

ಅಜ್ಞಾನ ಅಳಿದು ಸುಜ್ಞಾನ ನೀಡುವುದು ಬೆಳಕು. ಮನುಷ್ಯನೂ ಅಂಧಕಾರದಿಂದ ಬೆಳಕಿನೆಡೆಗೆ ನಡೆಯಬೇಕು. ಜೀವನದಲ್ಲಿ ಎಲ್ಲ ಘಟನೆಗಳು ನಾವು ಇಚ್ಛಿಸಿದಂತೆ ನಡೆಯುವುದಿಲ್ಲ. ನಮ್ಮ ಇಚ್ಛೆಗೆ ವಿರುದ್ಧವಾಗಿ ಎಷ್ಟೋ ಘಟನೆಗಳು ಜರುಗುತ್ತವೆ. ಬಡತನ, ಅಪಮಾನ, ಸೋಲು, ಸಾವು ಸಂಭವಿಸಬಹುದು. ಅಂಧಕಾರ ಆವರಿಸಿದಾಗ ಕುಗ್ಗದೇ ಬೆಳಕಿನೆಡೆಗೆ ಸಾಗಬೇಕು. ನಮ್ಮ ಹಿರಿಯರು ಅವುಗಳನ್ನು ಹೇಳುವ ಜತೆಗೆ ಹಬ್ಬಗಳ ರೂಪದಲ್ಲಿ ಆಚರಿಸಿ ನಮಗೆ ಮಾರ್ಗ ತೋರಿದ್ದಾರೆ. ಅಹಿತಕರ ಘಟನೆಗಳು ನಡೆದಾಗ ಆಗಿದ್ದನ್ನು ಮರೆತು ಹೊಸ ಮನುಷ್ಯನಾಗಿ ಬಾಳುವಂತೆ ಸಲಹೆ ನೀಡಿದ್ದಾರೆ. ಹೊಸ ಮನುಷ್ಯನಾಗಿ ಬದುಕುವುದೆಂದರೆ ನಿತ್ಯ ಕಾಲೆಂಡರ್ ಹಾಳೆ ಸರಿಸುವುದಲ್ಲ. ಸೂರ್ಯ, ಭೂಮಿ, ಹರಿವ ನದಿಗಳನ್ನು ಹೊಸದಾಗಿ ಸೃಷ್ಟಿಸಲಾಗದು. ಎಲ್ಲರಿಗೂ ಯಾವುದರಿಂದ ಜೀವನದಲ್ಲಿ ಹೊಸತನ ಬರುತ್ತದೆ ಎಂಬ ಪ್ರಶ್ನೆ ಸಹಜ.
ಬುದ್ಧನ ಜೀವನದ ಉದಾಹರಣೆ ಗಮನಿಸಿದರೆ ಹಿರಿಯರ ಮಾತಿನ ಸೂಕ್ಷ್ಮ ನಮಗೆ ಅರಿವಾಗುತ್ತದೆ. ಬುದ್ಧ ತನ್ನ ಮೋಹದ ಹೆಂಡತಿ ಯಶೋಧರೆಯನ್ನು ಬಿಟ್ಟು ಕಾಡಿಗೆ ಹೋದ. ಕೆಲ ವರ್ಷಗಳ ಬಳಿಕ ಮರಳಿ ಬಂದ. ತನ್ನ ಮನೆಗೇ ಬಂದು ಭಿಕ್ಷೆ ಕೇಳಿದ. ಬುದ್ಧನನ್ನು ಗುರುತಿಸಿದ ಯಶೋಧರೆ ವೈಭವದ ಸಾಮ್ರಾಜ್ಯ, ಹೆಂಡತಿ, ಮಗುವನ್ನು ಬಿಟ್ಟು ಕಾಡಿಗೆ ಹೋಗಿದ್ದು ಯಾಕೆಂದು ಪ್ರಶ್ನಿಸುತ್ತಾಳೆ. ‘ಸತ್ಯ’ ಅರಿಯಲು ಹೋಗಿದ್ದಾಗಿ ಬುದ್ಧ ಹೇಳುತ್ತಾನೆ. ‘ಸತ್ಯ ಕಾಡಿನಲ್ಲಿ ಇತ್ತಾ? ಮನೆಯಲ್ಲಿ ಇಲ್ಲವಾ? ಸತ್ಯ ಸರ್ವದೇಶ, ಸರ್ವಕಾಲದಲ್ಲಿ ಇರುವಂಥದ್ದು. ಎಲ್ಲ ಸ್ಥಳಗಳಲ್ಲಿ ಇರುವಂಥದ್ದು. ಕೇವಲ ಕಾಡಿನಲ್ಲಿ ಇದೆ ಎಂದರೆ ಅದು ಸತ್ಯವಲ್ಲ. ಹೋಗುವಾಗಲಾದರೂ ಹೇಳಿ ಹೋಗಬಹುದಿತ್ತಲ್ಲ. ಹೋದವರು ಮತ್ಯಾಕೆ ಬಂದಿರಿ’ ಎಂದು ಮರು ಪ್ರಶ್ನಿಸುತ್ತಾಳೆ.
