ಶೂಟಿಂಗ್ ಕನಸಿಗಾಗಿ ಪತ್ನಿಯ ಆಭರಣ ಮಾರಿದ್ದ ಸಿಂಘರಾಜ್‌ಗೆ ಕಂಚಿನ ಹಾರ!

shoot web
Published on

ಟೋಕಿಯೊ: ಶೂಟರ್ ಸಿಂಘರಾಜ್ ಅದಾನ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಗುರಿ ಇಟ್ಟರು. ಪೋಲಿಯೊ ಪೀಡಿತರಾಗಿರುವ 39 ವರ್ಷದ ಸಿಂಘರಾಜ್ ಪುರುಷರ 10 ಮೀಟರ್ ಏರ್ ಪಿಸ್ತೂಲ್ (ಪಿ1) ಎಸ್‌ಎಚ್1 ವಿಭಾಗದಲ್ಲಿ ಒಟ್ಟು 216.8 ಅಂಕ ಕಲೆಹಾಕುವ ಮೂಲಕ 3ನೇ ಸ್ಥಾನ ಗಳಿಸಿ ಕಂಚಿಗೆ ಕೊರಳೊಡ್ಡಿದರು.

8 ಸ್ಪರ್ಧಿಗಳ ಫೈನಲ್‌ಗೆ 6ನೇ ಸ್ಥಾನದೊಂದಿಗೆ ಅವರು ಪ್ರವೇಶ ಪಡೆದಿದ್ದರು. ಈ ಸ್ಪರ್ಧಿಯಲ್ಲಿ ಭಾರತದ ಮತ್ತೋರ್ವ ಶೂಟರ್ ಮನೀಷ್ ನರ್ವಾಲ್ ಅರ್ಹತಾ ಸುತ್ತಿನಲ್ಲಿ ಒಟ್ಟು 575 ಅಂಕ ಗಳಿಸಿ ಅಗ್ರಸ್ಥಾನದೊಂದಿಗೆ ಫೈನಲ್‌ಗೇರಿದ್ದರೂ, 7ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಹಾಲಿ ಚಾಂಪಿಯನ್ ಚೀನಾದ ಚಾವೊ ಯಂಗ್ (237.9) ಚಿನ್ನ ಮತ್ತು ಹುವಾಂಗ್ ಕ್ಸಿಂಗ್ (237.5) ರಜತ ಪದಕ ಜಯಿಸಿದರು.

ಒಂದು ಕೈ ಅಥವಾ ಕಾಲು ವೈಕಲ್ಯ ಹೊಂದಿರುವವರ ಈ ಸ್ಪರ್ಧೆಯಲ್ಲಿ ಶೂಟರ್‌ಗಳು ಒಂದೇ ಕೈಯಲ್ಲಿ ಪಿಸ್ತೂಲ್ ಹಿಡಿದು ಶೂಟ್ ಮಾಡಬೇಕಾಗಿತ್ತು. ಕುಳಿತು ಅಥವಾ ನಿಂತು ಶೂಟಿಂಗ್ ಮಾಡಬಹುದಾಗಿತ್ತು. 4 ವರ್ಷದ ಹಿಂದಷ್ಟೇ ಶೂಟಿಂಗ್ ಕಲಿಯಲಾರಂಭಿಸಿದ್ದ ಹರಿಯಾಣದ ಬಹದೂರಗಢದ ಸಿಂಘರಾಜ್‌ಗೆ ಇದು ಮೊದಲ ಪ್ಯಾರಾಲಿಂಪಿಕ್ಸ್ ಆಗಿತ್ತು. ಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಒಲಿದ 2ನೇ ಪದಕ ಇದಾಗಿದೆ. ಈ ಮುನ್ನ ಅವನಿ ಲೇಖರ ಚಿನ್ನಕ್ಕೆ ಗುರಿ ಇಟ್ಟಿದ್ದರು. ರಿದಾಬಾದ್‌ನ ಸೈನಿಕ ಶಾಲಾ ಅಧ್ಯಕ್ಷರಾಗಿದ್ದ ಸಿಂಘರಾಜ್ ಅವರ ಅಜ್ಜ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಮತ್ತು ಬ್ರಿಟಿಷ್ ಇಂಡಿಯನ್ ಆರ್ಮಿಯೊಂದಿಗೆ 2ನೇ ಮಹಾಯುದ್ಧದಲ್ಲೂ ಪಾಲ್ಗೊಂಡಿದ್ದರು.

