ಫಿನ್​ಟೆಕ್​ ಅಭಿವೃದ್ಧಿ ಪಥದ ಹೊಸ ಹೆಜ್ಜೆ: ಜಗತ್ತಿಗೆ ಮಾದರಿಯಾಗುವತ್ತ ಭಾರತ...! Fintech

Fintech
ಫಿನ್​ಟೆಕ್​ ಅಭಿವೃದ್ಧಿ ಪಥದ ಹೊಸ ಹೆಜ್ಜೆ: ಜಗತ್ತಿಗೆ ಮಾದರಿಯಾಗುವತ್ತ ಭಾರತ...!
Published on: 

ಹಣಕಾಸು ಮತ್ತು ತಂತ್ರಜ್ಞಾನವನ್ನು ಬೆಸೆಯುವ ಫಿನ್​ಟೆಕ್ ಕ್ಷೇತ್ರದಲ್ಲಿ ಭಾರತ ವೇಗವಾಗಿ ಮುನ್ನಡೆಯುತ್ತಿದೆ. ಯುಪಿಐ ಮೂಲಕ ಕ್ಷಣಾರ್ಧದಲ್ಲಿ ಹಣ ವರ್ಗಾವಣೆ, ಆಧಾರ್ ಆಧಾರಿತ ಸೇವೆಗಳು, ಡಿಜಿಲಾಕರ್​ನಿಂದ ದಾಖಲೆಗಳ ಸಂಗ್ರಹ ಮತ್ತು ಡಿಜಿಟಲ್ ಬ್ಯಾಂಕಿಂಗ್​ವರೆಗೆ ಹಲವು ಸೌಲಭ್ಯಗಳು ಈಗಾಗಲೇ ಜನಜೀವನದ ಭಾಗವಾಗಿಬಿಟ್ಟಿವೆ. ಅಮೆರಿಕ ಮತ್ತು ಬ್ರಿಟನ್ ನಂತರ ಫಿನ್​ಟೆಕ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಭಾರತ, ತನ್ನ ಡಿಜಿಟಲ್ ವ್ಯವಸ್ಥೆಗಳನ್ನು ಇತರ ದೇಶಗಳಿಗೂ ವಿಸ್ತರಿಸುತ್ತಿದೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಸಾಲ, ಸೈಬರ್ ಸುರಕ್ಷತೆ ಸೇರಿದಂತೆ ಹೊಸ ತಂತ್ರಜ್ಞಾನಗಳು ಈ ಕ್ಷೇತ್ರಕ್ಕೆ ಮತ್ತಷ್ಟು ವೇಗ ನೀಡುತ್ತಿವೆ. ಉದ್ಯೋಗಾವಕಾಶಗಳ ವಿಸ್ತರಣೆಯ ಜತೆಗೆ ಹಣಕಾಸು ವಹಿವಾಟನ್ನು ಸರಳಗೊಳಿಸುವ ಸಾಮರ್ಥ್ಯವೂ ಈ ಕ್ಷೇತ್ರಕ್ಕಿದೆ. ಆದರೆ ಸುರಕ್ಷತೆ, ನಿಯಂತ್ರಣ ಮತ್ತು ವಂಚನೆ ತಡೆ ಕೂಡ ಅಷ್ಟೇ ಮುಖ್ಯ.