‘ಮನೆ ಬಿಟ್ಟು ಹೋದವನು ಬಂದಿಲ್ಲ, ಬಂದಿರುವ ನಾನು ಮನೆ ಬಿಟ್ಟು ಹೋದವನಲ್ಲ. ಹೋದವನು ನಿನ್ನ ಪತಿ ಸಿದ್ಧಾರ್ಥ. ಈಗ ಬಂದಿರುವುದು ಭಿಕ್ಷೆ ಬೇಡುವ ಬುದ್ಧ’ ಎಂದು ಮಾರ್ವಿುಕವಾಗಿ ಉತ್ತರಿಸುತ್ತಾನೆ. ಅಂದರೆ ಇಲ್ಲಿ ದೇಹ ಬದಲಾಗಿಲ್ಲ. ವಿಚಾರ ಬದಲಾಗಿದ್ದಕ್ಕೆ ಸಿದ್ಧಾರ್ಥ ಬುದ್ಧನಾದ. ಯಾವಾಗ ವಿಚಾರದಲ್ಲಿ ಹೊಸತನ ಬರುವುದೋ ಆಗ ಜೀವನದಲ್ಲಿ ಹೊಸತನ ಬರುತ್ತದೆ. ದೀಪಾವಳಿ ಆಚರಣೆಯೂ ಹಾಗೇ. ಹೊಸ ವಿಚಾರಗಳನ್ನು ಬದಿಗೊತ್ತಿ ಸತ್ಯದ ಬೆಳಕಿನೊಂದಿಗೆ ಮುಂದೆ ಸಾಗುವುದು. ಹೊಸ ಜೀವನ ಕಟ್ಟಿಕೊಳ್ಳುವುದು. ಅದಕ್ಕೊಂದು ಆಚರಣೆ ರೂಪ ನೀಡುವುದು.
ಜೀವನ ಹೊಸದು-ಹಳೆಯದೆಂಬುದಿಲ್ಲ. ನಮ್ಮ ವಿಚಾರಗಳ ಮೇಲೆ ಅದು ನಿರ್ಧಾರವಾಗುತ್ತದೆ. ಉತ್ತಮ ವಿಚಾರ ಇದ್ದರೆ ಜೀವನ ಸುಂದರ. ವಿಚಾರ ಕೆಟ್ಟದಾಗಿದ್ದರೆ ಕೆಟ್ಟ ಅನುಭವ ಆಗುತ್ತದೆ. ದೇಹವೆಂಬುದು ಗಡಿಗೆ ಇದ್ದಂತೆ. ಮನಸ್ಸಿಗೆ ಒಳ್ಳೆಯ ವಿಚಾರ ಹಾಕಿದರೆ ಒಳ್ಳೆಯ ಜೀವನ. ಕೆಟ್ಟ ವಿಚಾರ ಹಾಕಿದರೆ ಕೆಟ್ಟದ್ದು ಅಷ್ಟೇ. Life is reflection of our thoughts. ನಮ್ಮ ವಿಚಾರಗಳ ಪ್ರತಿಬಿಂಬವೇ ಜೀವನ. ಹುಟ್ಟುವಾಗ ಪ್ರತಿಯೊಬ್ಬರ ಜನನ ನಿರಾಕಾರ. ಸಾವು ಬೇರೆ ಬೇರೆ. ಬುದ್ಧ, ರಾಮಕೃಷ್ಣ, ವಿವೇಕಾನಂದ, ಬಸವಣ್ಣ ತಮ್ಮ ವಿಚಾರಗಳಿಂದ ದೊಡ್ಡವರಾಗಿ ರೂಪಿತರಾಗಿದ್ದಾರೆ. ದೊಡ್ಡ ವಿಚಾರ ಬಂದವರು ದೊಡ್ಡವರು. ಸಣ್ಣ ವಿಚಾರ ಇದ್ದವರು ಸಣ್ಣವರು.
Education is not about employment, it is about enlightenment. ಶಿಕ್ಷಣವೆಂದರೆ ಉದ್ಯೋಗ ಸೃಷ್ಟಿ, ಕಿಸೆ ತುಂಬಿಸುವುದಲ್ಲ. ಮನುಷ್ಯನಲ್ಲಿ, ಆತನ ಎದೆಯಲ್ಲಿ ಉತ್ತಮ ವಿಚಾರ ತುಂಬುವುದು. ನಮಗೆ ಬೇಕೋ ಬೇಡವೋ ಎಚ್ಚರವಿದ್ದಾಗ, ಮಲಗಿದಾಗ, ಕನಸಿನಲ್ಲಿ ನೂರಾರು ವಿಚಾರಗಳು ಬರುತ್ತವೆ. ಅವಶ್ಯವಿದ್ದದ್ದನ್ನು ಸ್ವೀಕರಿಸಬೇಕು. ಬೇಡದ್ದನ್ನು ಬಿಟ್ಟು ಮುಂದೆ ಸಾಗಬೇಕು. ಗಾಡಿಯಲ್ಲಿನ ಫಸಲು ಕೆಳಗಿಳಿಸಿ ಬೇರೆ ವಸ್ತು ತುಂಬುವಂತೆ ನಮ್ಮ ಹಳೆಯ ವಿಚಾರಗಳನ್ನು ಬಿಟ್ಟು ಹೊಸತರೆಡೆಗೆ ಸಾಗಬೇಕು. ಬಾವಿ ಎಷ್ಟೇ ದೊಡ್ಡದಿದ್ದರೂ ಸಣ್ಣ ಹರಳು ಎಸೆದಾಗ ಅದರ ತರಂಗ ಬಾವಿ ತುಂಬಾ ಹರಡುತ್ತದೆ. ಹಾಗೇ ಮನುಷ್ಯನ ತಲೆಯಲ್ಲಿ ಬೀಳುವ ವಿಚಾರ ಆತನ ಜೀವನವಿಡೀ ಆವರಿಸುತ್ತದೆ.
