ಜಲಸಂಘರ್ಷಕ್ಕೆ ಒಗ್ಗಟ್ಟು: ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸರ್ವಪಕ್ಷ ಸಭೆ ನಿರ್ಣಯ

CM Front
Published on

ಬೆಂಗಳೂರು: ಮೇಕೆದಾಟು, ಮಹದಾಯಿ ಸೇರಿ ಅಂತಾರಾಜ್ಯ ಜಲವಿವಾದಗಳಿಗೆ ಸಂಬಂಧಿಸಿ ಬಹುಕಾಲದಿಂದ ರಾಜ್ಯಕ್ಕೆ ತೊಡಕಾಗಿರುವ ಅಡೆತಡೆ ನಿವಾರಿಸುವ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆ ಒಮ್ಮತಾಭಿಪ್ರಾಯಕ್ಕೆ ಬಂದಿದೆ.

ಬಹುಕಾಲದಿಂದ ಬಾಕಿಯಾಗಿರುವ ಯೋಜನೆಗಳಿಗೆ ವೇಗ ಕೊಡಬೇಕು. ಕಾನೂನು, ಆಡಳಿತಾತ್ಮಕ ಹಾಗೂ ತಾಂತ್ರಿಕ ಅಡಚಣೆಗೆ ಪರಿಹಾರ ಮತ್ತು ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದ್ದು, ಆ ಪ್ರಕಾರ ಸರ್ಕಾರ ಮುಂದುವರಿಯುತ್ತದೆ, ಅಗತ್ಯ ಬಿದ್ದರೆ ಸರ್ವಪಕ್ಷ ನಿಯೋಗದೊಂದಿಗೆ ದೆಹಲಿಗೆ ತೆರಳುತ್ತೇವೆ ಎಂದು ಸಭೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ದೇವೇಗೌಡರ ನೇತೃತ್ವ: ಮುಂದಿನ ವಾರ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ದೆಹಲಿಗೆ ತೆರಳಿ ಕೇಂದ್ರ ಜಲಶಕ್ತಿ ಸಚಿವರಿಗೆ ಈ ಸಭೆಯ ನಿರ್ಣಯವನ್ನು ನಿವೇದಿಸಲಿದ್ದಾರೆ. ವಿಧಾನ ಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ಖುದ್ದು ಸಿಎಂ ದೆಹಲಿಗೆ ತೆರಳಿ ರಾಜ್ಯದ ಕೋರಿಕೆ ಪ್ರಸ್ತಾಪಿಸಲಿದ್ದಾರೆ. ಅಷ್ಟಾಗಿಯೂ ರಾಜ್ಯದ ಪರ ನಿಲುವು ಹೊರಬೀಳದಿದ್ದರೆ ಮಾಜಿ ಪ್ರಧಾನಿ ದೇವೇಗೌಡರ ಮಾರ್ಗದರ್ಶನದಲ್ಲಿ ದೆಹಲಿಗೆ ಸರ್ವಪಕ್ಷ ನಿಯೋಗ ತೆರಳಲು ತೀರ್ವನಿಸಲಾಗಿದೆ.

ಸಿದ್ದರಾಮಯ್ಯ ಆಗ್ರಹ: 2011ರಲ್ಲಿ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಬಗೆಗೆ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದ್ದೇವೆ, ಅದು ಮುಗಿಯುವ ವರೆಗೆ ನ್ಯಾಯಮಂಡಳಿ ನೀಡಿರುವ ತೀರ್ಪು ಕುರಿತು ನೋಟಿಫಿಕೇಷನ್ ಹೊರಡಿಸಬಾರದು ಎಂದು ಹೇಳಿತ್ತು. ಇದಾಗಿ ಹನ್ನೊಂದು ವರ್ಷ ಕಳೆದಿದೆ, ಒಂದೆರೆಡು ಬಾರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದದ್ದು ಬಿಟ್ಟರೆ, ರಾಜ್ಯ ಬಿಜೆಪಿ ಸರ್ಕಾರ ಹೆಚ್ಚಿನ ಒತ್ತಡ ಹಾಕಿಲ್ಲ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೊಷಣೆ ಮಾಡಬೇಕಿತ್ತು ಎಂದು ಸಿದ್ದರಾಮಯ್ಯ ಸಭೆ ಬಳಿಕ ಅಭಿಪ್ರಾಯ ವ್ಯಕ್ತಪಡಿಸಿದರು.

