

ಅನ್ಸಾರ್ ಇನೋಳಿ ಉಳ್ಳಾಲ
ಮನೆಯಂಗಳದವರೆಗೆ ರಸ್ತೆ ಬೇಕೆನ್ನುವ ದಶಕಗಳ ಕನಸು ನನಸಾಗಿದೆ. ಮನವಿ ಪತ್ರ ಹಿಡಿದು ಅವರಿವರ ಕಾಲಿಗೆ ಬೀಳುವುದಕ್ಕೂ ಮುಕ್ತಿ ಸಿಕ್ಕಿದೆ. ರಸ್ತೆಗಾಗಿ ಜಮೀನ್ದಾರರು ಜಾಗ ಬಿಟ್ಟುಕೊಟ್ಟು ಅಡಕೆ ಮರಗಳಿಗೆ ಕೊಡಲಿ ಹಾಕಿದ್ದಾರೆ. ಸ್ಥಳೀಯರ ಬಾಯಲ್ಲೀಗ ಶಾಸಕ ಖಾದರ್ ಅವರದ್ದೇ ಗುಣಗಾನ. ಇದು ಇರಾ ಗ್ರಾಮದ ಮಾದುಪಳ್ಳ ಊರಿನ ವಾಸಿಗರ ಸಂತಸದ ಕಥೆ!
ಇರಾ ಮೋಂತಿಮಾರು ಪಡ್ಪು, ಮಾದುಪಳ್ಳ, ಕಂಡತಟ್ಟು ಕೊಡಂಗೆ ನಡುವೆ ಸುಮಾರು ಮೂರು ಕಿ.ಮೀ. ದೂರವಿದೆ. ಕಂಡತಟ್ಟುವಿನಲ್ಲಿ ನಿವೇಶನರಹಿತರಿಗಾಗಿ ಜಮೀನು ಕೂಡ ಮೀಸಲಿಡಲಾಗಿದೆ. ಆದರೆ ಇಲ್ಲಿ ರಸ್ತೆ ಇಲ್ಲದ ಕಾರಣ ನಿವೇಶನ ಹಂಚಿಕೆ ಪ್ರಕ್ರಿಯೆ ಬಗ್ಗೆ ಗ್ರಾಮ ಪಂಚಾಯಿತಿ ಕೂಡ ತಲೆ ಕೆಡಿಸಿಕೊಂಡಿಲ್ಲ. ಮಾದುಪಳ್ಳ ಕಂಡತಟ್ಟುವಿನಲ್ಲಿ 32 ಮನೆಗಳೂ ಇವೆ. ಇದು ಗ್ರಾಮದ ಒಳಭಾಗದಲ್ಲಿದ್ದು ಖಾಸಗಿ ಜಾಗವೇ ಇದ್ದು ಗುಡ್ಡಗಾಡು, ತೋಟಗಳಿಂದ ನಿರ್ಮಿತವಾಗಿದೆ. ರಸ್ತೆ ಇಲ್ಲದ ಕಾರಣ ಈ ಭಾಗದ ನಿವಾಸಿಗರು ಗುಡ್ಡಗಾಡು, ತೋಟ ದಾಟಿ ಮೂರು ಕಿ.ಮೀ. ದೂರದ ಮುಖ್ಯ ರಸ್ತೆಗೆ ಬರಲು ಹರಸಾಹಸ ಪಡುತ್ತಿದ್ದರು.
ಕಾಯಿಲೆ ಬಂದವರನ್ನು ಆಸ್ಪತ್ರೆ ಸಾಗಿಸುವುದು, ಮಕ್ಕಳು, ವೃದ್ಧರು ಮುಖ್ಯ ರಸ್ತೆಗೆ ತಲುಪಲು ಪಡುತ್ತಿದ್ದ ನರಕಯಾತನೆ ಯಾರಿಗೂ ಬೇಡ ಎಂದೆನಿಸುತ್ತಿತ್ತು. ಅದರಲ್ಲೂ ತೋಟದ ನಡುವೆ ಸಿಗುತ್ತಿದ್ದ ದೊಡ್ಡ ನಾಲೆಯಲ್ಲಿ ಅಡಕೆ ಮರಗಳಿಂದ ನಿರ್ಮಿಸಲಾಗಿದ್ದ (ಪಾಲ) ಸೇತುವೆ ದಾಟುವುದು ಸವಾಲಾಗಿತ್ತು. ಮಳೆಗಾಲದಲ್ಲಿ ಜಾರಿ ನಾಲೆಗೆ ಬಿದ್ದರೆ ಹರಿಯುವ ನೀರಲ್ಲಿ ಕೊಚ್ಚಿಕೊಂಡು ಹೋಗುವ ಅಪಾಯವೂ ಇಲ್ಲಿತ್ತು.