ಫೈನಾನ್ಸ್ ಹಾಗೂ ಟೆಕ್ನಾಲಜಿ ಇವೆರಡನ್ನು ಜತೆಗೆ ಸೇರಿಸಿ ಹೈಬ್ರಿಡ್ ಮಾದರಿಯಲ್ಲಿ ವ್ಯವಹಾರ ಮಾಡುವ ವಿಧಾನವೇ ಫಿನ್ ಟೆಕ್. ಕಳೆದ ಐದು ವರ್ಷಗಳಲ್ಲಿ ಈ ಕುರಿತಂತೆ ಹಲವಾರು ಹೊಸ ಇಂಟಿಗ್ರೇಶನ್ ಕೆಲಸಗಳು ನಮಗೆಲ್ಲ ಅಚ್ಚರಿ ಮೂಡಿಸಿವೆ. ಕೇವಲ ಬೆರಳ ತುದಿಯಲ್ಲಿ ಹಣವನ್ನು ಕಳಿಸುವುದು, ಷೇರು ಮಾರಾಟ ಮಾಡುವುದು, ಸಾಲ ಪಡೆಯುವುದು, ಮನಿ ಎಕ್ಸ್​ಚೇಂಜ್ ಮಾಡುವುದು, ಡಾಕ್ಯುಮೆಂಟ್ ಅಥವಾ ಆಧಾರ್ ಲಿಂಕ್ ಮಾಡುವುದು. ಹೀಗೆ ಹಲವಾರು ವ್ಯವಹಾರಗಳನ್ನು ಅದೂ ಕ್ಷಣಾರ್ಧದಲ್ಲಿ ಮಾಡಲಾಗುತ್ತಿದೆ! ದಶಕಗಳ ಹಿಂದೆ ಇವುಗಳನ್ನು ಊಹಿಸಲೂ ಅಸಾಧ್ಯವಾಗಿತ್ತು. ವಿಶೇಷವೆಂದರೆ ಭಾರತ ಸದ್ದಿಲ್ಲದೆ ಈ ಫಿನ್ ಟೆಕ್ ವಿಷಯದಲ್ಲಿ ಪ್ರಬಲ ದೇಶವಾಗಿ ಬೆಳೆಯುತ್ತಿರುವುದು. ಅಮೆರಿಕ ಮತ್ತು ಯುನೈಟೆಡ್ ಕಿಂಗ್ಡಮ್ ನಂತರ ಮೂರನೇ ಸ್ಥಾನ ಭಾರತಕ್ಕೆ. ವಿಶೇಷವೆಂದರೆ ಅಮೆರಿಕದಲ್ಲಿ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಹೆಚ್ಚಿನವರು ಅನಿವಾಸಿ ಟೆಕ್ಕಿ ಭಾರತೀಯರು ಎನ್ನುವುದನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ.

ನಮ್ಮ ದೇಶದ ಯುಪಿಐ, ಆಧಾರ್, ಜನಧನ್- ಇವುಗಳನ್ನು ಉಪಯೋಗಿಸುತ್ತಿರುವ ರೀತಿ ನಿಜಕ್ಕೂ ಆಶ್ಚರ್ಯಕರ. ಗೂಗಲ್ ಪೇ ಮುಂತಾದ ಆಪ್​ಗಳ ಮೂಲಕ ಮೊಬೈಲ್​ನಲ್ಲಿ ಎಲ್ಲವೂ ಸುಲಭ ಮತ್ತು ಕ್ಷಣಿಕ ಮತ್ತು ಸಂತೋಷದಾಯಕ. 2018ರಲ್ಲಿ ಎರಡು ಕೋಟಿ ಬಳಕೆದಾರರಿದ್ದರೆ ಈಗ 23 ಕೋಟಿಗಿಂತಲೂ ಹೆಚ್ಚು ಜನ ಡಿಜಿಟಲ್ ಪೇಮೆಂಟ್ ಬಳಕೆದಾರರಿದ್ದಾರೆ. ನಮ್ಮ ಯುಪಿಐ, ಆಧಾರ್, ಡಿಜಿ ಲಾಕರ್, ಜನ್​ಧನ್ ಮಾದರಿಯನ್ನು ವಿದೇಶಗಳು ಕೊಂಡಾಡುತ್ತಿವೆ. ಫ್ರಾನ್ಸ್, ಮಾರಿಷಸ್, ಸಿಂಗಾಪುರ, ಯುಎಇ ಮತ್ತು ಇತರ ಹಲವು ವಿದೇಶಗಳು ಭಾರತದೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. ಮತ್ತು ಫಿನ್ ಟೆಕ್ ಸಾಮರ್ಥ್ಯವನ್ನು ಬಳಸುವತ್ತ ಮುನ್ನಡೆದಿವೆ.

