

ಮುಂಬೈ: ದೀಪಿಕಾ ಪಡುಕೋಣೆ ( Deepika Padukone ) ಮತ್ತು ರಣವೀರ್ ಸಿಂಗ್ ( Ranveer Singh ) ಬಾಲಿವುಡ್ ಸಿನಿ ಅಭಿಮಾನಿಗಳ ನೆಚ್ಚಿನ ಜೋಡಿ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರ ಪ್ರತಿಯೊಂದು ಮಾಹಿತಿಯನ್ನು ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಾರೆ. ದೀಪಿಕಾ ಮತ್ತು ರಣವೀರ್ ದಂಪತಿಗೆ ದುವಾ ಹೆಸರಿನ ಮಗಳಿರುವುದು ನಿಮಗೆ ಗೊತ್ತಿದೆ ಅಲ್ವಾ? ಹೌದು, ಗೊತ್ತಿದೆ, ಈಗ್ಯಾಕೆ ಆ ವಿಚಾರ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಏಕೆಂದರೆ, ಇದೇ ಮೊದಲ ಬಾರಿಗೆ ದುವಾಳ ಮುಖವನ್ನು ದೀಪ್ವೀರ್ ದಂಪತಿ ಬಹಿರಂಗಪಡಿಸಿದ್ದಾರೆ.
ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಈ ಖುಷಿಯ ಸಂದರ್ಭದಲ್ಲಿ ದೀಪ್ವೀರ್ ದಂಪತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ದುವಾಳನ್ನು ನೋಡಿ ಅಭಿಮಾನಿಗಳು ತುಂಬಾ ಖುಷಿಯಾಗಿದ್ದು, ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.
ಫೋಟೋಗಳಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸೊಗಸಾದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುವುದನ್ನು ನೋಡಬಹುದು. ರಣವೀರ್ ಬಿಳಿ ಬಣ್ಣದ ಕುರ್ತಾ ಮತ್ತು ಅದಕ್ಕೆ ಹೊಂದಿಕೆಯಾಗುವ ಕೋಟ್ ಮತ್ತು ಕುತ್ತಿಗೆಗೆ ಆಭರಣ ಧರಿಸಿದ್ದರೆ, ದೀಪಿಕಾ ಅವರು ಕೆಂಪು ಬಣ್ಣದ ಸೂಟ್ ಮತ್ತು ಸ್ಟೇಟ್‌ಮೆಂಟ್ ಆಭರಣಗಳಲ್ಲಿ ಅದ್ಭುತವಾಗಿ ಕಾಣುತ್ತಾರೆ. ಇನ್ನು ದುವಾ ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದಾಳೆ. ದೀಪಿಕಾ ಅವರು ದುವಾಳನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡಾಗ, ರಣವೀರ್, ದುವಾಳನ್ನು ಅಪ್ಪಿಕೊಂಡಾಗ, ದುವಾ ತನ್ನ ಮುದ್ದಾದ ಪೋಸ್ಗಳಿಂದ ಎಲ್ಲರ ಗಮನ ಸೆಳೆದಿದ್ದಾಳೆ. ಒಂದು ಫೋಟೋದಲ್ಲಿ ದೀಪಿಕಾ ಮತ್ತು ದುವಾ ಒಟ್ಟಿಗೆ ದೀಪಾವಳಿ ಪೂಜೆ ಮಾಡುವುದನ್ನು ನೋಡಬಹುದು.
