ಬೆಳ್ತಂಗಡಿ: ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಶೀಘ್ರವಾಗಿ ಹೆಚ್ಚಿಸುವ ಪ್ರಯತ್ನ ಕೈಗೊಳ್ಳಬೇಕು. ಎಲ್ಲ ಸೌಕರ್ಯಗಳಿದ್ದರೂ ಹೆರಿಗೆ ಪ್ರಮಾಣ ಯಾಕೆ ಕಡಿಮೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆಯ ವೈದ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು.
ಶನಿವಾರ ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಬಿ.ಪಿ.ಎಚ್ ಲ್ಯಾಬ್ ಮತ್ತು 12 ಬೆಡ್‌ಗಳ ಐಸೋಲೇಶನ್ ವಾರ್ಡ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸಿಗಬೇಕು ಎಂದು ಸರ್ಕಾರ ಎಲ್ಲ ಮೂಲಸೌಕರ್ಯ ಒದಗಿಸುತ್ತಿದೆ, ಬಹುತೇಕ ಸಿಬ್ಬಂದಿ ನೇಮಕ ಮಾಡಿದೆ. ಆದರೂ ಒಂದು ತಾಲೂಕು ಆಸ್ಪತ್ರೆಯಲ್ಲಿ 10- 15 ಹೆರಿಗೆ ಆಗುತ್ತದೆ ಎಂದರೆ ಇದು ತೀರ ನಿರ್ಲಕ್ಷೃ, ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮತ್ತು ಹರೀಶ್ ಪೂಂಜ ಅವರು ಕೂಡ ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಬೇಕು. ರೋಗಿಗಳಿಗೆ ಅವಶ್ಯಕವಿರುವ ಔಷಧ ಪೂರ್ಣ ಪ್ರಮಾಣದಲ್ಲಿ ದೊರೆಯುವಂತೆ ಕ್ರಮವಹಿಸಬೇಕು. ರೋಗಿಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಬೇಕೆಂದರು. ಆಸ್ಪತ್ರೆಗೆ ಬೇಕಾದ ಕಟ್ಟಡ, ಇನ್ನಿತರ ಸೌಲಭ್ಯಗಳ ಬೇಡಿಕೆ ನೀಡುವಂತೆ ಸೂಚಿಸಿದರು.
ತಾಲೂಕು ಆಸ್ಪತ್ರೆಯಲ್ಲಿ ಮೂಲಸೌಕರ್ಯ ಹಾಗೂ ಉನ್ನತೀಕರಣ ಕಾಮಗಾರಿಗಳ ಶಿಲಾನ್ಯಾಸ ಶಾಸಕ ಹರೀಶ್ ಪೂಂಜ ನೇರವೇರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಪಪಂ ಅಧ್ಯಕ್ಷ ಜಯಾನಂದ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಕಾಶಿಪಟ್ಣ, ನಾಗೇಶ್ ಗೌಡ, ಪಪಂ ಸದಸ್ಯ ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮೀಣ ಜನರ ಉನ್ನತಿಗೆ ಉದ್ಯಮಶೀಲತೆ ಅಗತ್ಯ: ಡಾ.ಸತೀಶ್ಚಂದ್ರ ಎಸ್. ಅನಿಸಿಕೆ