ವಿಚಾರಣೆ ವೇಳೆ ಮೂರು ಬಾರಿ ಅತ್ತರಂತೆ ದೀಪಿಕಾ!

Deepika Padukone - Final
Published on

ಮುಂಬೈ: ಡ್ರಗ್ಸ್​ ವಿಚಾರವಾಗಿ ಶನಿವಾರ ಬಾಲಿವುಡ್​ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್​, ಶ್ರದ್ಧಾ ಕಪೂರ್​ ಮತ್ತು ಕರಿಷ್ಮಾ ಪ್ರಕಾಶ್​ ಅವರ ವಿಚಾರಣೆ ಮಾಡಲಾಗಿದೆ. ನಾಕೋರ್ಟಿಕ್ಸ್​ ಕಂಟ್ರೋಲ್​ ಬ್ಯೂರೋದ (ಎನ್​ಸಿಬಿ) ಡಿಡಿಜಿ ಮುತ್ತಾ ಅಶೋಕ್​ ಜೈನ್​ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಇನ್ನು ವಿಚಾರಣೆ ವೇಳೆಯಲ್ಲಿ ದೀಪಿಕಾ ಪಡುಕೋಣೆ ಅವರು ಮೂರು ಬಾರಿ ಅತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಡ್ರಗ್ಸ್​ ವಿಚಾರದಲ್ಲಿ ವಿಚಾರಣೆ ನಡೆಸುವ ವಿವಿದ ಹಂತಗಳಲ್ಲಿ ದೀಪಿಕಾ ಮೂರು ಬಾರಿ ಎನ್​ಸಿಬಿ ಅಧಿಕಾರಿಗಳ ಎದುರು ಕಣ್ಣೀರು ಸುರಿಸಿದ್ದಾರೆ. ಒಂದು ಹಂತದಲ್ಲಿ ಎನ್​ಸಿಬಿ ಅಧಿಕಾರಿಗಳು, ಎಮೋಷನಲ್​ ಬ್ಲಾಕ್​ಮೇಲ್​ ಮಾಡದಿರುವಂತೆ ಹೇಳಿದರಂತೆ.

ಇನ್ನು ಈ ಸಂದರ್ಭದಲ್ಲಿ ತಮ್ಮ ಮ್ಯಾನೇಜರ್​ ಕರೀಷ್ಮಾ ಪ್ರಕಾಶ್​ ಜತೆಗೆ ವಾಟ್ಸಾಪ್​ ಚಾಟ್​ ಮಾಡಿದ್ದು ಹೌದು ಎಂದು ಒಪ್ಪಿಕೊಂಡರಂತೆ ದೀಪಿಕಾ. ಚಾಟ್​ ಮಾಡಿದ್ದು ಹೌದಾದರೂ, ಯಾವುದೇ ಕಾರಣಕ್ಕೂ ಡ್ರಗ್ಸ್​ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ, ದೀಪಿಕಾ ಅವರು ಗೋವಾದಲ್ಲಿ ತಮ್ಮ ಹೊಸ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಎನ್​ಸಿಬಿಯಿಂದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಸಿಕ್ಕಿತ್ತು. ಆ ನಂತರ ಮುಂಬೈಗೆ ವಾಪಸ್ಸಾದ ದೀಪಿಕಾ, ಶನಿವಾರ ವಿಚಾರಣೆಗೆ ಹಾಜರಾಗಿದ್ದರು.

ಬರೀ ದೀಪಿಕಾ ಅಷ್ಟೇ ಅಲ್ಲ, ಸಾರಾ ಅಲಿ ಖಾನ್​ ಮತ್ತು ಶ್ರದ್ಧಾ ಕಪೂರ್​ ಸಹ ತಮಗೆ ಡ್ರಗ್ಸ್​ ತೆಗೆದುಕೊಳ್ಳುವ ಅಭ್ಯಾಸ ಇಲ್ಲ ಎಂದು ಎನ್​ಸಿಬಿ ಅಧಿಕಾರಿಗಳಿಗೆ ಹೇಳಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net