ಅಂದಹಾಗೆ, ದೀಪಿಕಾ ಅವರು ಈ ಪೋಸ್ಟ್‌ಗೆ "ದೀಪಾವಳಿ ಕಿ ಹಾರ್ದಿಕ್ ಶುಭಕಾಮನಾಂ" ಎಂದು ಹಿಂದಿಯಲ್ಲಿ ಶೀರ್ಷಿಕೆ ನೀಡಿದ್ದಾರೆ. ಈ ಮುದ್ದಾದ ಕುಟುಂಬದ ಫೋಟೋಗಳನ್ನು ನೋಡಿದ ಸೆಲೆಬ್ರಿಟಿಗಳು ಕಾಮೆಂಟ್ಗಳ ಮಹಾಪೂರವನ್ನೇ ಹರಿಸಿದ್ದಾರೆ. ನಟಿ ಹನ್ಸಿಕಾ ಮೋಟ್ವಾನಿ "ತುಂಬಾ ಮುದ್ದಾಗಿದೆ" ಎಂದು ಬರೆದಿದ್ದಾರೆ. ಅದೇ ರೀತಿ ನಟ ರಾಜ್‌ಕುಮಾರ್ ರಾವ್ ಕೂಡ "ತುಂಬಾ ಮುದ್ದಾಗಿದೆ. ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂದು ಕಾಮೆಂಟ್ ಮಾಡಿದ್ದಾರೆ. ನಟಿ ಅನನ್ಯ ಪಾಂಡೆ "ಓ ದೇವರೇ" ಎಂದು ಸೇರಿಸಿದರೆ, ರಿಯಾ ಕಪೂರ್ "ತುಂಬಾ ಮುದ್ದಾಗಿದೆ" ಎಂದಿದ್ದಾರೆ.
ಇನ್ನು ಅಭಿಮಾನಿಗಳು ಕೂಡ ದುವಾ ಫೋಟೋ ನೋಡಿ ಖುಷಿಯಾಗಿದ್ದು, ದೀಪಾವಳಿಯ ಶುಭಾಯಗಳ ಮಹಾಪೂರವನ್ನೇ ಹರಿಸಿದ್ದಾರೆ. ದೀಪಿಕಾಗೆ ಇರುವ ಡಿಂಪಲ್ ದುವಾಗೂ ಇದೆ. ಅಮ್ಮನಂತೆ ಎಷ್ಟೊಂದು ಕ್ಯೂಟ್ ಆಗಿದ್ದಾಳೆ ನೋಡಿ. ಬಾಲಿವುಡ್ಗೆ ಮತ್ತೊಂದು ಹೀರೋಯಿನ್ ಸಿಕ್ಕಳು ಅಂತೆಲ್ಲ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018, ನವೆಂಬರ್ 14ರಂದು ಇಟಲಿಯ ಲೇಕ್ ಕೊಮೊದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು. ಅವರ ವಿವಾಹದಲ್ಲಿ ದೀಪಿಕಾ ಅವರ ಕೊಂಕಣಿ ಪರಂಪರೆ ಮತ್ತು ರಣವೀರ್ ಅವರ ಸಿಂಧಿ ಹಿನ್ನೆಲೆಯನ್ನು ಪ್ರತಿಬಿಂಬಿಸುವ ಎರಡು ವಿಭಿನ್ನ ಸಮಾರಂಭಗಳು ನಡೆದವು. 2013ರಲ್ಲಿ ತೆರೆಕಂಡ 'ಗೋಲಿಯೋಂ ಕಿ ರಾಸಲೀಲಾ ರಾಮ್-ಲೀಲಾ' ಚಿತ್ರದ ಶೂಟಿಂಗ್ ಸೆಟ್‌ಗಳಲ್ಲಿ ಇಬ್ಬರ ಲವ್ ಸ್ಟೋರಿ ಪ್ರಾರಂಭವಾಯಿತು ಮತ್ತು ಹಲವಾರು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, 2015ರಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು 2018 ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ದೀಪಿಕಾ ಮತ್ತು ರಣವೀರ್ 2024, ಸೆಪ್ಟೆಂಬರ್ 8 ರಂದು ತಮ್ಮ ಮೊದಲ ಮಗು ದುವಾ ಪಡುಕೋಣೆಯನ್ನು ಸ್ವಾಗತಿಸಿದರು. (ಏಜೆನ್ಸೀಸ್)