ಎಐ ಪ್ರವೇಶ

ಇತ್ತೀಚೆಗೆ ಫಿನ್ ಟೆಕ್ ತಂತ್ರಜ್ಞಾನದೊಳಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಪ್ರವೇಶಿಸಿದೆ. ಸೆಮಿ ಕಂಡಕ್ಟರ್ ಟೆಕ್ನಾಲಜಿ (ಚಿಪ್ ತಯಾರಿಕೆ) ಭಾರತದ ಮೇಕ್ ಇನ್ ಇಂಡಿಯಾದ ಭಾಗವಾಗಿ ಹೆಚ್ಚು ಕ್ರಿಯಾಶೀಲವಾಗಿ ಬೆಳೆಯುತ್ತಿದೆ. ಸದ್ಯ ವೇಗದ ಮತ್ತು ಸಣ್ಣ ಚಿಪ್ ಉತ್ಪಾದನಾ ಸಾಮರ್ಥ್ಯ ನಮಗೆ ಇಲ್ಲ. ಇದಕ್ಕಾಗಿ ನಾವು ವಿದೇಶಗಳನ್ನು ಅವಲಂಬಿಸಿದ್ದೇವೆ. ಹೊಸ ಖಾಸಗಿ ಕಂಪನಿಗಳಿಗೆ ಮತ್ತು ವಿದೇಶಿ ಕಂಪನಿಗಳಿಗೆ ಡಿಜಿಟಲ್ ಇಂಡಿಯಾ ಪಾಲಿಸಿ ಸಹಕಾರಿಯಾಗಿದೆ. ನಮ್ಮ 5ಜಿ ಇಂಟರ್ನೆಟ್ ನೆಟ್​ವರ್ಕ್ ಜಾಲ ಇವೆಲ್ಲವುಗಳ ಬುನಾದಿಯಾಗಿದೆ. ಸಿಸ್ಟಮ್ ಆನ್ ಚಿಪ್ (ಎಸ್​ಒಸಿ) ಇದೆಲ್ಲದರ ಹೃದಯವಾಗಿದೆ.

ಫಿನ್ ಟೆಕ್​ನ ಒಟ್ಟು ವಿಚಾರಗಳಲ್ಲಿ ಡಿಜಿಟಲ್ ಪೇಮೆಂಟ್ ಹೆಚ್ಚು ಪ್ರಚಲಿತವಾದರೆ ನಿಯೋ ಬ್ಯಾಂಕ್ (ಆಟೋಮ್ಯಾಟಿಕ್ ಬ್ಯಾಂಕಿಂಗ್), ರೋಬೋ ಅಡ್ವೈಸರ್ (ಆಲ್ಗರಿಥಮ್ ಮೂಲಕ ವ್ಯವಹಾರ), ಎಎಲ್​ಟಿ ಲೆಂಡಿಂಗ್ (ಆನ್​ಲೈನ್ ಸಾಲ ಸೌಲಭ್ಯ), ಡಿ ಫೈ (ಡಿ ಸೆಂಟ್ರಲೈಸ್ಡ್ ಕರೆನ್ಸಿ) ಈಗ ಹೆಚ್ಚು ವೇಗ ಪಡೆದಿವೆ. ಸೈಬರ್ ಸೆಕ್ಯೂರಿಟಿ, ಪೇಮೆಂಟ್ ಗೇಟ್​ವೇ, ಟ್ಯಾಕ್ಸೇಶನ್, ಡೇಟಾ ಅನಲಿಟಿಕ್ಸ್, ಬ್ಲ್ಯಾಕ್ ಚೈನ್ ಸೊಲ್ಯೂಷನ್, ಇನ್ಸೂಟೆಕ್, ಡಿಜಿಟಲ್ ಬ್ಯಾಂಕಿಂಗ್, ಎಐ ಮಷಿನ್ ಲರ್ನಿಂಗ್, ಲೆಂಡಿಂಗ್ ಸೊಲ್ಯೂಷನ್, ವೆಲ್ತ್ ಟೆಕ್... ಇವು ಈಗಾಗಲೇ ರೂಪುಗೊಂಡಿದ್ದು ಪಾಕ ಬರುವ ಹಂತದಲ್ಲಿದೆ.

