

ಬೆಳಕಿನ ಹಬ್ಬ ದೀಪಾವಳಿಗೆ ಅದ್ದೂರಿ ಚಾಲನೆ ದೊರೆತಿದೆ. ಎಲ್ಲೆಡೆ ದೀಪಗಳ ಬೆಳಕಿನ ಸಾಲು, ಜತೆಗೆ ಪಟಾಕಿಯ ಸದ್ದು ಕೇಳಿಬರುತ್ತಿದೆ. ಹಬ್ಬದ ರಂಗು ವಿಜೃಂಭಿಸುತ್ತಿದೆ. ಇನ್ನು ಸ್ಯಾಂಡಲ್ವುಡ್ ನಟಿಯರಾದ ಚೈತ್ರಾ ಹಳ್ಳಿಕೇರಿ, ಸಮೀಕ್ಷಾ ಕೂಡ ದೀಪಾವಳಿ ಸಂಭ್ರಮದಲ್ಲಿದ್ದು, ಇದೇ ಸಮಯದಲ್ಲಿ ಅವರ ಸಿನಿಮಾಗಳ ಬಗ್ಗೆ ಮಹತ್ವದ ಮಾಹಿತಿ ಸಿಗುತ್ತಿರುವುದು ನಟಿಯರ ಹಬ್ಬದ ಖುಷಿ ಇಮ್ಮಡಿಗೊಳಿಸಿದೆ.
ದೀಪಾವಳಿ ಬೆಳಕಿನ ಹಬ್ಬ. ಈ ಹಬ್ಬದಂದು ನಮ್ಮ ಒಳಗಿನ ಆತ್ಮದ ಬೆಳಕನ್ನು ನಾವೆಲ್ಲರೂ ಕಂಡುಕೊಳ್ಳೋಣ. ಮುಂಚೆ ಹೆಚ್ಚು ಪಟಾಕಿ ಸಿಡಿಸಿ ದೀಪಾವಳಿ ಆಚರಿಸುತ್ತಿದ್ದೆವು. ಆದರೆ, ಈಗ ಆರ್ಥಿಕ ಸ್ಥಿತಿ, ಗತಿ ಬದಲಾಗಿದೆ. ಪರಿಸರವೂ ಹೆಚ್ಚು ಮಲಿನಗೊಂಡಿದೆ. ಮನುಷ್ಯರಾಗಿ ನಾವು ಮಾನವೀಯತೆ ಮರೆಯಬಾರದು. ಭೂಮಿ ಮತ್ತು ಪರಿಸರ ಚೆನ್ನಾಗಿದ್ದರೆ ನಾವೂ ಚೆನ್ನಾಗಿರುತ್ತೇವೆ. ಹೀಗಾಗಿ ಹೆಚ್ಚು ಪಟಾಕಿ ಸಿಡಿಸದೇ ಹಸಿರು ದೀಪಾವಳಿ ಆಚರಿಸೋಣ. ಪಟಾಕಿ ಸಿಡಿಸಲೇಬೇಡಿ ಅಂತಲ್ಲ ಬದಲಾಗಿ ತೀರಾ ಹೆಚ್ಚು ಪಟಾಕಿ ಸಿಡಿಸಬೇಡಿ ಎಂದಷ್ಟೇ ನಾನು ಕೇಳಿಕೊಳ್ಳುತ್ತೇನೆ. ಕೆಲಸದ ನಡುವೆಯೇ ನಾನು ಈ ಬಾರಿಯ ದೀಪಾವಳಿ ಆಚರಿಸಲಿದ್ದೇನೆ. ವಿಜಯ್ ಪಾಳೇಗಾರ್ ನಿರ್ದೇಶನದಲ್ಲಿ ಆದಿತ್ಯ ಶಶಿಕುಮಾರ್ ಮತ್ತು ನಾನು ನಟಿಸಿರುವ ‘ರಾಶಿ’ ಇದೇ ತಿಂಗಳ 13ರಂದು ರಿಲೀಸ್ ಆಗುತ್ತಿದೆ. ನಾನಿಲ್ಲಿ ರಾಧ್ಯಾ ಎಂಬ ಕಾಲೇಜು ವಿದ್ಯಾರ್ಥಿನಿ ಪಾತ್ರದಲ್ಲಿ ನಟಿಸಿದ್ದು, ಶನಿವಾರ (ನ. 7) ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಹೀಗಾಗಿ ಸಿನಿಮಾ ಪ್ರಚಾರದ ಬಿಜಿಯ ನಡುವೆಯೇ ದೀಪಾವಳಿ ಆಚರಿಸಲಿದ್ದೇನೆ.