ಕೂಡಲೇ ಕೇಂದ್ರ ಸರ್ಕಾರದ ಬಳಿಗೆ ನಿಯೋಗವನ್ನು ಕೊಂಡೊಯ್ಯುವ ಮೂಲಕ ಪ್ರಧಾನ ಮಂತ್ರಿ ಹಾಗೂ ಜಲ ಸಂಪ ನ್ಮೂಲ ಸಚಿವರನ್ನು ಭೇಟಿ ಮಾಡಬೇಕು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಹೇಳಿದ್ದೇವೆ. ಸರ್ಕಾರ ನಮ್ಮ ನಿಲುವನ್ನು ಒಪ್ಪಿದೆ ಎಂದರು.

ಕೇಸ್ ವಾಪಸ್​ಗೆ ಒತ್ತಾಯ: ಮೇಕೆದಾಟು ಪಾದಯಾತ್ರೆ ಮಾಡಿದ್ದಕ್ಕೆ ವಿನಾಕಾರಣ ಮೊಕದ್ದಮೆ ದಾಖಲಿಸಿದ್ದೀರಿ, ನಾವು ಜನರ ಪರವಾಗಿ ಹೋರಾಟ ಮಾಡಿದ್ದರೂ ಕೇಸ್ ಹಾಕಿದ್ದು ಯಾಕೆ ಎಂದು ಪ್ರತಿಪಕ್ಷದ ನಾಯಕರು ಸರ್ಕಾರವನ್ನು ಪ್ರಶ್ನಿಸಿದರು.

ಪ್ರತಿಪಕ್ಷದ ಆಕ್ಷೇಪಣೆಗಳು

  • ನದಿಗಳ ಜೋಡಣೆಯಿಂದ ರಾಜ್ಯಕ್ಕೆ ಭಾರಿ ಅನ್ಯಾಯವಾಗುತ್ತದೆ, ಹೀಗಾಗಿ ಆಕ್ಷೇಪಣೆ ಸಲ್ಲಿಸಲು ಆಗ್ರಹ.
  • ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರಲು ಸುಲಭ ಮಾಗೋಪಾಯದ ಬಗ್ಗೆ ರಾಜ್ಯದ ಪರ ವಕೀಲರು ಸಲಹೆ ಮಾಡಬೇಕು. ಇಲ್ಲದ ಅಡಚಣೆಗಳ ಬಗ್ಗೆ ಹೇಳಿ ಗೊಂದಲ ಸೃಷ್ಟಿಸಬಾರದು.
  • ರಾಜಕೀಯ ಕಾರಣಗಳಿಗಾಗಿ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತ ಬಂದಿದೆ. ಮುಂದೆಯೂ ವ್ಯಕ್ತಪಡಿಸುತ್ತಾರೆ. ಅವರನ್ನು ಕಾಯ್ದುಕೊಂಡು ಕೂರಲು ಆಗುವುದಿಲ್ಲ.
  • ಎರಡು ರಾಜ್ಯಗಳ ನಡುವೆ ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಬೇಕೆಂದು ಹೇಳಿದ್ದ ಕೇಂದ್ರ ಸಚಿವ ಗಜೇಂದ್ರಸಿಂಗ್ ಶೆಖಾವತ್ ಹೇಳಿಕೆ ಸರ್ಕಾರದಿಂದಲೇ ಖಂಡಿಸುವಂತೆ ಒತ್ತಾಯ.