ಡಿಜಿ ಲಾಕರ್: ನಿಮ್ಮ ಲೈಸೆನ್ಸ್, ಪ್ಯಾನ್ ಕಾರ್ಡ್, ವೋಟರ್ ಕಾರ್ಡ್, ಪಾಸ್​ಪೋರ್ಟ್.. ಹೀಗೆ ಎಲ್ಲ ಡಾಕ್ಯುಮೆಂಟ್​ಗಳನ್ನು ಸ್ಕಾ್ಯನ್ ಮಾಡಿ ಡಿಜಿ ಲಾಕರ್ ಒಳಗಡೆ ಸೇರಿಸಿದರೆ ಅವುಗಳಿಗೆ ಸರಕಾರ ಒರಿಜಿನಲ್ ಎಂಬ ಮನ್ನಣೆ ನೀಡುತ್ತದೆ. ಫಿಸಿಕಲ್ ಕಾಪಿ ಅಗತ್ಯವಿಲ್ಲ. ಸದ್ಯ ಇದು ಭಾರತ ದೇಶದೊಳಗೆ ಮಾತ್ರ. ಕಾನೂನಾತ್ಮಕವಾಗಿ ಒಪ್ಪಿಕೊಂಡಿದ್ದರೆ ಮುಂದಿನ ದಿನಗಳಲ್ಲಿ ಸಹಯೋಗ ರಾಷ್ಟ್ರಗಳು ಇದಕ್ಕೆ ಮನ್ನಣೆ ನೀಡಲಿವೆ. ಕನಿಷ್ಠ ಈ ಟೆಕ್ನಾಲಜಿಯನ್ನು ತಮ್ಮ ದೇಶದಲ್ಲಿ ಆರಂಭಿಸಲಿವೆ. ಈ ಹೊಸ ಟೆಕ್ನಾಲಜಿ ಮುಂದಿನ ದಿನಗಳಲ್ಲಿ ಡಾಕ್ಯುಮೆಂಟೇಶನ್​ಅನ್ನು ಸುಭದ್ರವಾಗಿ ಉಳಿಸುವಲ್ಲಿ ಮತ್ತು ಡುಪ್ಲಿಕೇಟ್ ಮಾಡಿ ಮೋಸ ಮಾಡುವ ವಿಚಾರವನ್ನು ಹತೋಟಿಯಲ್ಲಿ ಇಡಲಿದೆ.

ಫೆಂಟಾಸ್ಟಿಕ್ ಸಾಮರ್ಥ್ಯ

ಭಾರತದ ಫಿನ್ ಟೆಕ್​ನ ಫೆಂಟಾಸ್ಟಿಕ್ ಸಾಮರ್ಥ್ಯದ ಕುರಿತು ಹಲವಾರು ವಿಚಾರಗಳನ್ನು ಸಂಶೋಧನಾತ್ಮಕವಾಗಿ ಕೆಪಿಎಂಜಿ, ಪಿಡಬ್ಲೂ್ಯಸಿ ಜಗತ್ತಿನಾದ್ಯಂತ ಪ್ರಸ್ತುತಪಡಿಸುತ್ತಿವೆ. ಈ ಕುರಿತಂತೆ ಹಲವಾರು ವಿಚಾರ ಸಂಕಿರಣಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಬ್ರಿಟನ್ನಿನ ಮಾಜಿ ಪ್ರಧಾನಿ ಟೋನಿ ಬ್ಲೇರ್ ‘ಭಾರತ ಫಿನ್ ಟೆಕ್​ನಿಂದ ಸೂಪರ್ ಪವರ್ ಆಗಲಿದೆ’ ಎಂದರೆ; ಕಾಂಗ್ರೆಸ್ ಸಂಸದ ಶಶಿ ತರೂರ್ ‘ಫಿನ್ ಟೆಕ್ ಭಾರತದ ಬಹುದೊಡ್ಡ ಸಾಮರ್ಥ್ಯ’ ಎಂದಿದ್ದಾರೆ. ದೇಶದ ಹಲವಾರು ಬ್ಯಾಂಕಿಂಗ್ ದಿಗ್ಗಜರು, ಎನ್​ಬಿಎಫ್​ಸಿ ಮತ್ತು ಹಣಕಾಸು ತಜ್ಞರು ಫಿನ್ ಟೆಕ್ ವಿಚಾರಗಳನ್ನು ಈಗಾಗಲೇ ಒಪ್ಪಿಕೊಂಡು ಅಪ್ಪಿಕೊಂಡು ಮುನ್ನಡೆಯುತ್ತಿದ್ದಾರೆ. ನಮ್ಮ ದೇಶದ ಹಲವಾರು ಹಣಕಾಸು ಕಂಪನಿಗಳು ಇತರ ದೇಶಗಳತ್ತ ವ್ಯವಹಾರವನ್ನು ವಿಸ್ತರಿಸಲು ಹೊರಟಿವೆ. ಇದು ಭಾರತದ ದಿಟ್ಟ ಮತ್ತು ದೃಢ ಹೆಜ್ಜೆಯಾಗಿದೆ. ಇದು ಹೊಸ ಭಾಷ್ಯವನ್ನು ಬರೆದು ಜಗತ್ತಿಗೆ ಮಾದರಿಯಾಗಲಿದೆ.

ಜಾಗತಿಕ ಕರೆನ್ಸಿ ಯುದ್ಧಕ್ಕೆ ಕಾರಣವಾಗಬಹುದೇ ಫಿನ್ ಟೆಕ್?