ಪ್ರಸ್ತುತ ನಮ್ಮ ವಿಚಾರಗಳು ಕೆಟ್ಟಿವೆ. ಬೆಳಗ್ಗೆಯಿಂದ ಸಂಜೆವರೆಗೆ ಪ್ರತಿಯೊಬ್ಬರೂ ‘ನಮಗೆ ಜೀವನ ಸಾಕಾಗಿದೆ. ಎಷ್ಟು ದುಡಿದರೂ ಕಣ್ಣಿಗೆ ಕಾಣುತ್ತಿದೆ. ಕೈಗೆ ಹತ್ತುತ್ತಿಲ್ಲ. ನಾವು ಬೇರೆಯವರಿಗೆ ಒಳ್ಳೆಯದು ಮಾಡಿದ್ದೇವೆ. ದೇವರಿಗೆ ನಡೆದುಕೊಳ್ಳುತ್ತೇವೆ. ಆದರೂ ನಮ್ಮ ಪಾಲಿಗೆ ದೇವರಿಲ್ಲ’ ಎಂದು ನಿರಾಸೆ ವ್ಯಕ್ತಪಡಿಸುತ್ತೇವೆ. ಮನುಷ್ಯನಿಗೆ ಯಾಕಿಷ್ಟು ನಿರಾಸೆ? ಮಳೆ ಬಾರದಿದ್ದರೂ ಮೇಘಗಳ ಗರ್ಜನೆಗೆೆ ನವಿಲು ಕುಣಿಯುತ್ತದೆ. ಮಾವು ಚಿಗುರಿದರೆ ಕೋಗಿಲೆ ಸುಶ್ರಾವ್ಯವಾಗಿ ಹಾಡುತ್ತದೆ. ಆದರೆ, ಎಲ್ಲ ಇದ್ದರೂ ಮನುಷ್ಯ ಅಳುತ್ತಿದ್ದಾನೆ.
‘ಮಳೆ ಬಾರದಿದ್ದರೂ ನವಿಲು ನರ್ತಿಸುತ್ತಿದೆ. ಮಾವು ಚಿಗುರದಿದ್ದರೂ ಕೋಗಿಲೆ ಹಾಡುತ್ತಿದೆ. ನೀನೇಕೆ ಅಳುತ್ತಿರುವೆ’ ಎಂದು ದೇವರು ಪ್ರಶ್ನಿಸಿದರೆ ನರನು ಬೆಳೆಗೆ ಉತ್ತಮ ಬೆಲೆ ಸಿಕ್ಕಿಲ್ಲವೆಂದು ಅಳುತ್ತಿರುವುದಾಗಿ ಹೇಳಿದನಂತೆ. ಇಂಥ ನಕಾರಾತ್ಮಕ ಚಿಂತನೆಗಳು ಅಳಿಯಬೇಕು. ಜೀವನದಲ್ಲಿ ಏನೇ ಆದರೂ ಅದೆಲ್ಲವನ್ನು ಬದಿಗಿಟ್ಟು ಮುಂದೆ ಸಾಗಬೇಕು. ಅದಕ್ಕೆಂದೇ ಹಬ್ಬಗಳು ಬಂದಿವೆ. ಹಿಂದಿನದೆಲ್ಲ ಮರೆತು ಸಿಹಿಯೊಂದಿಗೆ ಹಿರಿಯರ ಮಾರ್ಗದಲ್ಲಿ ಮುಂದೆ ಸಾಗಬೇಕು. ಹೊಸ ಉಡುಪು ತೊಟ್ಟು, ಸಿಹಿ ಮಾಡಿ ಸಂಭ್ರಮಿಸುವುದಷ್ಟೇ ಅಲ್ಲ. ಸಂಪ್ರದಾಯ ಆಚರಣೆಯೊಂದಿಗೆ ಸಕಾರಾತ್ಮಕ ಗುಣ ಅಳವಡಿಸಿಕೊಂಡು ಮುನ್ನಡೆಯುವುದೇ ಹಬ್ಬಗಳ ಸಾರ.