ಮೇಕೆದಾಟು ಯೋಜನೆಗೆ ಪರಿಸರ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಲು ಆದ್ಯತೆ ನೀಡಲಾಗುತ್ತದೆ. ಮಹದಾಯಿ ವಿಚಾರದಲ್ಲಿ ಶೀಘ್ರವೇ ಅನುಮತಿ ಪಡೆದು ಕೆಲಸ ಆರಂಭಿಸಲಾಗುತ್ತದೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಸಂಬಂಧ 2-3 ವಿಚಾರಣೆಯಲ್ಲೇ ಅಧಿಸೂಚನೆ ಹೊರಡಿಸಲು ಅವಕಾಶ ಸಿಗಬಹುದು. ನದಿ ಜೋಡಣೆ ವಿಚಾರದಲ್ಲಿ ಗೋದಾವರಿ ನೀರು ಕಾವೇರಿಗೆಷ್ಟು, ಕೃಷ್ಣಾಗೆಷ್ಟು ಪೆನ್ನಾರ್​ಗೆಷ್ಟು ಎಂದು ಹಂಚಿಕಯಾಗಲಿ. ಆನಂತರ ಒಪು್ಪತ್ತೇವೆ. | ಬಸವರಾಜ ಬೊಮ್ಮಾಯಿ ಸಿಎಂ ಎರಡೂ ಕಡೆ ಬಿಜೆಪಿ ಸರ್ಕಾರವೇ ಇದೆ. ಹಾಗಾಗಿ ತಕ್ಷಣ ಪರಿಸರ ಅನು ಮತಿ ಪತ್ರ ಪಡೆಯಿರಿ ಎಂದು ಹೇಳಿದ್ದೇವೆ. ಡಬಲ್ ಇಂಜಿನ್ ಸರ್ಕಾರ ಇದೆ, ಪಡೆಯಲಿ. | ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ. ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಮಾತ್ರ ಬಾಕಿ ಉಳಿದಿದೆ. ಕೇಂದ್ರದ ಮೇಲೆ ಒತ್ತಡ ತರಲಿ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಮಾಜಿಗಳ ನೆರವು: ಸಭೆಗೆ ಮೂವರು ಮಾಜಿ ಜಲಸಂಪ ನ್ಮೂಲ ಸಚಿವರನ್ನು ಆಹ್ವಾನಿ ಸಲಾಗಿತ್ತು. ಎಚ್.ಕೆ. ಪಾಟೀಲ್, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ತಮ್ಮ ಅನುಭವ ಹಂಚಿಕೊಂಡು ಮುಂದೆ ಆಗಬೇಕಾದ ಪ್ರಯತ್ನದ ಬಗ್ಗೆ ಸಲಹೆ ನೀಡಿದರು.