ಸಿಂಘರಾಜ್ ಅದಾನ ಅವರ ಶೂಟಿಂಗ್ ಕನಸು ನನಸಾಗಿಸುವ ಸಲುವಾಗಿ ಅವರ ಪತ್ನಿ ತಮ್ಮ ಆಭರಣಗಳನ್ನು ಮಾರಿ ಹಣ ಹೊಂದಿಸಿದ್ದರು. 35ನೇ ವಯಸ್ಸಿನಲ್ಲಿ ಶೂಟಿಂಗ್ ಕಲಿಯಲಾರಂಭಿಸಿದ್ದ ಅವರ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಅಭ್ಯಾಸಕ್ಕೆ ಶೂಟಿಂಗ್ ರೇಂಜ್‌ಗೆ ಹೋಗುವ ಸಲುವಾಗಿ ಅವರು ಪ್ರತಿದಿನ 40 ಕಿಮೀ ಪ್ರಯಾಣಿಸಬೇಕಾಗಿತ್ತು. ಅವರ ಪ್ರತಿಭೆಯಿಂದ ಪ್ರಭಾವಿತರಾಗಿದ್ದ ರಾಷ್ಟ್ರೀಯ ಕೋಚ್ ಸುಭಾಶ್ ರಾಣಾ ತರಬೇತಿ ನೀಡಲು ಸಮ್ಮತಿಸಿದ್ದರು. ‘ಶೂಟಿಂಗ್ ದುಬಾರಿ ಕ್ರೀಡೆ. ಇದರಲ್ಲಿ ಮುಂದುವರಿಯುವುದು ಸುಲಭವಲ್ಲ. ನನ್ನ ಶೂಟಿಂಗ್ ಕನಸು ನನಸಾಗಿಸಲು ಪತ್ನಿ ಆಭರಣಗಳನ್ನು ಮಾರಿದ್ದಳು’ ಎಂದು ಸಿಂಘರಾಜ್ 2018ರ ಪ್ಯಾರಾ ಏಷ್ಯನ್ ಗೇಮ್ಸ್ ಕಂಚು ಗೆಲುವಿನ ಬಳಿಕ ಪ್ರಧಾನಿ ಮೋದಿಯವರನ್ನು ಭೇಟಿಯಾದಾಗ ಹೇಳಿದ್ದರು.

ಮನೆಯಲ್ಲೇ ಶೂಟಿಂಗ್ ರೇಂಜ್: ಕರೊನಾ ಹಾವಳಿಯಿಂದಾಗಿ ಶೂಟಿಂಗ್ ರೇಂಜ್‌ಗೆ ತೆರಳಿ ಅಭ್ಯಾಸ ನಡೆಸುವುದು ಕಷ್ಟಕರವೆನಿಸಿದಾಗ ಸಿಂಘರಾಜ್ ಮನೆಯಲ್ಲೇ ಶೂಟಿಂಗ್ ರೇಂಜ್ ನಿರ್ಮಿಸಿದ್ದರು. ಇದರಿಂದಾಗಿ ಲಾಕ್‌ಡೌನ್ ಸಮಯದಲ್ಲಿ ಅವರು ಮನೆಯಲ್ಲೇ ಅಭ್ಯಾಸ ನಡೆಸಿದ್ದರು.