ಮನುಷ್ಯ ತನ್ನ ಕಾರ್ಯ ಸಿದ್ಧಿ ಆಗಲೆಂದು ಸ್ವಾಮೀಜಿಗಳ ಬಳಿ, ಗುರುಗಳ ಬಳಿ ಹೋಗಿ ಹರಸುವಂತೆ ಕೇಳುತ್ತಾನೆ. ದಾರಿಯಲ್ಲಿ ಹೋಗುವಾಗ ಬೆಕ್ಕು ಅಡ್ಡ ಬಂದರೆ, ಹೋಗುವ ಕೆಲಸ ಬಿಟ್ಟು ವಾಪಸ್ ಬರುತ್ತಾನೆ. ಇದೇ ಮನುಷ್ಯ ಗುಣ. ಮನುಷ್ಯನಿಗೆ ನಿರಾಸೆಗಳು ಬಂದಿದ್ದು ನಿರಾಶಾದಾಯಕ ವಿಚಾರಗಳಿಂದ. ಮಾನವನ ಈ ನಿರಾಸೆೆಗೆ ಕಾರಣವೇನೆಂದು ಋಷಿಗಳೂ ಚಿಂತಿಸಿದರು. ದೇವ, ದೈವ, ಗುರು, ಶಾಸ್ತ್ರ, ವಚನಗಳಲ್ಲಿ ಯಾಕೆ ನಂಬಿಕೆ ಕಳೆದುಕೊಂಡಿರುವನೆಂದು ಅರ್ಥೈಸಿದರು. ಪರಿಹಾರವಾಗಿ ಪಂಚ ಸೂತ್ರ ಕೊಟ್ಟರು. ‘ಅಧಿಷ್ಠಾನ, ಕರ್ತ, ಕರಣ, ಪ್ರಯತ್ನ ಮತ್ತು ದೈವ’. ಇದರಲ್ಲಿ ಅಧಿಷ್ಠಾನ ಎಂದರೆ ಆಧಾರ ಎಂದರ್ಥ. ಶರೀರವೇ ಅಧಿಷ್ಠ. ಅದು ಚೆನ್ನಾಗಿರಬೇಕು. ಎರಡನೆಯದು ಶರೀರದಲ್ಲಿನ ಜೀವ ಉತ್ಸಾಹಿತನಾಗಿರಬೇಕು. ಮೂರನೆಯದು ಕರಣ ಎಂದರೆ ಇಂದ್ರಿಯಗಳು. ಅವು ಸಶಕ್ತವಾಗಿರಬೇಕು. ಪ್ರಯತ್ನ ಚೆನ್ನಾಗಿರಬೇಕು. ಕೊನೆಯದಾಗಿ ಎಲ್ಲದರ ಮೇಲೆ ದೈವ ಬಲ ಇರಬೇಕು. ಇದೇ ಪಂಚಾಂಗ. ಪಂಚಾಂಗ ಎಂದರೆ ಹೊರಗೆ ನೋಡುವುದಲ್ಲ. ನಿನ್ನೊಳಗೆ ನೋಡುವುದು ಎಂದರ್ಥ.
ಶರೀರ, ಜೀವೋತ್ಸಾಹ, ಇಂದ್ರಿಯ, ಪ್ರಯತ್ನ, ದೈವ ಇವೇ ಪಂಚಾಂಗ. ‘ಅಧಿಷ್ಠಾನಂ ತಥಾ ಕರ್ತ. ಕರಣಂಚ್ಯ ಪ್ರುತದ್ವಿದಂ ವಿವಿಧಾಸ್ಚಯ ಪ್ರುತಸ್ಚೆಷ್ಠ. ದೈವಂಚೈವಾತ್ರ ಪ್ರಪಂಚಂ.’ ಕಾರ್ಯಸಿದ್ಧಿಗೆ ಶರೀರ ಸ್ವಸ್ಥವಾಗಿರಬೇಕು, ಮಸ್ತಾಗಿರಬೇಕು. ಏನೆಲ್ಲ ಐಶ್ವರ್ಯ ಇದ್ದರೂ ಅನುಭವಿಸಲು ಉತ್ತಮ ಆರೋಗ್ಯವಿರಬೇಕು. ಹತ್ತಾರು ಕಾರ್ಖಾನೆ, ಮನೆತುಂಬ ಆಳು-ಕಾಳು, ಐಷಾರಾಮಿ ಜೀವನ ಇದ್ದು ನೂರಾರು ರೋಗಗಳಿದ್ದರೆ ನಿಜವಾಗಿ ಅವರು ಭಾಗ್ಯಶಾಲಿಗಳಾಗುತ್ತಾರಾ? ಡೈನಿಂಗ್ ಟೇಬಲ್ ಮೇಲೆ ಅನ್ನ ಇದ್ದವನು ಭಾಗ್ಯಶಾಲಿ ಅಲ್ಲ. ಹಸಿವಿದ್ದವನು ಭಾಗ್ಯಶಾಲಿ. ಐಷಾರಾಮಿ ಬೆಡ್ ಇದ್ದವನು ಭಾಗ್ಯಶಾಲಿ ಅಲ್ಲ. ಉತ್ತಮ ನಿದ್ದೆ ಬಂದವ ಭಾಗ್ಯಶಾಲಿ. ಧನವಿದ್ದವ ಭಾಗ್ಯಶಾಲಿ ಅಲ್ಲ. ಯಾರ ಕೈ ದಾನ-ಧರ್ಮಕ್ಕೆ ಮುಂದಾಗುವುದೋ ಅವನು ನಿಜವಾದ ಭಾಗ್ಯಶಾಲಿ. ಯಾರು ಆರೋಗ್ಯವಂತರೋ ಅವರೇ ಭಾಗ್ಯವಂತರು. ಮನೆತುಂಬ ಹಣವಿದ್ದವರೂ ಶ್ರೀಮಂತರಲ್ಲ. ದುಡಿಯಲು ಕೈ-ಕಾಲು ಗಟ್ಟಿಮುಟ್ಟಾಗಿದ್ದವರು ಶ್ರೀಮಂತರು.
