್ಲ. ನಾನು ಅವಳನ್ನು ಕ್ಷಮಿಸುವುದಿಲ್ಲ. ಅವಳು ದೊಡ್ಡ ನಟಿ ಮತ್ತು ರಾಜಕೀಯ ನಾಯಕಿ, ಆದರೆ ನಾನು ಸಣ್ಣ ರೈತ ಮಹಿಳೆ. ಆದರೂ ಅವಳು ನನ್ನನ್ನು ಈ ವಯಸ್ಸಿನಲ್ಲಿ ನ್ಯಾಯಾಲಯಕ್ಕೆ ಬರುವಂತೆ ಮಾಡಿದ್ದಾಳೆ ಎಂದು ಹೇಳಿದ್ದಾರೆ.

ತಮ್ಮ ಭೇಟಿಯಿಂದ ರಾಜ್ಯದ ಖಜಾನೆಗೆ ಎಷ್ಟು ವೆಚ್ಚವಾಗುತ್ತದೆ ಮತ್ತು ಅದರಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ಅವರು ಅರಿತುಕೊಳ್ಳಬೇಕು. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಹೇಳುತ್ತಾರೆ, ಆದರೆ ಅದು ನಿಜವಲ್ಲ ಇದೇ ವೇಳೆ ಕೌರ್ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net