ಜಮೀನು ಬಿಟ್ಟುಕೊಡಲು ಮುಂದಾಗಿದ್ದ ಸ್ಥಳೀಯರು 40 ವರ್ಷಗಳಿಂದ ಮನವಿ ಪತ್ರ ಹಿಡಿದು ಜನಪ್ರತಿನಿಧಿಗಳ ಮನೆಬಾಗಿಲು ತಟ್ಟಲು ಶುರು ಮಾಡಿದ್ದರು. ಆಗಿನ ಪಂಚಾಯಿತಿ ಅಧ್ಯಕ್ಷ ಕಿನ್ನಿಮಜಲ್ ಬಾಳಿಕೆ ಗೋಪಾಲ ಆಳ್ವ ರಸ್ತೆಗೆ ಬೇಕಾದಷ್ಟು ತಮ್ಮ ತೋಟವನ್ನೇ ಬಿಟ್ಟುಕೊಡಲು ಮುಂದಾಗಿದ್ದು, ಜನಪ್ರತಿನಿಧಿಗಳ ಬಳಿ ಅಲೆದಾಡಿದ್ದರು. ಬಳಿಕ ಅವರ ಪುತ್ರ ಪುಷ್ಪರಾಜ್ ಆಳ್ವ ಕಲ್ಲಾಡಿ ಬಾಳಿಕೆ ತಂದೆ ಕನಸು ನನಸಾಗಿಸಲು ಮುಂದಾಗಿ ಸ್ಥಳೀಯರ ನೆರವಿನಿಂದ ತಾವೇ ರಸ್ತೆ ನಿರ್ಮಿಸಿದ್ದರು. ಆದರೆ ನಾಲೆಗೆ ಸೇತುವೆ ನಿರ್ಮಾಣಕ್ಕೆ ದೊಡ್ಡ ಮೊತ್ತ ಬೇಕಾದ ಕಾರಣ ಹಿಂದಿನ ಸಂಸದರ ಬಳಿ ಮನವಿಯೊಂದಿಗೆ ಹೋಗಿ ನಕಾರಾತ್ಮಕ ಉತ್ತರ ಸಿಕ್ಕಾಗ ಮನವಿ ಪತ್ರ ಅಲ್ಲೇ ಹರಿದು ಬಂದಿದ್ದರು. ಬಳಿಕ ಖಾದರ್ ಬಳಿ ಹೋಗಿದ್ದರು. ಕಾಂಗ್ರೆಸ್ ಮುಖಂಡ ಪ್ರಶಾಂತ್ ಕಾಜವ ಮತ್ತು ಚಂದ್ರಹಾಸ ಕರ್ಕೇರ ಸಹಕಾರ ನೀಡಿದ್ದರು.
ಪುಷ್ಪರಾಜ್ ಆಳ್ವರ ಅಲೆದಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಎರಡು ವರ್ಷದೊಳಗೆ ರಸ್ತೆಗೆ ಮುಖ್ಯವಾಗಿ ಬೇಕಾಗಿದ್ದ ಸೇತುವೆ ಮತ್ತು ಕಿಂಡಿ ಅಣೆಕಟ್ಟು ನಿರ್ಮಿಸಿಕೊಡುವ ಭರವಸೆ ಹಾಲಿ ಸ್ಪೀಕರ್ ಯು.ಟಿ.ಖಾದರ್ ಈಡೇರಿಸಿದ್ದಾರೆ. ಈ ರಸ್ತೆಗಾಗಿ ಪುಷ್ಪರಾಜ್ ಆಳ್ವ ಕಲ್ಲಾಡಿ ಬಾಳಿಕೆ ಅವರ ತೋಟದ 190 ಅಡಕೆ ಮರಗಳನ್ನು ಕಡಿಯಲಾಗಿದೆ. ಇನ್ನೂ 30 ಕಡಿಯಲು ಮುಂದಾಗಿದ್ದು, ಅಂದಾಜು 50 ಸೆಂಟ್ಸ್ ಜಮೀನು ತ್ಯಾಗ ಮಾಡಿದ್ದಾರೆ.