ನಿದ್ದೆ ಹಾಗೂ ಕೆಲಸ ಚೆನ್ನಾಗಿ ಮಾಡಿದರೆ ಆರೋಗ್ಯವಾಗಿರಲು ಸಾಧ್ಯ. ನಮ್ಮ ನಡವಳಿಕೆಯು ಪ್ರೇಮದಿಂದ ಕೂಡಿರಬೇಕು. ಇವು ಮೂರು ಕೆಟ್ಟರೆ ಶರೀರದ ಆರೋಗ್ಯ ಕೆಡುತ್ತದೆ. ದೊಡ್ಡ ದೊಡ್ಡ ನಗರಗಳಲ್ಲಿನ ಐಷಾರಾಮಿ ಜನರು ಪಥ್ಯದ ಹೆಸರಲ್ಲಿ ಏನೇನೋ ತಿನ್ನುತ್ತಾರೆ. ಆದರೆ, ಹಳ್ಳಿಯ ರೈತ ಬೆಳಗ್ಗೆ 8 ಗಂಟೆಗೆ 8 ರೊಟ್ಟಿ ತಿಂದು ಕೆಲಸಕ್ಕೆ ಅಣಿಯಾಗಿರುತ್ತಾನೆ. ಅಮೆರಿಕಾ, ಮೆಡಿಟೇರಿಯನ್ನಂಥ ಪರಕೀಯರ ಡಯಟ್ ನಮಗೆ ಯಾಕೆ ಬೇಕು? ಅವರವರ ಡಯಟ್ ಅವರಿಗೇ ಇರಲಿ. ಭಾರತೀಯರಿಗೆ ಯಾಕೆ ವಿದೇಶಿ ಡಯಟ್ ಬೇಕು?
ನಾವು ಏನೇ ಊಟ ಮಾಡಿದರೂ ಅದನ್ನು ಅರಗಿಸಬೇಕು. ಅದೇ ನಿಜವಾದ ಡಯಟ್. ಪಥ್ಯೆ ಎಂದರೆ ಇದೇ. ವಿದ್ಯಾರ್ಥಿ, ರೈತ ಸೇರಿ ಎಲ್ಲರೂ ಅವರವರ ಕಾಯಕ ಅಚ್ಚುಕಟ್ಟಾಗಿ ಮಾಡಬೇಕು. ದೇವರು ಗುಡಿಯಲ್ಲಿ ಇರುವುದಿಲ್ಲ. ಶ್ರಮಪಟ್ಟು ದುಡಿಯುವ ರೈತನ ನೇಗಿಲಿನಲ್ಲಿ ಇರುತ್ತಾನೆ. ಅದಕ್ಕೇ ರೈತನನ್ನು ನೇಗಿಲ ಯೋಗಿ ಎಂದು ಕರೆಯುತ್ತೇವೆ. ನಾವು ಮಾಡುವ ಕೆಲಸಕ್ಕೆ ದೇಹವನ್ನು ಅಣಿಗೊಳಿಸಬೇಕು. ಅದಕ್ಕೇ ಶರಣರು ‘ಮೃತ್ಯು ಮುಟ್ಟುವ ಮುನ್ನ ಪೂಜಿಸು ನಮ್ಮ ಕೂಡಲ ಸಂಗಮ ದೇವನ... ನೆರೆಕೆನ್ನೆಗೆ, ತೆರೆ ಗಲ್ಲಕೆ ಶರೀರ ಗೂಡು ಹೋಗುವ ಮುನ್ನ...’ ಎಂದು ಹೇಳಿದ್ದಾರೆ.
ಆಕರ್ಷಣೆಗಳು ನಮ್ಮ ಜೀವನವನ್ನು ಹಾಳು ಮಾಡುತ್ತವೆ. ಬಾಲ್ಯ, ಯೌವ್ವನ, ಮುಪ್ಪು ಎಲ್ಲವನ್ನೂ ಕಳೆಯಬೇಕು. ಈ ಶರೀರ ಎಂಬುದು ತಂಬೂರಿ ಇದ್ದಂತೆ. ತಂಬೂರಿ ತಂತಿ ಬಹಳ ಗಟ್ಟಿಯಾಗಿ ಬಿಗಿದರೆ ಹರಿಯುತ್ತದೆ. ಸಡಿಲವಾಗಿ ಬಿಟ್ಟರೆ ನಾದ ಹೊಮ್ಮುವುದಿಲ್ಲ. ಹದವರಿತು ತಂತಿ ಬಿಗಿದರೆ ನಾದ ಬರುತ್ತದೆ. ಹದವಾಗಿ ನಾದ ಹೊರಸೂಸುವ ತಂಬೂರಿಯಂತೆ ನಮ್ಮ ಶರೀರವನ್ನು ಇಟ್ಟುಕೊಳ್ಳಬೇಕು.
ನಮ್ಮ ಕಾರ್ಯಸಿದ್ಧಿಗೆ ಜೀವನದಲ್ಲಿ ಉತ್ಸಾಹ ಇರಬೇಕು. ಅದನ್ನು ಬಿಟ್ಟು ನಿತ್ಯ ಬೆಳಗ್ಗೆ ಎದ್ದ ತಕ್ಷಣ ‘ದೇವರೇ ನನ್ನ ಕಣ್ಣು ಮುಚ್ಚಿ ಬಿಡು’ ಎಂದು ಉದ್ಘರಿಸಬಾರದು. ದೇಶದ ಸಾಲವೇ ನಮ್ಮ ಮೇಲಿದೆ ಎಂಬಂತೆ ವರ್ತಿಸಬಾರದು. ನಾವು ಕ್ಲೀನ್ ಸಿಟಿ, ಗ್ರೀನ್ ಸಿಟಿ, ಗಾರ್ಡನ್ ಸಿಟಿ, ಸೈಬರ್ ಸಿಟಿಯಲ್ಲಿ ಬದುಕುವುದು ಮುಖ್ಯವಲ್ಲ. ನಮ್ಮ ಜೀವನದಲ್ಲಿ ಮೊದಲು ಕ್ಯೂರಿಯಾಸಿಟಿ ಇರಬೇಕು. ಆಸಕ್ತಿ ಇಲ್ಲದಿದ್ದರೆ ಉತ್ತಮವಾಗಿ ಬದುಕಲು ಆಗದು. ಯಾವುದೇ ಕೆಲಸ ಮಾಡಿದರೂ ಕುಶಲತೆ, ಪ್ರೇಮ, ಉತ್ಸಾಹದಿಂದ ಮಾಡಬೇಕು. ಮಾಡುವ ಕೆಲಸದಲ್ಲಿ ಪ್ರೇಮ ಇದ್ದರೆ ಖುಷಿ ತಾನಾಗಿಯೇ ಸಿಗುತ್ತದೆ. ಪ್ರೇಮ ಇದ್ದಲ್ಲಿ ದಣಿವು ಇರುವುದಿಲ್ಲ.
