

ಶಿವು ತೂಬಗೆರೆ
ಇದು ಹಲಸು ಹಣ್ಣಿನ ಕಾಲ. ಪ್ರತಿ ವರ್ಷ ಬೇಸಿಗೆ ಬಂತೆಂದರೆ ಎಲ್ಲ ಕಡೆ ಹಲಸಿನ ವಾಸನೆ ಘಮಘಮಿಸುತ್ತಿತ್ತು. ಅದರಲ್ಲೂ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹಲಸು ಎಂದರೆ ಗ್ರಾಮಾಂತರ ಜಿಲ್ಲೆಯಲ್ಲೇ ಹೆಸರುವಾಸಿ. ಉತ್ತಮ ಸಲಿನೊಂದಿಗೆ ಆದಾಯ ನಿರೀಕ್ಷಿಸಿದ್ದ ಬೆಳೆಗಾರರಿಗೆ ಈ ಬಾರಿ ‘ಕರೊನಾ’ಆಘಾತ ನೀಡಿದೆ.
ಸೂಕ್ತ ಮಾರುಕಟ್ಟೆ ಇಲ್ಲದೆ ಮರಗಳಲ್ಲೇ ಕೊಳೆಯುವಂತಾಗಿದೆ. ಕಳೆದ ವರ್ಷ 1 ಹಲಸಿನ ಹಣ್ಣು 400 ರಿಂದ 500 ರೂಪಾಯಿವರೆಗೆ ಮಾರಾಟವಾದ ದಾಖಲೆ ಇದೆ. ಆದರೆ ಈ ಬಾರಿ 50 ರಿಂದ 100 ರೂಪಾಯಿಗೆ ಖರೀದಿಸಿದರೆ ಸಾಕು ಎಂಬಂಥ ಪರಿಸ್ಥಿತಿ ಇದೆ ಎಂದು ತೂಬಗೆರೆ ಹಲಸು ವ್ಯಾಪಾರಿ ಅಶ್ವತ್ಥಪ್ಪ ಅಳಲು ತೋಡಿಕೊಂಡಿದ್ದಾರೆ.
ಹಲಸು ಉತ್ಪನ್ನಕ್ಕೂ ಹೊಡೆತ:
2015ರಲ್ಲಿ ಹಲಸು ಬೆಳೆಗಾರರ ಸಂಘ ಸ್ಥಾಪನೆಯಾಗಿದೆ. ಯುವಜನತೆಗೆ ಚಿಪ್ಸ್, ಜ್ಯೂಸ್, ಜಾಮ್ ತಯಾರಿಸಿ ಮಾರಾಟ ಮಾಡುವ ತರಬೇತಿ ನೀಡುವುದು ಸಂಘದ ಉದ್ದೇಶ. ಆದರೆ ಈ ಉತ್ಪಾದನೆಗೂ ಹೊಡೆತ ಬಿದ್ದಿದೆ ಎಂದು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಮಂಜುನಾಥ್ ಹೇಳಿದ್ದಾರೆ.
ಹಳದಿ, ಕೆಂಪು ಬಣ್ಣದ ಹಲಸು, ಹೆಬ್ಬಲಸು ಸೇರಿ ನಾನಾ ತಳಿಯ ಭಾಗದ ವಿಶೇಷ ಹಲಸಿಗೆ ಆಂಧ್ರ, ಮಂಗಳೂರು, ಕೋಲಾರ, ಮೈಸೂರು, ಬೆಂಗಳೂರಿನಲ್ಲಿ ಉತ್ತಮ ಮಾರುಕಟ್ಟೆ ಇದೆ. ಆದರೆ ಲಾಕ್ಡೌನ್ನಿಂದಾಗಿ ಕೇಳುವವರಿಲ್ಲದಂತಾಗಿದೆ.
ವ್ಯಾಪಾರಿಗಳಿಗೂ ನಷ್ಟ: ವ್ಯಾಪಾರಸ್ಥರು 6 ತಿಂಗಳ ಮುನ್ನವೇ ಮರಗಳನ್ನು ಗುತ್ತಿಗೆ ಪಡೆದುಕೊಳ್ಳುತ್ತಿದ್ದರು. ಆದರೆ ಈ ಬಾರಿ ಬೇಡಿಕೆ ಕುಸಿದ ಪರಿಣಾಮ ನಷ್ಟ ಅನುಭವಿಸುವಂತಾಗಿದೆ. ತೂಬಗೆರೆ ಸುತ್ತ ಮುತ್ತಲಿನಲ್ಲಿ ಗ್ರಾಮಗಳಲ್ಲಿ ಹೆಚ್ಚು ಮರಗಳಿದ್ದು, ಅದರಲ್ಲೂ ಕಾಚ್ಚಹಳ್ಳಿ ಕೆಂಪು ತೊಳೆಯ ಹಲಸು ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಮರದ ಬುಡದಿಂದಲೇ ಆರಂಭವಾಗುವ ಕಾಯಿಗಳ ಗೊಂಚಲು ನೋಡುವುದೇ ಚೆಂದ.
35 ವರ್ಷದಿಂದ ಹಲಸಿನ ವ್ಯಾಪಾರ ಮಾಡುತ್ತಿದ್ದೇನೆ, ಈ ಬಾರಿ ಇಳುವರಿ ಉತ್ತಮವಾಗಿದೆ. ಆದರೆ ವ್ಯಾಪಾರ ವಹಿವಾಟು ನೆಲಕಚ್ಚಿದೆ. ಇದೇ ಮೊದಲ ಬಾರಿಗೆ ಇಂಥ ನಷ್ಟ ಕಾಣುತ್ತಿರುವುದು. ಅಶ್ವತ್ಥಪ್ಪ, ತೂಬಗೆರೆ ಹಲಸಿನ ವ್ಯಾಪಾರಿ ಪ್ರತಿ ವರ್ಷ ಏಪ್ರಿಲ್, ಜೂನ್ನಲ್ಲಿ ಲಾಲ್ಬಾಗ್ನಲ್ಲಿ ಆಯೋಜಿಸುವ ಹಲಸು ಮೇಳದಲ್ಲಿ ತೂಬಗೆರೆ ಹಲಸು ಬೆಳೆಗಾರರು ಪಾಲ್ಗೊಂಡು ಉತ್ತಮ ಆದಾಯ ಪಡೆಯುತ್ತಿದ್ದರು. ಈ ಬಾರಿ ಹಲಸು ಮೇಳ ನಡೆಯುವ ಮಾಹಿತಿ ಇಲ್ಲ. ಮಂಜುನಾಥ್, ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