ರಸ್ತೆ ಪ್ರವೇಶದಲ್ಲೇ ಇರುವ ಜಮೀನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಂಪಿಲ ಬಿಟ್ಟುಕೊಟ್ಟಿದ್ದಾರೆ. ಸಂಜೀವ ರೈ ಅವರು 100 ಮೀ. ಉದ್ದ, 21 ಅಡಿ ಅಗಲ ಜಾಗ ಬಿಟ್ಟು ಕೊಟ್ಟರೆ, ರಾಮಣ್ಣ ಆಳ್ವ ತಮ್ಮ ತೋಟದಲ್ಲಿದ್ದ 11 ಅಡಕೆ ಮರಗಳನ್ನು ಕಡಿದಿದ್ದಲ್ಲದೆ, ಕೆರೆಯನ್ನೂ ಬಿಟ್ಟು ಕೊಟ್ಟಿದ್ದಾರೆ. ಈ ಕೆರೆ ಮುಚ್ಚಲು ಪುಷ್ಪರಾಜ್ ಆಳ್ವ ಅವರಿಗೆ ಸ್ಥಳೀಯರಾದ ಇಬ್ರಾಹಿಂ, ಪ್ರದೀಪ್, ಶಾಲಿನಿ ಎಂಬುವರು ಸಹಕಾರ ನೀಡಿದ್ದಾರೆ. ರಸ್ತೆ ನಿರ್ಮಾಣ, ಕೆರೆ ಮುಚ್ಚುವ ಕೆಲಸಕ್ಕೆ ಪುಷ್ಪರಾಜ್ ಆಳ್ವ 8.74 ಲಕ್ಷ ರೂ. ಖರ್ಚು ಮಾಡಿದ್ದು, ಸಂಬಂಧಿ ಜಯಪ್ರಕಾಶ್ ಆಳ್ವ ಸುಳ್ಯ ಧನಸಹಾಯ ಮಾಡಿದ್ದಾರೆ. ಗ್ರಾಪಂನಿಂದ 43 ಸಾವಿರ ರೂ. ಅನುದಾನ ಸಿಕ್ಕಿದೆ. ರಸ್ತೆ ನಿರ್ಮಾಣದಿಂದ ಮೋಂತಿಮಾರು ಪಡ್ಪು, ಇರಾ ಮಾದುಪಳ್ಳ, ಕಂಡತಟ್ಟುವಿಗೆ ನೇರ ಸಂಪರ್ಕ ಆಗಿದ್ದು ಮುಂದಕ್ಕೆ ಕಾಂಕ್ರೀಟ್ಗೊಳಿಸುವ ಕೆಲಸ ನಡೆಯಬೇಕಿದೆ.
ನನ್ನ ತಂದೆ ರಸ್ತೆಗಾಗಿ ಸಾಕಷ್ಟು ಅಲೆದಾಟ ನಡೆಸಿದ್ದರು. ತಾಯಿಗೆ ಅನಾರೋಗ್ಯ ಕಾಡಿದಾಗ ಕಂಗಿನ(ಅಡಕೆ) ಪಾಲದಲ್ಲಿ ಎತ್ತಿಕೊಂಡು ಹೋಗಿದ್ದೆವು. ಸ್ಥಳೀಯರು ಜಮೀನು ಬಿಟ್ಟುಕೊಟ್ಟಿದ್ದಾರೆ. ತೋಟ, ಹಣಕ್ಕಿಂತ ತಂದೆಯ ನೆನಪು ಉಳಿಯಲಿದೆ. ಖಾದರ್ ಅವರು ನೀಡಿದ ಭರವಸೆ ಈಡೇರಿಸಿದ್ದು, 32 ಮನೆಗಳಿಗೆ ರಸ್ತೆ, ಮೋಂತಿಮಾರು ಪಡ್ಪು ಇರಾ ಮಾದುಪಳ್ಳ, ಕಂಡತಟ್ಟು ನೇರ ಸಂಪರ್ಕ ಲಭಿಸಿದೆ. ಪುಷ್ಪರಾಜ್ ಆಳ್ವ ಕಲ್ಲಾಡಿ ಬಾಳಿಕೆ, ರಸ್ತೆ ನಿರ್ಮಾಣದ ಪ್ರಮುಖರು ಗ್ರಾಮೀಣ ಪ್ರದೇಶದಲ್ಲಿ ಒಳಭಾಗದ ಜನರ ಸಂಕಷ್ಟ ಯಾರಿಗೂ ಗೊತ್ತಿರುವುದಿಲ್ಲ. ಇಲ್ಲಿ ರಸ್ತೆ ಬೇಡಿಕೆ 40 ವರ್ಷ ಹಿಂದಿನದ್ದು. ಯು.ಟಿ.ಖಾದರ್ ಶಾಸಕರಾಗಿ ಬಂದ ಬಳಿಕ ಗ್ರಾಮಕ್ಕೆ ಸಾಕಷ್ಟು ಅನುದಾನ ಬಂದಿದ್ದು, ಹಲವು ಬೇಡಿಕೆ ಈಡೇರಿಸಿದ್ದಾರೆ. ಇಲ್ಲಿನ ಸೇತುವೆ ಮತ್ತು ಕಿಂಡಿ ಅಣೆಕಟ್ಟು ಗ್ರಾಮದ ಅಭಿವೃದ್ಧಿಯ ಒಂದು ಭಾಗ. ರಝಾಕ್ ಕುಕ್ಕಾಜೆ, ಮಾಜಿ ಅಧ್ಯಕ್ಷರು, ಇರಾ ಗ್ರಾಮ ಪಂಚಾಯಿತಿ