ಪ್ರಯತ್ನ ಇಲ್ಲದೇ ಏನೂ ಆಗದು. ‘ಉದ್ಯಮೇನಹಿ ಸಿದ್ಧಂತಿ ಕಾರ್ಯಾಣಿ ನ ಮನೋರಥ ಹಿಃ’- ಸಿಂಹ ಕಾಡಿನ ರಾಜನಾದರೂ ಉಳಿದ ಪ್ರಾಣಿಗಳು ತಾವಾಗೇ ಬಂದು ಬಾಯಿಗೆ ಆಹಾರ ಆಗುವುದಿಲ್ಲ. ಹಾಗೆಯೇ ನಮ್ಮ ಜೀವನದಲ್ಲಿ ಸೋಲು ಸಹಜ. ಊಟ ಮಾಡುವಾಗ ಅದರಲ್ಲಿ ಸಣ್ಣ ಹರಳು ಬಂದರೆ ಊಟದ ತಟ್ಟೆಯನ್ನು ಎಸೆಯುವುದಿಲ್ಲ. ಬದಲಿಗೆ ಹರಳನ್ನು ತೆಗೆದೆಸೆದು ಊಟ ಮುಂದುವರಿಸುತ್ತೇವೆ. ಹಾಗೆಯೇ ದಾರಿಯಲ್ಲಿ ನಡೆಯುವಾಗ ಕಾಲಿಗೆ ಮುಳ್ಳು ಚುಚ್ಚಿದರೆ ಮುಳ್ಳು ಕಿತ್ತೆಸೆಯುತ್ತೇವೆಯೇ ಹೊರತು ಕಾಲನ್ನಲ್ಲ. ಅದರಂತೆ ಸೋಲು ಬಂದಾಗ ಅದನ್ನು ಸ್ವೀಕರಿಸಿ ಪ್ರಯತ್ನ ಮುಂದುವರಿಸಬೇಕು.
ತಮಿಳುನಾಡಿನ ಅಂಬಿಕಾ ಎಂಬ ಯುವತಿಗೆ 14ನೇ ವಯಸ್ಸಿಗೆ ಮದುವೆ ಆಗುತ್ತದೆ. 18ನೇ ವಯಸ್ಸಿಗೆ ಆಕೆಗೆ ಎರಡು ಮಕ್ಕಳಾದವು. ಆಕೆಯ ಗಂಡ ಪೊಲೀಸ್ ಅಧಿಕಾರಿ. ಒಮ್ಮೆ ಪೊಲೀಸ್ ಪರೇಡ್ ನೋಡಲು ಅಂಬಿಕಾಳನ್ನು ತನ್ನೊಡನೆ ಕರೆದೊಯ್ದಿದ್ದ. ಆತ ತನ್ನ ಮೇಲಧಿಕಾರಿಗೆ ಸೆಲ್ಯೂಟ್ ಮಾಡಿದ. ಅದನ್ನು ನೋಡಿದ ಅಂಬಿಕಾ, ತಾನೂ ಯುಪಿಎಸ್ಸಿ ಪರೀಕ್ಷೆ ಬರೆದು ಎಸ್ಪಿ ಆಗುವುದಾಗಿ ಹೇಳುತ್ತಾಳೆ. ಕೇವಲ 5ನೇ ತರಗತಿ ಓದಿದ ಅಂಬಿಕಾಗೆ ಇಂಥ ಯೋಚನೆ ಬಂದಿತ್ತು. 10ನೇ ತರಗತಿಯಿಂದ ಎಲ್ಲ ಪರೀಕ್ಷೆ ಬರೆದು ಯುಪಿಎಸ್ಸಿ ಪೂರ್ಣಗೊಳಿಸುವ ಸಂಕಲ್ಪ ಮಾಡಿದ್ದಳು.