ನಾಲ್ಕಂಶಗಳಿಗೆ ಪ್ರಧಾನ ಆದ್ಯತೆ

ನಾಲ್ಕಂಶದ ಮೇಲೆ ನಡೆದ ಸಭೆಯಲ್ಲಿ ಪ್ರತಿಪಕ್ಷಗಳ ನಾಯಕರು ತಮ್ಮ ಇಂಗಿತ ವ್ಯಕ್ತಪಡಿಸಿದರು. ಕಾನೂನು ತಜ್ಞರು ಪ್ರಸ್ತುತ ಹಂತಗಳು, ಮುಂದಿನ ನಿರೀಕ್ಷೆಗಳ ಬಗ್ಗೆ ವಿವರಿಸಿದರು. ಸರ್ಕಾರ ಕೂಡ ತನ್ನ ನಿಲುವು ಖಚಿತಪಡಿಸಿದೆ.
  1. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದಿರುವ ಮೇಕೆದಾಟು ಕುರಿತ ರಾಜ್ಯದ ಪ್ರಸ್ತಾವನೆ ಶೀಘ್ರವಾಗಿ ಪರಿಗಣನೆಯಾಗಬೇಕಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಈ ವೇಳೆ ಗಂಭೀರ ವಿಚಾರವೊಂದನ್ನು ಸಭೆಯ ಗಮನಕ್ಕೆ ತಂದ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ, ರಾಜ್ಯದ ಪ್ರಸ್ತಾವನೆ ಐದಾರು ಬಾರಿ ಚರ್ಚೆಯಾಗಿದೆ, ಅಂತಿಮ ಸಭೆ ಕರೆಯಲು ತೀರ್ವನವಾಗಿದೆ. ಆದರೆ, ಸಭೆಯ ನಡಾವಳಿಯಲ್ಲಿ ದಾಖಲಾಗಿಲ್ಲ. ಅದನ್ನು ನಡಾವಳಿಯಲ್ಲಿ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು. ಪರಿಸರ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳುವ ಬಗ್ಗೆ ಕೂಡ ನಮ್ಮ ಪ್ರಯತ್ನ ಮುಂದುವರಿಯಬೇಕು ಎಂದು ಒತ್ತಾಯ ಕೇಳಿಬಂತು. ಕೇಂದ್ರ ಜಲಶಕ್ತಿ ಸಚಿವರಿಗೆ ಎಲ್ಲ ವಿಚಾರ ತಿಳಿಸಿ ಆದಷ್ಟು ಬೇಗನೆ ಕಾವೇರಿ ನೀರು ನಿರ್ವಹಣಾ ಮಂಡಳಿ ಸಭೆ ನಡೆಸಲು ಪ್ರಯತ್ನಿಸುವುದಾಗಿ ಸಿಎಂ ತಿಳಿಸಿದರು.
  2. ಸಭೆಯಲ್ಲಿ 2ನೇ ಪ್ರಮುಖ ವಿಷಯವಾಗಿ ಮಹದಾಯಿ ಬಗ್ಗೆ ಚರ್ಚೆಯಾಯಿತು. ರಾಜ್ಯಕ್ಕೆ ಮಹದಾಯಿ ನೀರಿನ ಹಂಚಿಕೆಯಾಗಿದೆ, ಅಧಿಸೂಚನೆಯಾಗಿದೆ. ಅದರ ಆಧಾರದ ಮೇಲೆ ಪರಿಸರ ನಿರಾಕ್ಷೇಪಣಾ ಪತ್ರ ಪಡೆದು ಕೆಲಸ ಆರಂಭಿಸಬೇಕೆಂದು ಪ್ರತಿಪಕ್ಷದ ಮುಖಂಡರು ಒತ್ತಾಯಿಸಿದರು. ಈಗಾಗಲೇ ಆಗಿರುವ ಪ್ರಯತ್ನಗಳ ಬಗ್ಗೆ ಮುಖ್ಯಮಂತ್ರಿ ಸಭೆಗೆ ತಿಳಿಸಿದರು.
  3. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಬಗ್ಗೆ ಚರ್ಚೆ ನಡೆದು ಅಧಿಸೂಚನೆ ಆಗಬೇಕಾಗಿರುವ ಬಗ್ಗೆ ವಿಚಾರ ವಿನಿಮಯ ನಡೆಯಿತು. 2011ಕ್ಕೆ ತಡೆಯಾಜ್ಞೆ ಬಂದಿತ್ತು, 2013ರಲ್ಲಿ ಅಂತಿಮ ತೀರ್ಮಾನ ಬಂದ ಮೇಲೂ ಆಂಧ್ರ ವಿರೋಧ ವ್ಯಕ್ತಪಡಿಸಿತು. ತೆಲಂಗಾಣ ಹೊಸ ರಾಜ್ಯ ಆದ ಮೇಲೆ ಆಕ್ಷೇಪಿಸಿತು. ಈ ನಡುವೆ ನ್ಯಾಯಾಧೀಶರು ಪ್ರಕರಣದಿಂದ ಹಿಂದೆ ಸರಿದಿರುವ ವಿಷಯ ಪ್ರಸ್ತಾಪಿಸಿದ ಸಿಎಂ, ಹೊಸ ಜಡ್ಜ್ ನೇಮಕ ಆಗಬೇಕಿದೆ, ಶೀಘ್ರ ನೇಮಿಸುವಂತೆ ಮತ್ತೆ ಒತ್ತಾಯ ಮಾಡುತ್ತೇವೆ ಎಂದರು.
  4. ಗೋದಾವರಿ- ಕೃಷ್ಣಾ- ಕಾವೇರಿ- ಪೆನ್ನಾರ್ ನದಿ ಜೋಡಣೆ ವಿಷಯದಲ್ಲಿ, ನಮ್ಮ ನಿಲುವು ಸ್ಪಷ್ಟವಿದೆ ಎಂದು ಸಿಎಂ ಸಭೆಯ ಗಮನಕ್ಕೆ ತಂದರು. ನಮ್ಮ ರಾಜ್ಯದ ಪಾಲನ್ನು ಪಡೆದ ಮೇಲೆ ಒಪ್ಪಿಗೆ ಕೊಡಲಾಗುವುದೆಂದು ನಾನೇ ಹೇಳಿದ್ದೆ, ಈಗಲೂ ಅದೇ ನಿಲುವಿದೆ ಎಂದು ತಿಳಿಸಿದರು. ಸರ್ವಪಕ್ಷ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ಜಲ ವಿವಾದದ ಎಲ್ಲ ವಿಚಾರದಲ್ಲೂ ಪ್ರಯತ್ನ ಮಾಡಿದ್ದೇವೆ, ಮುಂದುವರಿದಿದ್ದೇವೆ. ಆದರೆ ಇನ್ನಷ್ಟು ತೀವ್ರಗತಿಯಲ್ಲಿ ಪ್ರಯತ್ನ ಮಾಡಬೇಕೆಂದು ಪ್ರತಿಪಕ್ಷದವರು ಹೇಳಿದ್ದಾರೆ. ಆ ಕೆಲಸ ಮಾಡುತ್ತೇವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net