ಜಾಗತಿಕವಾಗಿ ಫಿನ್ ಟೆಕ್ ಕೆಲಸಗಳು ಹೆಚ್ಚಾದಂತೆ ಕರೆನ್ಸಿಯ ಕುರಿತ ವಿಚಾರಗಳು ಮುನ್ನೆಲೆಗೆ ಬರಲಿವೆ. ಡಾಲರ್, ರೂಪಾಯಿ, ಯುವಾನ್, ಪೌಂಡ್... ಇವುಗಳ ನಡುವಿನ ಮೌಲ್ಯಮಾಪನ ಬದಲಾಗಲಿದೆ. ಮನಿ ಲಾಂಡರಿಂಗ್ ಹವಾಲಾ ಹೆಚ್ಚುವ ಸಾಧ್ಯತೆ ಇದೆ. ಇದು ಷೇರು ಮಾರುಕಟ್ಟೆ ಹಾಗೂ ಜಾಗತಿಕ ವ್ಯವಹಾರ ಒಪ್ಪಂದಗಳ ಮೇಲೂ ಬಹಳಷ್ಟು ಪರಿಣಾಮ ಬೀರಲಿದೆ. ಈಗಾಗಲೇ ಇಂಧನ ಮತ್ತು ಪರಮಾಣು ಹಿನ್ನೆಲೆಯಲ್ಲಿ ಯುದ್ಧ ಪರಿಣಾಮ ಎದುರಿಸುತ್ತಿರುವ ಜಗತ್ತು ‘ಫಿನ್ ಟೆಕ್’ ಹಿನ್ನೆಲೆಯಲ್ಲಿ ಹೊಸ ಯುದ್ಧದ ವಾತಾವರಣ ನಿರ್ವಿುಸಲಿದೆ. ದೊಡ್ಡಣ್ಣನಂತೆ ವರ್ತಿಸುವ ಅಮೆರಿಕಾ ತನ್ನ ಸಾಮರ್ಥ್ಯ ಉಳಿಸಿಕೊಳ್ಳಲು ಎಲ್ಲ ಬಗೆಯ ಹೋರಾಟ ನಡೆಸಲಿದೆ. ಆದರೆ ಭಾರತ ಇವೆಲ್ಲವನ್ನು ಮೀರಿ ಜಗತ್ತಿಗೆ ಒಂದು ಮಾದರಿ ದೇಶವಾಗಿ ತನ್ನೆಲ್ಲ ಫಿನ್ ಟೆಕ್ ಸೌಲಭ್ಯಗಳನ್ನು ವಿಸ್ತರಿಸಲಿದೆ. ಯಾಕೆಂದರೆ ಸದ್ಯದ ಸರಕಾರ ಇದೇ ಚಿಂತನೆಯಲ್ಲಿ ಮುಂದುವರಿಯುತ್ತಿದೆ. ‘ಫಿನ್ ಟೆಕ್ ಉಪಕ್ರಮಗಳು ಜಾಗತಿಕವಾಗಿ ಎಲ್ಲ ಜನರ ಉಪಯೋಗಕ್ಕೆ ಸಹಕಾರಿಯಾಗಬೇಕು. ಭಾರತ ಇದನ್ನು ಜನರಿಂದ ಜನರಿಗಾಗಿ ಮಾದರಿಯಲ್ಲಿ, ವ್ಯವಹಾರವನ್ನು ಮೀರಿ ಇಡೀ ಜಗತ್ತಿನ ಸಹಭಾಗಿತ್ವದೊಂದಿಗೆ ಕೆಲಸ ಮಾಡಲಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತೇ ಇದಕ್ಕೆ ಸಾಕ್ಷಿಯಾಗಿದೆ.