ಮನೆಯಲ್ಲಿ ಕುಳಿತು ಅಂಬಿಕಾ ಎಲ್ಲ ಪರೀಕ್ಷೆ ಬರೆದು ಪಾಸಾಗಿದ್ದಳು. ಮದ್ರಾಸ್ನಲ್ಲಿ ತರಬೇತಿ ಪಡೆದು ಮೊದಲೆರಡು ಪ್ರಯತ್ನದಲ್ಲಿ ವಿಫಲವಾದಳು. ಮೂರನೇ ಬಾರಿಯೂ ಸೋತಳು. ನಾಲ್ಕನೇ ಪ್ರಯತ್ನಕ್ಕೆ ಪಾಸಾಗಿ ಇಂದು ದೊಡ್ಡ ಐಪಿಎಸ್ ಅಧಿಕಾರಿಯಾಗಿದ್ದಾಳೆ. ಜೀವನದಲ್ಲಿ ಸೋಲು ಇದ್ದಿದ್ದೇ. ಅದನ್ನು ಮೆಟ್ಟಿ ನಿಂತು ಜೀವನ ಕಟ್ಟಿಕೊಳ್ಳಬೇಕು. ನಿರಂತರ ಪ್ರಯತ್ನ ಇರಬೇಕು. ಉತ್ತಮ ಕೆಲಸ ಮಾಡಬೇಕು. ವಾಸ್ಕೋ ಡಿ ಗಾಮಾ ಭಾರತಕ್ಕೆ ಬರಲು ಹಲವು ಪ್ರಯತ್ನ ನಡೆಸಿದ. ಎಲ್ಲ ಸವಾಲು ಎದುರಿಸಿ ಕೊನೆಗೆ ಭೂ ಪ್ರದೇಶ ಕಂಡುಹಿಡಿದ. ಇಂದು ನಾವು ಆತನ ಪಾಠ ಓದುತ್ತೇವೆ. ಅಂಥ ಛಲ ನಮ್ಮಲ್ಲಿ ಇರಬೇಕು.
ಕಾರ್ಯಸಿದ್ಧಿಗೆ ಭಾಗ್ಯ, ಅದೃಷ್ಟವೂ ಇರಬೇಕು. ಅದು ಬಹಳ ಮುಖ್ಯ. ‘ಮನುಷ್ಯನ ಸಕಲ ಭೋಗಗಳು ಭಾಗ್ಯವಿಲ್ಲದೇ ಆಗದು’ ಎನ್ನುತ್ತಾರೆ ನಿಜಗುಣ ಶಿವಯೋಗಿಗಳು. ನಾವು ಶ್ರೀಮಂತರು, ಜಮೀನ್ದಾರರು ಆಗಿರಬಹುದು. ಆದರೆ, ನಾವ್ಯಾರೂ ಗೂಗಲ್ನಲ್ಲಿ ಅರ್ಜಿ ಹಾಕಿ ಇಂಥವರ ಮಕ್ಕಳಾಗಬೇಕೆಂದು ಬಯಸಿ ಬಂದವರಲ್ಲ. ನಮ್ಮ ಭಾಗ್ಯದಿಂದ ಇಂಥ ಬದುಕು ಸಿಕ್ಕಿರುತ್ತದೆ. ಬುದ್ಧಿವಂತಿಕೆಯಿಂದ ಇದನ್ನು ಮಾಡಲು ಸಾಧ್ಯವಿಲ್ಲ. ಬುದ್ಧಿವಂತಿಕೆಯಿಂದ ಸಾಧಿಸಬಹುದಾಗಿದ್ದರೆ ಬೀರಬಲ್ ಸಹ ಅಕ್ಬರ್ನಂತೆ ರಾಜನಾಗಬಹುದಿತ್ತು. ಬುದ್ಧಿವಂತಿಕೆಯಿಂದಲೇ ಎಲ್ಲ ಕಾರ್ಯ ಸಾಧ್ಯವಾಗದು.
ಆದರೆ, ಕೆಲವರು ಮಾಡಬಾರದ ಕೆಲಸ ಮಾಡಿಯೂ ಉತ್ತಮ ಜೀವನ ಅನುಭವಿಸುತ್ತಿರುತ್ತಾರೆ. ಅದು ಈಗಿನ ಜನ್ಮದಲ್ಲಿ ಬಂದ ಭಾಗ್ಯದ ಫಲವಲ್ಲ. ಹಿಂದಿನ ಜನ್ಮದ ಕರ್ಮಫಲ. ಸೈಕಲ್ ಓಡಿಸುವಾಗ ಸ್ವಲ್ಪ ದೂರದವರೆಗೆ ಪೆಡಲ್ ತುಳಿದು ಬಿಟ್ಟರೂ ಚಕ್ರ ತಿರುಗುತ್ತದೆ. ಅದರಂತೆ ಹಿಂದೆ ಮಾಡಿದ ಕರ್ಮಫಲದಿಂದ ಕೆಲವರು ಈಗ ಸ್ಥಿತಿವಂತಾಗಿರುತ್ತಾರೆ. ಈ ಜೀವನದಲ್ಲೂ ಉತ್ತಮ ಕೆಲಸ ಮಾಡಬೇಕು. ಅದರಿಂದಲೂ ಪುಣ್ಯ ಬರುತ್ತದೆ.
