

ಬಂಟ್ವಾಳ: ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ವಜ್ರ ಮಹೋತ್ಸವ ಸಂಭ್ರಮದ ಭಾಗವಾಗಿ ಡಿ.1ರಂದು ಹಳೇ-ಹಾಲಿ ವಿದ್ಯಾರ್ಥಿಗಳ ಕ್ರೀಡಾಕೂಟ, ಡಿ.14 ಮತ್ತು 15ರಂದು ವಜ್ರ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು.
ಬಿ.ಸಿ.ರೋಡಿನಲ್ಲಿ ಮೊಡಂಕಾಪು ವಿದ್ಯಾಭಿವೃದ್ಧಿ ಸಮಿತಿ ಅಧ್ಯಕ್ಷ, ಧರ್ಮಗುರು ವಲೇರಿಯನ್ ಡಿಸೋಜ ಉಪಸ್ಥಿತಿಯಲ್ಲಿ ಸಮಾರಂಭದ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಸೀಮಿತ ಸಂಖ್ಯೆಯ ವಿದ್ಯಾಸಂಸ್ಥೆಗಳಿದ್ದ ಸಂದರ್ಭ ಚರ್ಚ್‌ನ ಧರ್ಮಗುರು ಇ.ಎ.ಕ್ಯಾಸ್ತಲಿನೊ, ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ, ಉದ್ಯಮಿ ವಿಕ್ಟರ್ ರಸ್ಕೀಂ, ಗುಂಡಿಲ ಮಂಜಪ್ಪ ಶೆಟ್ಟಿ ಮೊದಲಾದವರು ಸೇರಿ ವಿದ್ಯಾಭಿವೃದ್ಧಿ ಸಮಿತಿ ಸ್ಥಾಪಿಸಿ 1964ರ ಜೂ.15ರಂದು ವಿದ್ಯಾಸಂಸ್ಥೆ ಸ್ಥಾಪಿಸಿದ್ದರು ಎಂದರು.
ಆಡಳಿತ ಮಂಡಳಿ ಸದಸ್ಯ ಮಹಮ್ಮದ್ ವಳವೂರು, ಮುಖ್ಯಶಿಕ್ಷಕ ಸಾಧು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಜೇಶ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಅರುಣ್ ರೋಶನ್ ಡಿಸೋಜ, ಕೋಶಾಧಿಕಾರಿ ಜೋನ್ ಬ್ಯಾಪ್ಟಿಸ್ಟ್ ಗೋಮ್ಸ್, ಪದಾಧಿಕಾರಿಗಳಾದ ಸತೀಶ್ ಭಂಡಾರಿ, ರಾಮಕೃಷ್ಣ ಆಳ್ವ, ರೋಶನ್ ಡಿಸೋಜ, ಸದಾಶಿವ ಡಿ.ತುಂಬೆ, ದಿವಾಕರ ಶೆಟ್ಟಿ ಪರಾರಿಗುತ್ತು, ಡಾ.ಗೋವರ್ಧನ್ ರಾವ್, ಶಿವಪ್ರಸಾದ್ ಪ್ರಭು, ಸದಾಶಿವ ಬಂಗೇರ, ಹರೀಶ್ ಸಾಲ್ಯಾನ್ ಮೊದಲಾದವರಿದ್ದರು.