ವಿಶ್ವ ಬ್ಯಾಂಕ್ ಶ್ಲಾಘನೆ

ಭಾರತ ಜಗತ್ತಿಗೆ ಹೊಸ ಆಪ್ಸ್ ನೀಡುವುದಕ್ಕಿಂತಲೂ ದೊಡ್ಡ ಕೆಲಸ ಮಾಡುತ್ತಿದೆ- ಆಪ್ಸ್ ನಿರ್ವಿುಸಲು ಬೇಕಾದ ಡಿಜಿಟಲ್ ಹೆದ್ದಾರಿಗಳನ್ನು ನಿರ್ವಿುಸುತ್ತಿದೆ. ಆಧಾರ್ (ಗುರುತು), ಯುಪಿಐ (ಹಣದ ವರ್ಗಾವಣೆ), ಡಿಜಿಲಾಕರ್ (ದಾಖಲೆ ), ಒಸಿಇಎನ್ (ಸಾಲ), ಒಎನ್​ಡಿಸಿ (ವಾಣಿಜ್ಯ ವ್ಯವಹಾರ) ಮುಂತಾದವು ಅದಕ್ಕೆ ಉದಾಹರಣೆಗಳು. ಇವುಗಳಿಂದ ನಮ್ಮದೈನಂದಿನ ಬದುಕು ಸುಗಮವಾಗಿರುವುದರ ಕುರಿತು ವಿಶ್ವ ಬ್ಯಾಂಕ್ ಈಗಾಗಲೇ ವಿಶೇಷ ಶ್ಲಾಘನೆ ಮಾಡಿದೆ.

ಒಟಿಪಿ ವ್ಯವಸ್ಥೆಯಿಂದಾಚೆ...

ಡಿಜಿಟಲ್ ಫೈನಾನ್ಸ್ ಸಿಸ್ಟಮ್ ಹೆಚ್ಚು ಸಹಾಯಕವಾಗಲು ಇತ್ತೀಚೆಗೆ ಒಟಿಪಿಯನ್ನು ಮೀರಿದ ‘ಬಿಯಾಂಡ್ ಒಟಿಪಿ’ ಎನ್ನುವ ಪರಿಭಾಷೆ ಸೆಕ್ಯೂರಿಟಿ ಮತ್ತು ರೆಗ್ಯುಲೇಶನ್ ಹಾಗೆಯೇ ಎಐ ಸೇಫ್ಟಿ ಮತ್ತು ಎಐ ರೇಸ್ ಎನ್ನುವ ಜಾರ್ಗನ್​ಗಳು ಬರುತ್ತಿವೆ. ‘ಜವಾಬ್ದಾರಿಯುತ ದೇಶಗಳು ಇದನ್ನು ಮನಗಂಡು ಮುನ್ನಡೆಯಬೇಕು’ ಎಂಬ ವಾದ ನಡೆಯುತ್ತಿದೆ. ಏನೇ ಆದರೂ ‘ಫಿನ್ ಟೆಕ್’ ವಿಚಾರಧಾರೆ ಫೆಂಟಾಸ್ಟಿಕ್ ಫಾರ್ ಇಂಡಿಯಾ ಎನ್ನಲೇಬೇಕು.

ದೆಹಲಿ ಫಿನ್ ಟೆಕ್ ಎಕ್ಸ್​ಪೋ ಮೇಲೆ ಎಲ್ಲರ ಕಣ್ಣು

ಜಗತ್ತಿಗೆ ಮಾದರಿಯಾಗುವ ನಿಟ್ಟಿನಲ್ಲಿ ಭಾರತ 2027ರ ಮಾರ್ಚ್ 23ರಿಂದ 25ರವರೆಗೆ ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದಲ್ಲಿ ವಿಶೇಷ ಫಿನ್ ಟೆಕ್ ಸಮ್ಮೇಳನವನ್ನು ಆಯೋಜಿಸಲಿದೆ. ಇದರಲ್ಲಿ ಹಲವಾರು ವಿಚಾರಗಳ ಬಗ್ಗೆ ಪರಿಣಿತರು ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಹಾಗೆಯೇ ವಿಚಾರ ವಿನಿಮಯ ಮತ್ತು ವ್ಯಾಪಾರ ವಿನಿಮಯ ನಡೆಯಲಿದೆ. ಜಾಗತಿಕವಾಗಿ ಎಲ್ಲರನ್ನೂ ಒಂದೇ ಸೂರಿನಡಿ ತರುವ ಪ್ರಯತ್ನ ಈ ಎಕ್ಸ್​ಪೋದ ಉದ್ದೇಶವಾಗಿದೆ. ಭಾರತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ), ನ್ಯಾಷನಲ್ ಪೇಮೆಂಟ್ ಕಾರ್ಪೆರೇಷನ್ ಆಫ್ ಇಂಡಿಯಾ (ಎನ್​ಪಿಸಿಐ)