ನಮ್ಮ ಕಾರ್ಯಸಿದ್ಧಿಗೆ ಅದೃಷ್ಟ ಬೇಕು. ಉದಾಹರಣೆಗೆ ನೋಡುವುದಾದರೆ ಸೀತಾ ದೇವಿ ದಟ್ಟ ಅಡವಿಗೆ ಹೋಗಿ ಅಷ್ಟ ವರ್ಷ ಇದ್ದಳು. ಲವ-ಕುಶರನ್ನು ಹೆತ್ತಳು. ಆದರೂ ಆಕೆಗೆ ಏನೂ ತೊಂದರೆ ಆಗಲಿಲ್ಲ. ಆದರೆ ನಾವು ಒಂದು ತಪ್ಪಾದ ಮಾತ್ರೆ ಸೇವಿಸಿದರೆ ರಿಯಾಕ್ಷನ್ ಆಗಿ ಜೀವವೇ ಹೋಗುತ್ತದೆ. ಮೀರಾಬಾಯಿಗೆ ಆಕೆಯ ತಂದೆಯೇ ವಿಷ ಕೊಟ್ಟರೂ ಸಾವು ಬರಲಿಲ್ಲ. ಇದೆಲ್ಲ ಘಟಿಸಿದ್ದು ದೈವಬಲದಿಂದ. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಯುದ್ಧ ವಿಮಾನದಿಂದ ಪಾಕಿಸ್ತಾನದ ನೆಲದ ಮೇಲೆ ಬಿದ್ದರೂ ಏನೂ ಆಗದಂತೆ ಮತ್ತೆ ಸೇಫಾಗಿ ಬಂದರಲ್ಲ, ಇದಕ್ಕೆ ದೈವಬಲ ಕಾರಣ. ನಾವು ಮಾಡುವ ಕರ್ಮಫಲ ನಮಗೆ ವಾಪಸ್ ಬರುತ್ತದೆ ಎಂಬುದಕ್ಕೆ ಇವು ಉದಾಹರಣೆಗಳು.
ಪುಣ್ಯದ ಕೆಲಸ ಮಾಡಿದರೆ ಭಾಗ್ಯ ಬರುತ್ತದೆ. ಭಾಗ್ಯ ಸಂಗ್ರಹ ಮಾಡಬೇಕೆಂದರೆ ಪುಣ್ಯದ ಕೆಲಸ ಮಾಡಬೇಕು. ಅಮಾವಾಸ್ಯೆ ಕಗ್ಗತ್ತಲಲ್ಲಿ ಕರಿ ಬಣ್ಣದ ಕುರಿಯೊಂದು ತನ್ನ ಗುಂಪಿನಲ್ಲಿರುವ ತನ್ನ ಮರಿಗೆ ಹಾಲು ಉಣಿಸುವಂತೆ ನಾವು ಮಾಡಿದ ಪುಣ್ಯವೆಂಬ ತಾಯಿ, ನಮ್ಮನ್ನು ಹುಡುಕಿಕೊಂಡು ಬಂದು ಫಲ ಉಣ್ಣಿಸಿ ಹೋಗುತ್ತದೆ. ಅದಕ್ಕಾಗಿ ಮನುಷ್ಯ ಪುಣ್ಯದ ಕೆಲಸ ಮಾಡಬೇಕು. ದೇವರಿಗೆ ಪ್ರಕೃತಿ ಕೊಟ್ಟ ಹೊಳೆಯ ನೀರು ಹಾಕಿ, ಹೂವನ್ನು ನೈವೇದ್ಯವಾಗಿ ಅರ್ಪಿಸಿ ನಮಗೆ ಪುಣ್ಯ ಬರಬೇಕೆಂದು ಬೇಡುತ್ತೇವೆ. ಇದರಲ್ಲಿ ನಮ್ಮ ಕೊಡುಗೆ ಇಲ್ಲದಿದ್ದರೂ ನಮಗೆ ಯಾಕೆ ಪುಣ್ಯ ಬರುತ್ತದೆ? ನಾವು ದುಡಿದರೆ ನಮಗೆ ಪುಣ್ಯ ದೊರೆಯುತ್ತದೆ.
ಪಶ್ಚಿಮ ಬಂಗಾಳದಲ್ಲಿ ದುರ್ಗಾ ಚರಣದಾಸ್ ಜನಸೇವೆ ಮಾಡುತ್ತಿದ್ದರು. ಆತನ ಸ್ನೇಹಿತ ‘ಯಾಕೆ ಇಷ್ಟೊಂದು ಉತ್ತಮ ಕೆಲಸ ಮಾಡುವೆ? ನಿನಗೆ ಯಾರೂ ಪ್ರಶಸ್ತಿ ಕೊಡುವುದಿಲ್ಲ’ ಎಂದನಂತೆ. ‘ಪ್ರಶಸ್ತಿಗಾಗಿ ನಾನು ಸೇವೆ ಮಾಡುತ್ತಿಲ್ಲ. ಇದರಿಂದ ನನ್ನ ಮನದಲ್ಲಿ ಆಗುವ ಸಂತೋಷ ಅನುಭವಿಸಲು ಈ ಕೆಲಸ ಮಾಡುತ್ತಿರುವೆ’ ಎಂದರಂತೆ. ರಾಮಾಯಣ, ಮಹಾಭಾರತ ಬರೆದ ಕೈಗಳು ಎಷ್ಟು ಶ್ರೇಷ್ಠವೋ, ಅದರಂತೆ ಎಲ್ಲರನ್ನು ಉತ್ತಮ ಮನಸ್ಸಿನಿಂದ ಸ್ವಾಗತಿಸುವ ಮನಸ್ಸುಗಳು ಶ್ರೇಷ್ಠವಾಗುತ್ತವೆ. ಸರ್ವಕಾರ್ಯಸಿದ್ಧಿಗೆ ಪಂಚಸೂತ್ರಗಳನ್ನು ಅನುಸರಿಸುವ ಮೂಲಕ ನಮ್ಮ ಜೀವನದಲ್ಲಿ ಸರ್ವ ಕಾರ್ಯಸಿದ್ಧಿ ಎಂಬ ದೀಪಗಳ ಬೆಳಕು ಪಡೆಯೋಣ.