ಸಮೀಕ್ಷಾ, ನಟಿ
ಕಳೆದ ಗಣೇಶ ಚತುರ್ಥಿಗೆ ಊರಲ್ಲಿ ಇರದ ಕಾರಣ ಹಬ್ಬ ಆಚರಿಸಲು ಆಗಿರಲಿಲ್ಲ. ಈಗ ದೀಪಾವಳಿಗೆ ಮನೆಯಲ್ಲಿದ್ದೇನೆ. ಸರಳವಾಗಿ ಹಬ್ಬ ಆಚರಿಸುತ್ತೇವೆ. ಬೆಳಗ್ಗೆ ಪೂಜೆ ಮಾಡಿ, ಹೊಸ ಬಟ್ಟೆ ಧರಿಸಿ, ಸಿಹಿ ಖಾದ್ಯ ಸವಿಯುತ್ತೇವೆ. ಹಬ್ಬದಲ್ಲಿ ಇಡೀ ಮನೆಯ ಅಲಂಕಾರದ ಜವಾಬ್ದಾರಿ ನನ್ನದು. ಮನೆ ತುಂಬಾ ಹಣತೆ ಹಚ್ಚಿ, ದೀಪ ಬೆಳಗುತ್ತೇವೆ. ಕಾರ್ತಿಕ ಮಾಸದಲ್ಲಿಯೇ ನಾನು ಜನಿಸಿದ್ದು, ಹಾಗಾಗಿ, ದೀಪಾವಳಿ ಆಸು-ಪಾಸು ನನ್ನ ಹುಟ್ಟುಹಬ್ಬ ಬರುತ್ತದೆ. ಇತ್ತೀಚೆಗಷ್ಟೇ ಬರ್ತ್ಡೇ ಆಚರಿಸಿಕೊಂಡೆ. ಇದೀಗ ಹಬ್ಬದ ಸಂಭ್ರಮದಲ್ಲಿ ಹೊಸ ವಾಚ್ ಖರೀದಿಸಿದ್ದೇನೆ. ಜೀವನದಲ್ಲಿಯೂ ನನ್ನ ಸಮಯ ಬದಲಾಗಿದೆ. ತುಂಬಾ ವರ್ಷಗಳ ಬಳಿಕ ‘ಹಲ್ಕಾ ಡಾನ್’ ಮೂಲಕ ಸ್ಯಾಂಡಲ್ವುಡ್ಗೆ ಮರಳಿದ್ದೇನೆ. ಗುರುವಾರ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಹೀಗಾಗಿ, ಈ ದೀಪಾವಳಿ ನನಗೆ ಡಬಲ್ ಸಂಭ್ರಮ ನೀಡುತ್ತಿದೆ. ದೀಪಾವಳಿ ಎಂದರೆ ಬೆಳಕಿನ ಹಬ್ಬ. ಮನೆ ತುಂಬಾ ಹಣತೆ ಹಚ್ಚಿ, ಎಚ್ಚರಿಕೆಯಿಂದ ಪಟಾಕಿ ಹೊಡೆದು ಸಂಭ್ರಮಿಸುತ್ತೇವೆ, ‘ಹಲ್ಕಾ ಡಾನ್’ ಸಿನಿಮಾ ಯಶಸ್ವಿಯಾಗಲಿ ಹಾಗೂ ಹೊಸಬರ ಚಿತ್ರಗಳು ಗೆಲ್ಲಲಿ ಎಂಬುದೇ ದೇವರಲ್ಲಿ ನನ್ನ ಪ್ರಾರ್ಥನೆ.
ಚೈತ್ರಾ ಹಳ್ಳಿಕೇರಿ, ನಟಿ