ಡಿಪಾರ್ಟ್​ವೆುಂಟ್ ಆಫ್ ಫೈನಾನ್ಷಿಯಲ್ ಸರ್ವಿಸಸ್ (ಡಿಎಫ್​ಎಸ್) ನಮ್ಮ ‘ಫಿನ್ ಟೆಕ್’ನ ಜೀವಾಳವಾಗಿವೆ. ಹಲವಾರು ಪ್ರೖೆವೇಟ್ ಕಂಪನಿಗಳು ವಿಶೇಷವಾಗಿ ಕೆಲಸ ಮಾಡಿದರೂ ನಿಯಮಗಳಿಗಾಗಿ ಮತ್ತು ನಿಯಂತ್ರಣದ ಹಿನ್ನೆಲೆಯಲ್ಲಿ ಸರಕಾರದ ಈ ಅಧೀನ ಸಂಸ್ಥೆಗಳು ಪ್ರಬಲವಾಗಿ ಮುಂದೆ ನಿಂತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿವೆ.

ಫಿನ್ ಟೆಕ್​ನ ಮುಂದಿನ ಹೆಜ್ಜೆಗಳು

ಜಗತ್ತಿನಾದ್ಯಂತ ಮುಂದಿನ ಸಾಮರ್ಥ್ಯ ಮತ್ತು ಸಾಧ್ಯತೆಗಳ ಮೇಲೆ ಹಲವಾರು ನೀಲಿ ನಕ್ಷೆ ತಯಾರಿ ನಡೆಯುತ್ತಿದೆ. ಭಾರತದಲ್ಲಿ ಇಂಟರ್ ಮಿನಿಸ್ಟೀರಿಯಲ್ ಇಂಡಸ್ಟ್ರಿ ಕಮಿಟಿ (ಐಎಂಐಸಿಎಫ್) ಆರಂಭಿಸಿದೆ. ಎಐ ಬಳಸಿ ಕಾರ್ಯಕ್ಷಮತೆ ಹೆಚ್ಚಿಸುವ, ಸೆಮಿಕಂಡಕ್ಟರ್ ಉದ್ಯಮಕ್ಕೆ ಒತ್ತು ನೀಡುತ್ತ ಬಳಕೆದಾರರ ಟ್ರಾನ್ಸಾಕ್ಷನ್ ಸೇಫ್ಟಿ, ಕಾನೂನಾತ್ಮಕ ಬದಲಾವಣೆ, ಹೀಗೆ ವಿವಿಧ ಇಲಾಖೆಗಳನ್ನು ಒಳಗೊಂಡು ರೂಪುರೇಷೆ ನಿರ್ವಣವಾಗಲಿದೆ. ಜಾಗತಿಕ ಫೈನಾನ್ಸಿಯಲ್ ಹಬ್ ಲಂಡನ್​ನಲ್ಲಿ ಡಿಜಿಟಲ್ ರೆಗ್ಯುಲೇಷನ್ ಪ್ಲಾನ್ ನಡೆಯುತ್ತಿದೆ. ಆಂಟಿ ಮನಿ ಲಾಂಡರಿಂಗ್ ಪಾಲಿಸಿಯ ಡ್ರಾಫ್ಟ್ ಅಮೆರಿಕದಲ್ಲಿ ತಯಾರಾಗುತ್ತಿದೆ. ಹೀಗಾಗಿ ಮುಂದಿನ ವರ್ಷದಲ್ಲಿ ಈ ಕುರಿತಂತೆ ಹಲವಾರು ಆರ್ಕಿಟೆಕ್ಚರಲ್ ಪ್ಲ್ಯಾನ್​ಗಳು ಬರಲಿವೆ.