ವಿಶ್ವದಾಖಲೆ ಒಡತಿ ರುಬಿನಾಗೆ ನಿರಾಸೆ

ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಎಸ್‌ಎಚ್1 ವಿಭಾಗದಲ್ಲಿ ಭಾರತದ ರುಬಿನಾ ್ರಾನ್ಸಿಸ್ 128.1 ಅಂಕ ಗಳಿಸಿ 7ನೇ ಸ್ಥಾನದೊಂದಿಗೆ ನಿರಾಸೆ ಅನುಭವಿಸಿದರು. ಈ ಮುನ್ನ ಅರ್ಹತಾ ಸುತ್ತಿನಲ್ಲೂ ಅವರು 7ನೇ ಸ್ಥಾನ ಗಳಿಸಿದ್ದರು. ಮಧ್ಯ ಪ್ರದೇಶದ 22 ವರ್ಷದ ರುಬಿನಾ ಕಳೆದ ಜೂನ್‌ನಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದರು. ಹುಟ್ಟಿನಿಂದಲೇ ಕಾಲಿನ ಅಂಗವೈಕಲ್ಯ ಹೊಂದಿದ್ದ ರುಬಿನಾ, ಮೇನಲ್ಲಿ ಕರೊನಾ ಸೋಂಕಿಗೂ ತುತ್ತಾಗಿದ್ದರು.

ಆರ್ಚರಿಯಲ್ಲಿ ರಾಕೇಶ್‌ಗೆ ನಿರಾಸೆ

ಭಾರತದ ರಾಕೇಶ್ ಕುಮಾರ್ ಆರ್ಚರಿ ಸ್ಪರ್ಧೆಯ ಕ್ವಾರ್ಟರ್​ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಚೀನಾದ ಕ್ಸಿನ್‌ಲಿಯಾಂಗ್ ಆಯಿ ಎದುರು ಸೋಲು ಅನುಭವಿಸಿದರು. ರ‌್ಯಾಂಕಿಂಗ್ ರೌಂಡ್‌ನಲ್ಲಿ 3ನೇ ಸ್ಥಾನ ಗಳಿಸಿ ಗಮನಸೆಳೆದಿದ್ದ ರಾಕೇಶ್, ಚೀನಾ ಬಿಲ್ಗಾರನ ವಿರುದ್ಧ 143-145ರಿಂದ ರೋಚಕ ಸೋಲು ಕಂಡರು. 36 ವರ್ಷದ ರಾಕೇಶ್ ಈ ಮುನ್ನ 16ರ ಘಟ್ಟದಲ್ಲಿ ಸ್ಲೊವೇನಿಯಾದ ಮರಿಯನ್ ಮೆರೆಕಾಕ್ ವಿರುದ್ಧ 111-108ರಿಂದ ಗೆಲುವು ದಾಖಲಿಸಿದ್ದರು.

ತಂಡ ವಿಭಾಗದಲ್ಲಿ ಭವಿನಾಗೆ ಸೋಲು

ಸಿಂಗಲ್ಸ್ ವಿಭಾಗದಲ್ಲಿ ರಜತ ಪದಕ ಜಯಿಸಿದ್ದ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವಿನಾಬೆನ್ ಪಟೇಲ್ ಒಳಗೊಂಡ ಭಾರತ ತಂಡ, ಮಹಿಳೆಯರ ತಂಡ ವಿಭಾಗದ ಕ್ವಾರ್ಟರ್​ಫೈನಲ್‌ನಲ್ಲಿ 0-2ರಿಂದ ಚೀನಾ ವಿರುದ್ಧ ಸೋಲು ಕಂಡಿತು. 4-5 ವಿಭಾಗದ ಸಿಂಗಲ್ಸ್ ಪಂದ್ಯದಲ್ಲಿ ಭವಿನಾ ಚೀನಾದ ಯಿಂಗ್ ರೆೌ ವಿರುದ್ಧ 4-11, 7-11, 6-11ರಿಂದ ಸೋಲು ಕಂಡರು. ಸಿಂಗಲ್ಸ್ ವಿಭಾಗದ ೈನಲ್‌ನಲ್ಲೂ ಭವಿನಾ ಚೀನಾದ ಇದೇ ಆಟಗಾರ್ತಿಯರ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದರು. ಡಬಲ್ಸ್ ವಿಭಾಗದಲ್ಲಿ ಭವಿನಾ-ಸೋನಲ್ ಪಟೇಲ್ ಜೋಡಿ ಚೀನಾದ ಯಿಂಗ್-ಝಂಗ್ ಜೋಡಿ ವಿರುದ್ಧ 2-11, 4-11, 2-11ರಿಂದ ಸೋಲು ಕಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net