ಫಿನ್ ಟೆಕ್ ಕಂಪನಿಗಳಿಗೆ ಸುವರ್ಣ ಕಾಲ

ಕಂಪನಿಗಳ ಮರ್ಜರ್ ಮತ್ತು ಅಕ್ವಿಸಿಶನ್, ವಿದೇಶಿ ವಿನಿಮಯ, ಷೇರು ಮಾರುಕಟ್ಟೆ ಪ್ರವೇಶ, ಇನ್ಸೂರೆನ್ಸ್ ಮ್ಯಾನೇಜ್​ವೆುಂಟ್ ಇವುಗಳಲ್ಲಿ ಹೆಚ್ಚಿನ ಕೆಲಸ ನಡೆಯುತ್ತಿದೆ. ಸ್ಥಳೀಯವಾಗಿ ಸಹಕಾರಿ ಬ್ಯಾಂಕುಗಳು ಈ ನಿಟ್ಟಿನಲ್ಲಿ ಮುನ್ನಡೆಯುತ್ತಿವೆ. ಪೇಮೆಂಟ್ ಆಪ್ ಮತ್ತು ಇಂಟಿಗ್ರೇಶನ್ ಮೂಲಕ ಸರ್ವಿಸ್ ಇಂಡಸ್ಟ್ರಿ ಪ್ರವೇಶಿಸಬಹುದಾಗಿದೆ. ಕಂಟ್ರೋಲ್ ಸಿಸ್ಟಮ್ಸ್ ಮೂಲಕ ಹಳ್ಳಿಗಳಲ್ಲಿಯೂ ಕೊಡುಕೊಳ್ಳುವಿಕೆ ಆರಂಭಿಸಬಹುದು. ಕಳೆದ ಕೆಲವು ತಿಂಗಳುಗಳಿಂದ ಪ್ರೖೆವೇಟ್ ಇಕ್ವಿಟಿ ಅಥವಾ ವಿಸಿ ಫಂಡಿಂಗ್ ಮತ್ತು ಫಾರಿನ್ ಇನ್ವೆಸ್ಟ್​ಮೆಂಟ್ ಬರುತ್ತಿಲ್ಲ. ಇದು ಸರಕಾರದ ಹೊಸ ‘ಫಿನ್ ಟೆಕ್’ ಪಾಲಿಸಿಗಳಿಗಾಗಿ ಕಾಯುತ್ತಿವೆ. ಹಾಗೆಯೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನಿಂದ ಆಗುವ ಬದಲಾವಣೆಗಳ ಹಿನ್ನೆಲೆ ಕೂಡ ಈ ಹಿನ್ನಡೆಗೆ ಕಾರಣವಾಗಿದೆ. ಒಟ್ಟಿನಲ್ಲಿ ಭಾರತೀಯ ‘ಫಿನ್ ಟೆಕ್’ ಕಂಪನಿಗಳು ಭವಿಷ್ಯದಲ್ಲಿ ತಮ್ಮ ಪಾರುಪತ್ಯವನ್ನು ಉಳಿಸಿ ಬೆಳೆಸಲಿವೆ.

ಅಪಾರ ಉದ್ಯೋಗಾವಕಾಶ

ಮುಂದಿನ ವರ್ಷಗಳಲ್ಲಿ ‘ಫಿನ್ ಟೆಕ್’ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳೂ ಹೆಚ್ಚಾಗಲಿವೆ. ಹಲವಾರು ವಿದ್ಯಾಸಂಸ್ಥೆಗಳು ಫಿನ್ ಟೆಕ್ ಹೆಸರಿನಲ್ಲೇ ಡಿಗ್ರಿಗಳನ್ನು ಆರಂಭಿಸಿವೆ. ಇದಕ್ಕೆ ಪೂರಕವಾದ ಎಐ ಮತ್ತು ಡೇಟಾ ಸೈನ್ಸ್ ಹಾಗೂ ಎಂಬಡೆಡ್ ಟೆಕ್ನಾಲಜಿ ವಿಷಯಗಳು ಮುನ್ನೆಲೆಗೆ ಬಂದಿವೆ. ಅದೇ ರೀತಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನಿಂದ ಮಾನವ ಕುಲದ ಮೇಲೆ ಆಗಬಹುದಾದ ಅನಾಹುತಗಳ ಬಗ್ಗೆಯೂ ಜಗತ್ತು ಮಾತನಾಡುತ್ತಿದೆ. ಹಣಕಾಸಿನ ವ್ಯವಹಾರದ ದುರ್ಬಳಕೆಯ ಬಗ್ಗೆಯೂ ಇದರಲ್ಲಿ ಉಲ್ಲೇಖವಿದೆ. ಭಾರತೀಯರ ಇಂಗ್ಲಿಷ್ ಸಂವಹನ ಶಕ್ತಿ, ಬುದ್ಧಿ ಮತ್ತು ವೃತ್ತಿಪರತೆ ನಮ್ಮನ್ನು ಜಾಗತಿಕ ಮಟ್ಟಕ್ಕೆ ಏರಿಸುವಲ್ಲಿ ಸಹಕಾರಿಯಾಗಿದೆ. ಹಾಗಾಗಿ ಭಾರತೀಯರನ್ನು ವಿದೇಶಗಳು ಕೈಬೀಸಿ ಕರೆಯುತ್ತಿವೆ.